ಕೊನೆ ಉಸಿರಿರುವ ತನಕ ಹೋರಾಟ : ಅಣ್ಣಾ ಹಜಾರೆ

ಬೆಂಗಳೂರು, ಫೆ.12 : ಪಬ್ಲಿಕ್ ಟಿವಿ ಆರಂಭವಾಗಿ ಫೆಬ್ರವರಿ 12ಕ್ಕೆ 2 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ವಾಹಿನಿ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಪಬ್ಲಿಕ್ ಟಿವಿಯ ಎರಡು ವರ್ಷದ ಸಂಭ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಪಾಲ್ಗೊಂಡಿದ್ದರು. ವಾಹಿನಿಯಲ್ಲಿ ಆಯೋಜಿಸಿದ್ದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಗಣ್ಯರೊಂದಿಗೆ ಅವರು ಭಾಗವಹಿಸಿದ್ದರು.

ಮಧ್ಯಾಹ್ನ 1.30ಕ್ಕೆ ಪಬ್ಲಿಕ್ ಟಿವಿ ಕಚೇರಿಗೆ ಆಗಮಿಸಿದ ಅಣ್ಣಾ ಹಜಾರೆ ಅವರನ್ನು ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ, ಜನಶಕ್ತಿ ಪಕ್ಷದ ಅಧ್ಯಕ್ಷ ಶಂಕರಬಿದರಿ, ಮಾಜಿ ಸಚಿವ ಸುರೇಶ್ ಕುಮಾರ್, ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Anna Hazare

ಪಬ್ಲಿಕ್ ಟಿವಿ ಏರ್ಪಡಿಸಿದ್ದ ಅಣ್ಣಾ ಹಜಾರೆ ಜೊತೆಗಿನ ವಿಶೇಷ ಸಂವಾದದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್, ಉದಯವಾಣಿ ಗ್ರೂಪ್ ಎಡಿಟರ್ ರವಿ ಹೆಗಡೆ, ಮಾಜಿ ಸಚಿವ ಸುರೇಶ್ ಕುಮಾರ್ ಪಾಲ್ಗೊಂಡಿದ್ದರು.

ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್, ವಿವೇಕಾನಂದ ಯೂತ್ ಮೂವ್ ಮೆಂಟ್ ನ ಡಾ.ಬಾಲಸುಬ್ರಮಣ್ಯ, ಗಾಯಕಿ ಸಂಗೀತಾ ಕಟ್ಟಿ, ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಗೋಪಾಲಕೃಷ್ಣ, ನಿವೃತ್ತ ಪೊಲೀಸ್ ಅಧಿಕಾರಿ ಕೆ.ಸಿ.ರಾಮಮೂರ್ತಿ, ಜನಶಕ್ತಿ ಪಕ್ಷದ ಅಧ್ಯಕ್ಷ ಶಂಕರಬಿದರಿ, ನಟಿ ಶ್ರುತಿ, ಸರ್ಕಾರ ಮಾಜಿ ಕಾರ್ಯದರ್ಶಿ ಎಸ್.ವಿ.ರಂಗನಾಥ್, ವಿಜಯ ಕರ್ನಾಟಕ ಪತ್ರಿಕೆ ಸಂಪಾದಕ ಸುಗತ ಶ್ರೀನಿವಾಸ್, ಒನ್ ಇಂಡಿಯಾ ಡಾಟ್ ಇನ್ ಸಂಪಾದಕ ಶ್ಯಾಮ್ ಸುಂದರ್, ಬೇಲಿಮಠದ ಸ್ವಾಮಿಗಳು, ಸಾಹಿತಿ ಬಿ.ಟಿ.ಲಲಿತಾ ನಾಯಕ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮುಂತಾದವರುಭಾಗವಹಿಸಿದ್ದರು.

ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಸಂವಾದ ಕಾರ್ಯಕ್ರಮವನ್ನು ಆರಂಭಿಸಿ ಮೊದಲು ಅಣ್ಣಾ ಹಜಾರೆ ಅವರಿಗೆ ಪ್ರಶ್ನೆಯನ್ನು ಕೇಳಿದರು.

ರಂಗನಾಥ್ : ಸತ್ಯಾಗ್ರಹವನ್ನು ಆರಂಭ ಮಾಡಿದ ನೀವು ಅದಕ್ಕೆ ತಾರ್ಕಿಕ ಅಂತ್ಯ ನೀಡಲಿಲ್ಲ, ಅಂದರೆ ಅದು ವಿಫಲವಲ್ಲವೇ?

