ಸಮಾಜವಾದಿ ಪಕ್ಷದ ಬಾಬಾಗೌಡ ಬಿಜೆಪಿಗೆ?
ಬೆಂಗಳೂರು, ಫೆ.24 : ಕರ್ನಾಟಕದಲ್ಲಿ ವಿವಿಧ ರಾಜಕೀಯ ಪಕ್ಷಗಳು ಲೋಕಸಭೆ ಚುನಾವಣೆಗೆ ಭರದ ಸಿದ್ಧತೆ ಆರಂಭಿಸಿದ್ದರೆ, ಸಮಾಜವಾದಿ ಪಕ್ಷ ಮೈ ಚಳಿ ಬಿಟ್ಟು ಮೇಲೆದ್ದಿಲ್ಲ. ಪಕ್ಷದ ರಾಜ್ಯಾಧ್ಯಕ್ಷ ಬಾಬಾಗೌಡ ಪಾಟೀಲ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಅದು ನಿಜವಾದರೆ ಕರ್ನಾಟಕದಲ್ಲಿ ಸಮಾಜವಾದಿ ಪಕ್ಷದ ಸೈಕಲ್ ನಾಯಕರಿಲ್ಲದೆ ಪಂಚರ್ ಆಗಲಿದೆ.
ಕರ್ನಾಟಕದಲ್ಲಿ ಸಮಾಜವಾದಿ ಪಕ್ಷಕ್ಕೆ ಆಸರೆ ಆಗಿರುವುದು ಚನ್ನಪಟ್ಟಣ ಶಾಸಕ ಸಿಪಿ ಯೋಗೇಶ್ವರ್ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಾಬಾಗೌಡ ಪಾಟೀಲ್. ಸಿಪಿ ಯೋಗೇಶ್ವರ್ ಸದ್ಯ ಮೌನಕ್ಕೆ ಶರಣಾಗಿದ್ದು ಪಕ್ಷ ಸಂಘಟನೆ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ. ಇನ್ನು ಬಾಬಾಗೌಡ ಪಾಟೀಲ್ ಪಕ್ಷದ ರಾಜ್ಯಾಧ್ಯಕ್ಷರಾದ ಆರು ತಿಂಗಳಿನಲ್ಲಿಯೇ ಭ್ರಮನಿರಸನಗೊಂಡಿದ್ದು, ಬಿಜೆಪಿ ಸೇರಲು ಸಿದ್ಧವಾಗುತ್ತಿದ್ದಾರೆ.

ಬಾಬಾಗೌಡ ಪಾಟೀಲ್ ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಕಳೆದ ವಾರ ಪ್ರಹ್ಲಾದ್ ಜೋಶಿ ಬಾಬಾಗೌಡ ಅವರ ಜೊತೆ ಖುದ್ದು ಮಾತುಕತೆ ನಡೆಸಿದ್ದು, ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಬಾಬಾಗೌಡರೂ ಆಹ್ವಾನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಫೆ.28ರಂದು ಹುಬ್ಬಳ್ಳಿಯಲ್ಲಿ ನಡೆಯುವ ನರೇಂದ್ರ ಮೋದಿ ಸಮಾವೇಶದಲ್ಲಿ ಬಿಜೆಪಿ ಸೇರಲಿದ್ದಾರೆ ಎಂದು ತಿಳಿದುಬಂದಿದೆ. [ಸೈಕಲ್ ಪಕ್ಷಕ್ಕೆ ಗೂಳಿಹಟ್ಟಿ ಗುಡ್ ಬೈ]
ಬಾಬಾಗೌಡ ಪಾಟೀಲ್ ಅವರಿಗೆ ಬಿಜೆಪಿ ತವರು ಮನೆ. ಬಿಜೆಪಿಯಲ್ಲಿದ್ದಾಗಲೇ ಕೇಂದ್ರದ ಸಚಿವರಾಗಿ ಕೆಲಸ ಮಾಡಿದ್ದರು. ನಂತರದ ದಿನಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಿದ್ದರಿಂದ ತಟಸ್ಥ ಧೋರಣೆ ಅನುಸರಿಸಿ ಅಂತಿಮವಾಗಿ ಆ ಪಕ್ಷದಿಂದ ಹೊರನಡೆದಿದ್ದರು. ನಂತರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದರು. [ಜೋಶಿ ವಿರುದ್ಧ ಬಾಬಾಗೌಡ ಪಾಟೀಲ್ ಸ್ಪರ್ಧೆ]
ಸದ್ಯ ಬಾಬಾಗೌಡರು ಬಿಜೆಪಿಗೆ ಬಂದರೂ ಅವರಿಗೆ ಲೋಕಸಭೆ ಟಿಕೆಟ್ ನೀಡುವ ಸಾಧ್ಯತೆ ಕಡಿಮೆ ಇದೆ. ಆದರೆ, ಚುನಾವಣೆ ನಂತರ ಸೂಕ್ತ ಸ್ಥಾನಮಾನ ನೀಡುವ ಕುರಿತು ಜೋಶಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದ್ದರಿಂದ ಸೈಕಲ್ ಬಿಟ್ಟು ಕಮಲ ಪಕ್ಷ ಸೇರಲು ಪಾಟೀಲರು ಸಿದ್ಧವಾಗುತ್ತಿದ್ದಾರೆ. ಅವರು ಬಿಜೆಪಿಗೆ ಮರಳಿದರೆ ರಾಜ್ಯದಲ್ಲಿ ಸೈಕಲ್ ಪಕ್ಷಕ್ಕೆ ನಾಯಕರ ಕೊರತೆ ಉಂಟಾಗಲಿದೆ.
ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಸಮಾಜವಾದಿ ಪಕ್ಷ ಸೇರಿದ್ದ ಶಂಕರ ಬಿದರಿ, ಗೂಳಿಹಟ್ಟಿ ಶೇಖರ್ ಪಕ್ಷ ತೊರೆದಾಗಿದೆ. ಏಕಾಂಗಿಯಾಗಿದ್ದ ಬಾಬಾಗೌಡ ಪಾಟೀಲ್ ಸಹ ಬಿಜೆಪಿಯತ್ತ ಮುಖಮಾಡಿದ್ದು, ಕರ್ನಾಟಕದಲ್ಲಿ ಸಮಾಜವಾದಿ ಪಕ್ಷ ಮತ್ತೊಮ್ಮೆ ಮೂಲೆಗುಂಪಾಗುವ ಲಕ್ಷಣಗಳು ಕಂಡುಬರುತ್ತಿವೆ. ಮುಲಾಯಂಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಕರ್ನಾಟಕದತ್ತ ಸ್ವಲ್ಪ ಗಮನಹರಿಸಿದರೆ ಪಕ್ಷದಲ್ಲಿ ಸೈಕಲ್ ಗೆ ಶಕ್ತಿ ತುಂಬಬಹುದಷ್ಟೆ.












Click it and Unblock the Notifications