ಮಂಡ್ಯದಲ್ಲಿ ಸಚಿವ ಅಂಬರೀಶ್ ಗೆ ಹಿನ್ನಡೆ!
ಮಂಡ್ಯ, ಡಿ. 23 : ಮಂಡ್ಯ ಜಿಲ್ಲಾ ಕಾಂಗ್ರೆಸ್ ನಲ್ಲಿ ಎದ್ದಿದ್ದ ವಿವಾದದ ಹೊಗೆ ತಣ್ಣಗಾಗಿದೆ. ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಎಂ.ಎಸ್.ಆತ್ಮಾನಂದ ಅವರನ್ನು ಮರು ಆಯ್ಕೆ ಮಾಡಿ ಕೆಪಿಸಿಸಿ ಆದೇಶ ಹೊರಡಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಗೆ ಅವರಿಗೆ ಭಾರಿ ಹಿನ್ನಡೆ ಉಂಟಾಗಿದೆ.
ವಿಧಾನಸಭೆ ಚುನಾವಣೆಯ ಕಾಲದಿಂದಲೂ ಆತ್ಮಾನಂದ ಮತ್ತು ಅಂಬರೀಶ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಜಿಲ್ಲಾ ಅಧ್ಯಕ್ಷ ಹುದ್ದೆಯಿಂದ ಆತ್ಮಾನಂದ ಅವರನ್ನು ಬದಲಾವಣೆ ಮಾಡಬೇಕೆಂದು ಅಂಬರೀಷ್ ಹಾಗೂ ಅವರ ಬೆಂಬಲಿಗರು ಕೆಪಿಸಿಸಿ ಅಧ್ಯಕ್ಷರ ಮೇಲೆ ಒತ್ತಡ ಹೇರಿದ್ದರು.

ಜಿಲ್ಲಾಧ್ಯಕ್ಷರ ಬದಲಾವಣೆ ವಿಚಾರವಾಗಿ ಜಿಲ್ಲಾ ಕಾಂಗ್ರೆಸ್ ಸಭೆ, ಸಮಾವೇಶಗಳಲ್ಲಿ ಭಾರೀ ಚರ್ಚೆ ನಡೆದು ಕೈ ಕೈ ಮೀಲಾಯಿಸುವ ತನಕ ವಿವಾದ ಹೋಗಿತ್ತು. ಇದರಿಂದ ಬೇಸರಗೊಂಡಿದ್ದ ಆತ್ಮಾನಂದ ಕೆಲ ತಿಂಗಳುಗಳ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. [ಮಂಡ್ಯ ಕಾಂಗ್ರೆಸ್ ಸಮರ]
ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಮತ್ತು ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಜಿಲ್ಲೆಯ ಮೇಲೆ ಹಿಡಿತ ಸಾಧಿಸಲು ಪ್ರಯತ್ನ ನಡೆಸಿದ್ದರು. ಕೃಷ್ಣ ಅವರ ಬೆಂಬಲಿಗರಾದ ಆತ್ಮಾನಂದ ಅವರನ್ನು ಅಧ್ಯಕ್ಷರಾಗಿ ಮುಂದುವರಿಸಬಾರದು. ಅವರು ಪಕ್ಷ ಸಂಘಟನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿಲ್ಲ ಎಂದು ಅಂಬರೀಶ್ ಬಣದವರು ಆರೋಪಿಸಿದ್ದರು. [ಮಂಡ್ಯದಲ್ಲಿ ಕೃಷ್ಣ ಕೃಷ್ಣಾ ಏನಿದು ಬಂಡಾಯ?]
ಸದ್ಯ ಕೆಪಿಸಿಸಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳನ್ನು ಪುನಾರಚನೆ ಮಾಡಿ ಆದೇಶ ಹೊರಡಿಸಿದ್ದು, ಎಂ.ಎಸ್.ಆತ್ಮಾನಂದ ಅವರು ಅಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ. ಅಂಬರೀಶ್ ಕಟ್ಟಾ ಬೆಂಬಲಿಗ ಅಮರಾವತಿ ಚಂದ್ರಶೇಖರ್ ಅವರನ್ನು ಖಜಾಂಚಿಯಾಗಿ ನೇಮಕ ಮಾಡಲಾಗಿದೆ. ಉಳಿದಂತೆ ಉಪಾಧ್ಯಕ್ಷರಾಗಿ ಲಿಂಗೇಗೌಡ ಪಾಪಣ್ಣ , ಕೆ.ಆರ್.ಎಸ್.ರಾಮೇಗೌಡ, ಪುಷ್ಪಲತ ಆನಂದ, ಪ್ರಧಾನ ಕಾರ್ಯದರ್ಶಿಗಳಾಗಿ ಸಿದ್ದಯ್ಯ ಹೆಮ್ಮಿಗೆ, ಕೆ.ಎಸ್.ಆನಂದ, ನಾಗೇಂದ್ರಕುಮಾರ್, ಎಚ್.ಪಾರ್ವತಮ್ಮ ಆಯ್ಕೆ ಯಾಗಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಪುನಾರಚನೆಗೊಂಡು ಆತ್ಮಾನಂದ ಅಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ. ಇದರಿಂದ ಅಂಬರೀಶ್ ಪಾಳಯಕ್ಕೆ ಮುಖಭಂಗ ಉಂಟಾಗಿದೆ. ಹಲವು ತಿಂಗಳಿನಿಂದ ಆತ್ಮಾನಂದ ಅವರನ್ನು ಕೆಳಗಿಳಿಸಲು ನಡೆಸಿದ ಪ್ರಯತ್ನ ವಿಫಲವಾದಂತಾಗಿದೆ. ಇದು ಲೋಕಸಭೆ ಚುನಾವಣೆ ವೇಳೆಗೆ ಮತ್ತೊಂದು ವಿವಾದ ಹುಟ್ಟು ಹಾಕುತ್ತದೆಯೇ?












Click it and Unblock the Notifications