ಹಜಾರೆ : "ಎರಡು ವರ್ಷದ ತುಂಬಿದ ಪಬ್ಲಿಕ್ ಟಿವಿಗೆ ಅಭಿನಂದನೆ" ಎಂದು ಹಜಾರೆ ಕನ್ನಡದಲ್ಲಿ ಅಭಿನಂದನೆ ಸಲ್ಲಿಸಿ ಮಾತು ಆರಂಭಿಸಿದ ಅಣ್ಣಾ ಹಜಾರೆ. ಸತ್ಯಾಗ್ರಹಕ್ಕೆ ಅಂತ್ಯವಿಲ್ಲ. ನನ್ನ ಶರೀರದಲ್ಲಿ ಪ್ರಾಣವಿರುವ ತನಕ ಸತ್ಯಾಗ್ರಹ ಮಾಡುತ್ತೇನೆ. ಸಮಾಜದಲ್ಲಿ ಅನ್ಯಾಯ ಆರಂಭವಾದಾಗ, ಸರ್ಕಾರಗಳು ವಿಫಲವಾದಾಗ ಸತ್ಯಾಗ್ರಹ ನಡೆಸಬೇಕು. ಸತ್ಯಕ್ಕಾಗಿ ಆಗ್ರಹಪಡಿಸುವುದು ಸತ್ಯಾಗ್ರಹ. ನನ್ನ ಶರೀರದಲ್ಲಿ ಕೊನೆಯ ಉಸಿರು ಇರುವವರೆಗೆ ಸತ್ಯಾಗ್ರಹ ಮುಂದುವರೆಸುತ್ತೇನೆ ಎಂದು ಹಜಾರೆ ಹೇಳಿದರು.

ರಂಗನಾಥ್ : ಸತ್ಯಾಗ್ರಹದ ಅಂತ್ಯವೇನು?
ಹಜಾರೆ :
ಮೊದಲು ಆಡಳಿತದಲ್ಲಿ ಪಾರದರ್ಶಕತೆ ಬರಬೇಕು ಎಂದು ಸತ್ಯಾಗ್ರಹ ಆರಂಭಿಸಿದೆ. ಮುಂದೆ ರೈಟು ಟು ರಿಜೆಕ್ಟ್ ಕಾನೂನು ಜಾರಿಗೆ ಬರಬೇಕು ಎಂದು ಸತ್ಯಾಗ್ರಹ ನಡೆಸುತ್ತೇನೆ. ಪ್ರಸ್ತುತ ಜನರಿಗೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಧಿಕಾರವಿದೆ. ಇದರ ಮೂಲಕ ಭ್ರಷ್ಟರು ಸಂಸತ್ತಿಗೆ ಆಯ್ಕೆ ಆಗುತ್ತಿದ್ದಾರೆ. ಅವರನ್ನು ವಾಪಸ್ ಕರೆಸಿಕೊಳ್ಳುವ ಅಧಿಕಾರ ಜನರಿಗೆ ದೊರೆಯಬೇಕು ಎಂದು ಸತ್ಯಾಗ್ರಹ ನಡೆಸುತ್ತೇನೆ ಎಂದು ಅಣ್ಣಾ ಹಜಾರೆ ಹೇಳಿದರು.

ದೊರೆಸ್ವಾಮಿ : ಸತ್ಯಾಗ್ರಹ ಮುಗಿದ ಬಳಿಕ ಹಜಾರೆ ದೇಶ ಪ್ರವಾಸ ಮಾಡಬೇಕಿತ್ತು. ಜನರು ನಿದ್ದೆಯಿಂದ ಸಂಪೂರ್ಣವಾಗಿ ಎಚ್ಚರವಾಗಿಲ್ಲ?

