ಬಳ್ಳಾರಿಯಲ್ಲಿ ಭೀಕರ ಬರದ ಹೊಡೆತ: 67,236 ಹೆಕ್ಟೇರ್ ಬೆಳೆ ಹಾನಿ, ರೈತರಿಗೆ ಪರಿಹಾರ! ಡಿಸಿಎಂ
ಬಳ್ಳಾರಿ: ಈ ಜಿಲ್ಲೆಯೊಂದರಲ್ಲೇ 67,236 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳು ಹಾಗೂ 4,520 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗಿವೆ. ಬರದಿಂದ ಸಂಕಷ್ಟಕ್ಕೀಡಾಗಿರುವ ರೈತರ ಹಿತ ಕಾಪಾಡುವುದು, ಕುಡಿಯುವ ನೀರು, ಉದ್ಯೋಗ, ಜಾನುವಾರುಗಳಿಗೆ ಮೇವು ಒದಗಿಸುವುದಕ್ಕೆ ಸರ್ಕಾರದ ಆದ್ಯತೆಯಾಗಿ ಕೆಲಸ ಮಾಡುತ್ತಿದೆ ಎಂದು ಡಿಸಿಎಂ ಮತ್ತು ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿದರು.
ರಾಜ್ಯದ ಗಣಿ ಜಿಲ್ಲೆಯಾದ ಬಳ್ಳಾರಿ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಬೆಳೆಹಾನಿ ಆಗಿದ್ದು ಕಂಡು ಬಂದಿದೆ. ರೈತರ ಸಮಸ್ಯೆಗಳನ್ನು ಆಲಿಸಿದ್ದೇನೆ. ಜಿಲ್ಲೆಯಲ್ಲಿ ಶೇ.49ರಷ್ಟು ಮಳೆ ಕೊರತೆಯಾಗಿದ್ದು, ಕೃಷಿ ಬೆಳೆಗಳು (67,236 ಹೆಕ್ಟೇರ್ ಪ್ರದೇಶ) ಮತ್ತು ತೋಟಗಾರಿಕಾ ಬೆಳೆಗಳು (4,520 ಹೆಕ್ಟೇರ್ ಪ್ರದೇಶದಲ್ಲಿ) ಹಾನಿಗೊಳಗಾಗಿವೆ. ಜಿಲ್ಲೆಯ ಐದೂ ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ ಎಂದು ತಿಳಿಸಿದರು.

ಇನ್ನೂ ರೈತರಿಗೆ ತಲಾ 2,500 ರೂಪಾಯಿ ಪರಿಹಾರ ಒದಗಿಸಲಾಗುತ್ತಿದೆ. ಮೊದಲ ಹಂತದಲ್ಲಿ ಹಣ ತಲುಪಿಸಲಾಗಿದೆ. ಇನ್ನೊಂದು ಹಂತದಲ್ಲಿ ಶೀಘ್ರವೇ ಬಿಡುಗಡೆ ಮಾಡಲಾಗುವುದು. ಸಣ್ಣ ಮತ್ತು ಅತಿಸಣ್ಣ ರೈತರಿಗಾಗಿ 'ನೇಗಿಲ ಯೋಗಿ' ಯೋಜನೆಯನ್ನೂ ಜಾರಿಗೊಳಿಸಲಾಗಿದೆ ಎಂದು ಅವರು ವಿವರಿಸಿದರು.
