Auto Fare Hike: ಪ್ರಯಾಣಿಕರಿಗೆ ಮತ್ತೊಂದು ಬಿಗ್ ಶಾಕ್- ಆಟೋ ಪ್ರಯಾಣ ದರ ಏರಿಕೆ?
ಬೆಂಗಳೂರು ಮಾರ್ಚ್ 12: ಬಸ್, ಮೆಟ್ರೋ ಪ್ರಯಾಣ ದರ ಬಳಿಕ ಪ್ರಯಾಣಿಕರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಆಟೋ ದರದ ಪರಿಷ್ಕರಣೆಯ ಬಗ್ಗೆ ಸಭೆ ನಡೆಯಲಿದ್ದು ಪ್ರಯಾಣ ದರ ಹೆಚ್ಚಾಗುವ ಸಾಧ್ಯತೆ ಇದೆ. ಒಂದು ವೇಳೆ ಆಟೋ ಪ್ರಯಾಣ ದರವೂ ಏರಿಕೆ ಆದರೆ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ.
ಹೌದು... ಇಂದು ಬೆಳಿಗ್ಗೆ 11 ಗಂಟೆಗೆ ಇನ್ ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಆಟೋ ಚಾಲಕ ಸಂಘಟನೆಯೊಂದಿಗೆ ಸಾರಿಗೆ ಇಲಾಖೆ ಸಭೆ ನಡೆಸಲಿದೆ. ಅಲ್ಲದೆ ದರ ಪರಿಷ್ಕರಣೆ ಬಗ್ಗೆ ಇವತ್ತೇ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ವಿಚಾರ ಆಟೋ ಚಾಲಕರ ಮುಖದಲ್ಲಿ ಮಂದಹಾಸ ಮೂಡಿಸಿದರೆ, ಮಧ್ಯಮ ವರ್ಗದ ಪ್ರಯಾಣಿಕರ ಕಣ್ಣಲ್ಲಿ ನೀರು ತರಿಸಿದ್ದು ನಿಜ.

ಯಾಕೆಂದರೆ ಈಗಾಗಲೇ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಮೆಟ್ರೋ ಪ್ರಯಾಣ ದರದಲ್ಲಿ ಏರಿಕೆ ಆಗಿದೆ. ಇದೀಗ ಆಟೋ ದರವೂ ಹೆಚ್ಚಾದರೆ ಮಾದ್ಯಮ ವರ್ಗದ ಜನರಿಗೆ ಮತ್ತಷ್ಟು ಆರ್ಥಿಕ ಹೊರೆಯಾಗುವುದು ಪಕ್ಕ. ಇದರಿಂದಾಗಿ ಜನ ಮೆಟ್ರೋ, ಬಸ್‌ಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದೀಗ ಆಟೋಗಳಿಂದಲೂ ದೂರ ಉಳಿಯುವ ಸಾಧ್ಯತೆ ಇದೆ.
ಇದು ಪ್ರಯಾಣಿಕರಿಗೆ ತುಂಬಾ ದೊಡ್ಡ ಆರ್ಥಿಕ ನಷ್ಟವನ್ನುಂಟು ಮಾಡಿದೆ. ಮೆಟ್ರೋ ಬಸ್ ಟಿಕೆಟ್ ದರ ಹೆಚ್ಚಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಮತ್ತೆ ಟ್ರಾಫಿಕ್ ಜಾಮ್ ಉಂಟಾಗಿದ್ದು ಸಾರ್ವಜನಿಕರು ಬಸ್ ಹಾಗೂ ಮೆಟ್ರೋ ಬಿಟ್ಟು ವಾಹನಗಳಲ್ಲಿ ಸಂಚಾರ ಮಾಡಲು ಪ್ರಾರಂಭಿಸಿದ್ದಾರೆ. ಇದರಿಂದಾಗಿ ಟ್ರಾಫಿಕ್ ಜೊತೆಗೆ ವಾಯು ಮಾಲಿನ್ಯ ಕೂಡ ಹೆಚ್ಚಾಗುತ್ತಿದೆ.