ಹಜಾರೆ : ಮಾರ್ಚ್ ನಂತರ ದೇಶ ಪ್ರವಾಸ ಮಾಡಬೇಕು ಎಂದು ಆಲೋಚಿಸಿದ್ದೇನೆ ಎಂದು ಅಣ್ಣಾ ಹಜಾರೆ ಉತ್ತರ ನೀಡಿದರು. ನನ್ನ ದೇಹ ನನ್ನೊಂದಿಗೆ ಸಹಕರಿಸುವ ತನಕ ನಾನು ದೇಶ ಪ್ರವಾಸ ಮಾಡುತ್ತೇನೆ. ಇಂದು ರಾಜಕೀಯ ಪಕ್ಷಗಳ ಮೇಲೆ ಜನರಿಗೆ ನಂಬಿಕೆ ಹೋಗಿದೆ. ಪ್ರಜಾಪ್ರಭುತ್ವ ಇಂದು ಜನರಿಗಾಗಿ ಇಲ್ಲ. ಪಕ್ಷಗಳು ಅದನ್ನು ಕೆಲವರಿಗಾಗಿ ನಡೆಸುತ್ತಿವೆ ಎಂದು ಹಜಾರೆ ಆತಂಕ ವ್ಯಕ್ತಪಡಿಸಿದರು.

ಎಸ್.ಆರ್.ಹಿರೇಮಠ : ಜೆಪಿ ಚಳವಳಿ ನಂತರ ಯುವಕರಲ್ಲಿ ಹೊಸ ಹುರುಪು ತುಂಬಿದ್ದು, ನಿಮ್ಮ ಸತ್ಯಾಗ್ರಹ. ನಿಮ್ಮ ಹೋರಾಟದ ಮುಂದಿನ ಸ್ವರೂಪವೇನು?

ಹಜಾರೆ : ಮೊದಲು ಯಾರು ಸತ್ಯಾಗ್ರಹ ಮಾಡುತ್ತಾರೆ ಎಂಬುದನ್ನು ನಾವು ತಿಳಿಯಬೇಕು. ಸತ್ಯಾಗ್ರಹ ಮಾಡುವವರು ಶುದ್ಧವಾಗಿರಬೇಕು. ಸತ್ಯಾಗ್ರಹದ ಮೂಲಕ ಜನರು ಪರಿವರ್ತನೆ ಆಗುವ ತನಕ ನಾವು ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಇಂದಿನ ರಾಜಕೀಯ ಪಕ್ಷಗಳು ಗ್ರಾಮಗಳನ್ನು ಕಡೆಗಣಿಸುತ್ತಿವೆ. ಉದ್ಯಮಗಳ ಬಗ್ಗೆ ನಾವು ಆಲೋಚಿಸುವ ಮೊದಲು ಗ್ರಾಮಗಳ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದು ಅಣ್ಣಾ ಹಜಾರೆ ತಿಳಿಸಿದರು.

ಟಿ.ಎನ್.ಸೀತಾರಾಮ್ : ಲೋಕಸಭೆ ಚುನಾವಣೆಗಳು ಹತ್ತಿರವಾಗುತ್ತಿರುವಾಗ ನೀವು ನೀವು ಹೇಗೆ ತೊಡಗಿಸಿಕೊಳ್ಳುತ್ತೀರಿ?

ಹಜಾರೆ : ನಾನು ರಾಜಕೀಯಕ್ಕೆ ಬರೋಲ್ಲ, ಪಕ್ಷ ಕಟ್ಟೋಲ್ಲ ಎಂದು ಸ್ಪಷ್ಟಪಡಿಸಿದ ಅಣ್ಣಾ ಹಜಾರೆ, ಉತ್ತಮ ಚಾರಿತ್ಯದ ಅಭ್ಯರ್ಥಿಗಳಿಗೆ, ನಾನು ಬೆಂಬಲ ನೀಡುತ್ತೇನೆ. ಅವರು ಪಕ್ಷೇತರ ಅಭ್ಯರ್ಥಿಗಳಾದರೂ ನನ್ನ ಬೆಂಬಲವಿದೆ ಎಂದು ಹೇಳಿದರು. ಭ್ರಷ್ಟ ರಾಜಕಾರಣಿಗಳು ಸಂಸತ್ ಪ್ರವೇಶ ಮಾಡಲು ಅವಕಾಶ ನೀಡಬಾರದು ಎಂಬುದು ನನ್ನ ಪ್ರಮುಖ ಧ್ಯೇಯ ಎಂದರು. ಎಲ್ಲಾ ರಾಜಕೀಯ ಪಕ್ಷಗಳಿಗೆ ನಾನು 17 ಅಂಶಗಳನ್ನು ಜಾರಿಗೊಳಿಸಲು ಸಾಧ್ಯವೇ ಎಂದು ಪತ್ರಬರೆದಿದ್ದೇನೆ. ಆದರೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಾತ್ರ ಇದಕ್ಕೆ ಉತ್ತರಿಸಿದ್ದಾರೆ. ಆಮ್ ಆದ್ಮಿ ಪಕ್ಷವೂ ಇದಕ್ಕೆ ಉತ್ತರ ನೀಡಿಲ್ಲ ಎಂದು ಹಜಾರೆ ಹೇಳಿದರು.