ಖಾಸಗಿ ಕೊಳವೆ ಬಾವಿ ಬಾಡಿಗೆಗೆ
ತಾಲೂಕಿನ 10 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನೀರು ಪೂರೈಕೆಗೆ ಈಗಾಗಲೇ 5 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಜಿಲ್ಲೆಯಲ್ಲಿ 24 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದ್ದು, ಮೇವಿನ ಬೀಜದ ಕಿಟ್‌ಗಳ ವಿತರಣೆಯನ್ನು ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಈ ಭಾಗದ ಗ್ರಾಮೀಣ ಜನರ ವಲಸೆ ತಡೆಯಲು 22.16 ಕೋಟಿ ರೂಪಾಯಿ ವೆಚ್ಚದಲ್ಲಿ 9.28 ಲಕ್ಷ ಮಾನವ ದಿನಗಳ ಉದ್ಯೋಗ ಸೃಜಿಸಲಾಗಿದೆ. 2.74 ಲಕ್ಷ ಜನರಿಗೆ ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ ಎಂದರು.
ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ, ಸಂಕಷ್ಟದಲ್ಲಿರುವ ರೈತರು ಹಾಗೂ ಗ್ರಾಮೀಣ ಜನರ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ. ಯಾರೂ ಆತಂಕಪಡಬೇಕಿಲ್ಲ ಎಂದು ಧೈರ್ಯ ತುಂಬಿದರು.
217 ತಾಲೂಕುಗಳು ಬರ ಪೀಡಿತ
ರಾಜ್ಯದಲ್ಲಿ ಈಗಾಗಲೇ 217 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, 177 ತಾಲೂಕುಗಳ ವರದಿ ಸಲ್ಲಿಸಲಾಗಿದೆ. ಇನ್ನೂ 23 ತಾಲೂಕುಗಳ ಪೈಕಿ 9 ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ನಡೆಯುತ್ತಿದೆ. ಒಟ್ಟು 240 ತಾಲೂಕುಗಳ ಪೈಕಿ ಬಹುತೇಕ ಎಲ್ಲಾ ತಾಲೂಕುಗಳು ಬರಪೀಡಿತವಾಗುವ ಸಾಧ್ಯತೆಯಿದೆ. ಈಗಾಗಲೇ ಎರಡು ಮನವಿಗಳ ಮೂಲಕ ₹46,000 ಕೋಟಿ ನಷ್ಟದ ವರದಿ ಸಲ್ಲಿಸಿದ್ದು, ಅಂತಿಮವಾಗಿ ₹60-65 ಸಾವಿರ ಕೋಟಿ ನಷ್ಟವಾಗುವ ಅಂದಾಜಿದೆ ಎಂದು ಸಚಿವರು ತಿಳಿಸಿದ್ದಾರೆ.
ಕೇಂದ್ರದಿಂದ ಸುಮಾರು 8,000 ಕೋಟಿ ರೂ. ನೆರವು ಕೋರಿದ್ದು, ಅಂತಿಮವಾಗಿ ₹18-20 ಸಾವಿರ ಕೋಟಿ ಪರಿಹಾರಕ್ಕೆ ಮನವಿ ಸಲ್ಲಿಸಲಾಗುವುದು. NDRF ನಿಯಮಾವಳಿಗಳಡಿ ಕೇಂದ್ರದ ನೆರವಿಗಾಗಿ ಕಾಯುತ್ತಿದ್ದೇವೆ. ರಾಜ್ಯ ಸರ್ಕಾರದಿಂದ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಕೂಲಿ ಸೇರಿದಂತೆ ಬರ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರೈತ ಕುಟುಂಬಗಳಿಗೆ ತಲಾ ₹2,500ರಂತೆ ₹1,250 ಕೋಟಿ ನೆರವು ನೀಡಲಾಗುತ್ತಿದ್ದು, ಸುಮಾರು 50 ಲಕ್ಷ ಕುಟುಂಬಗಳಿಗೆ ನೆರವು ತಲುಪಿಸುವ ಅಂದಾಜಿದೆ. ರಾಜ್ಯದ ಪ್ರಯತ್ನಗಳಿಗೆ ಕೇಂದ್ರವೂ ಸೂಕ್ತ ನೆರವು ನೀಡಬೇಕು ಎಂದು ಒತ್ತಾಯಿಸಿದರು.


Click it and Unblock the Notifications