ಹೀಗೆ ಪ್ರಯಾಣ ದರ ಹೆಚ್ಚಾಗುತ್ತಲೇ ಇದ್ದರೆ ಮದ್ಯಮ ವರ್ಗದ ಪ್ರಯಾಣಿಕರಿಗೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳುವುದು ಭಾರೀ ಕಷ್ಟ. ಈ ಹಿಂದೆ 2021ರಲ್ಲಿ ಆಟೋ ಪ್ರಯಾಣ ದರ ಪರಿಷ್ಕರಣೆ ಆಗಿತ್ತು. ನಾಲ್ಕು ವರ್ಷದ ಬಳಿಕ ಇದೀಗ ಆಟೋ ಪ್ರಯಾಣ ದರ ಪರಿಷ್ಕರಣೆಯಾಗಲಿದೆ.
ಆದರೆ ಹಲವಾರು ಸಂಘಟನೆಗಳು ಆಟೋ ಪ್ರಯಾಣ ದರ ಪರಿಷ್ಕರಣೆಯ ಬಗ್ಗೆ ವಿರೋಧ ಕೂಡ ವ್ಯಕ್ತಪಡಿಸಿವೆ. ಈಗಾಗಲೇ ಉಚಿತ ಬಸ್ ಪ್ರಯಾಣದಿಂದಾಗಿ ಆಟೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ ಬಸ್ ಹಾಗೂ ಮೆಟ್ರೋ ಪ್ರಯಾಣ ದರ ಹೆಚ್ಚಾಗಿರುವುದರಿಂದ ಸ್ವಂತ ವಾಹನಗಳಲ್ಲಿ ಜನ ಪ್ರಯಾಣ ಮಾಡಲು ಶುರು ಮಾಡಿದ್ದಾರೆ. ಹೀಗಾಗಿ ಆಟೋ ಪ್ರಯಾಣ ದರ ಏರಿಕೆ ಮಾಡುವುದು ಬೇಡ ಎಂದು ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಎಲ್ಲರ ಒಮ್ಮತದ ಮೇಲೆ ಪ್ರಯಾಣ ದರ ಏರಿಕೆ ಮಾಡುವುದಾ ಅಥವಾ ಬಿಡುವುದಾ ಎಂದು ಇಂದು ನಿರ್ಧರಿಸಲಾಗುತ್ತದೆ.
ಈಗಾಗಲೇ ಪ್ರತಿ ಕಿ.ಮೀ.ಗೆ 15 ರೂ. ಇರುವ ಆಟೋ ಪ್ರಯಾಣ ದರವನ್ನು 18 ರೂ.ಗೆ ನಿಗದಿಪಡಿಸಬೇಕು ಹಾಗೂ 30 ರೂ. ಇರುವ ಕನಿಷ್ಠ ಬಾಡಿಗೆ ದರವನ್ನು 40 ರೂ.ಗೆ ಹೆಚ್ಚಿಸಬೇಕು ಎಂಬುದು ಆಟೋ ಚಾಲಕರ ಅಂದಾಜು ಬೇಡಿಕೆಯಾಗಿದೆ. ಅಲ್ಲದೆ ಆಟೋ ಓಡಿಸಲು ಅಗತ್ಯವಾದ ಪೆಟ್ರೋಲ್, ಡೀಸೆಲ್, ಅನಿಲ ದರವೂ ಏರಿಕೆಯಾಗುತ್ತಿದೆ.
ಆಹಾರ ಪದಾರ್ಥಗಳು ಮೆಟ್ರೋ, ಬಸ್ ಪ್ರಯಾಣ ದರವೂ ಹೆಚ್ಚಳವಾಗಿದೆ. ಹೀಗಾಗಿ ಬೆಲೆ ಏರಿಕೆ ನಡುವೆ ಹಳೆ ದರದಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಆಟೋ ಪ್ರಯಾಣಿಕರು ನೋವು ತೋಡಿಕೊಂಡಿದ್ದಾರೆ. ಇಂದಿನ ಸಭೆಯಲ್ಲಿ ಚರ್ಚೆಯ ಬಳಿಕ ಆಟೋ ಪ್ರಯಾಣ ದರ ಏರಿಕೆಯಾಗುವ ಸಾಧ್ಯತೆ ಇದೆ.












Click it and Unblock the Notifications