ಡಾ.ಬಾಲಸುಬ್ರಮಣ್ಯ : ನಿಮ್ಮ ಬೆಂಬಲಿಗರು ಇಂದು ಅಧಿಕಾರದಲ್ಲಿದ್ದಾರೆ. ಅವರು ತಪ್ಪು ಮಾಡಿದರೆ ಸರಿಪಡಿಸುವವರು ಯಾರು?

ಹಜಾರೆ : ಹಲವಾರು ಕಡೆ ನನ್ನ ಹೆಸರು ದುರುಪಯೋಗವಾಗುತ್ತಿದೆ. ಹೀಗೆ ಮಾಡುತ್ತಿದ್ದ ಮೂವರನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದೇನೆ. ನನ್ನ ಬೆಂಬಲಿಗರು ತಪ್ಪುಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಲು ನನಗೆ ಕಾಲಾವಕಾಶ ಬೇಕಾಗುತ್ತದೆ. ಜನರ ಹಣವನ್ನು ದುರುಪಯೋಗ ಪಡಿಸಿಕೊಳ್ಳಲು ಅವಕಾಶ ನೀಡಬಾರದು ಎಂಬುದು ನನ್ನ ಪ್ರಮುಖ ಗುರಿ ಎಂದು ಹಜಾರೆ ಅಭಿಪ್ರಾಯಪಟ್ಟರು.

ಸುರೇಶ್ ಕುಮಾರ್ : ಭ್ರಷ್ಟರ ಮೇಲೆ ಕಾನೂನು ಕ್ರಮ ಎರಡನೆ ಅಂಶ, ಭ್ರಷ್ಟಾಚಾರಕ್ಕೆ ಮೊದಲ ಹಂತದಲ್ಲಿಯೇ ಕಡಿವಾಣ ಹಾಕಲು ಸಾಧ್ಯವೆ?

ಹಜಾರೆ : ಕೇವಲ ಮಾತಿನಿಂದ ಸಮಾಜ ಸುಧಾರಣೆ ಆಗುವುದಿಲ್ಲ. ಶಬ್ದ ಮತ್ತು ಕಾರ್ಯವನ್ನು ಮಾಡಿ ತೋರಿಸುವ ನಾಯಕರು ಬೇಕು. ಅಂತಹವರಿಂದ ಸಮಾಜ ಸಹ ಪರಿವರ್ತನೆ ಆಗುತ್ತದೆ. ಆದ್ದರಿಂದ ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು. ಆಗ ಭ್ರಷ್ಟಾಚಾರಕ್ಕೆ ತಳಹಂತದಿಂದಲೇ ಕಡಿವಾಣ ಬೀಳುತ್ತದೆ.

ಕೃಷ್ಣ ಪ್ರಸಾದ್ (ಔಟ್ ಲುಕ್ ಸಂಪಾದಕ ) : ಭ್ರಷ್ಟಾಚಾರವನ್ನು ಬುಡಮಟ್ಟದಿಂದ ಕಿತ್ತೊಗೆಯಲು ಸಾಧ್ಯವೇ? ಮಾಧ್ಯಮಗಳ ಭ್ರಷ್ಟಾಚಾರದ ಬಗ್ಗೆ ನಿಮ್ಮ ನಿಲುವೇನು?

ಹಜಾರೆ : ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಪ್ರಜಾತಂತ್ರ ವ್ಯವಸ್ಥೆಯನ್ನು ನಾವು ತಿದ್ದಬೇಕಾದರೆ, ನಾಲ್ಕನೇ ಅಂಗವೂ ಭ್ರಷ್ಟಾಚಾರ ಮುಕ್ತವಾಗಿ ಕೆಲಸ ಮಾಡಬೇಕು. ಮಾಧ್ಯಮ ಕ್ಷೇತ್ರದಲ್ಲಿ ಎಲ್ಲರೂ ಭ್ರಷ್ಟರಲ್ಲ. ಉತ್ತಮ ವ್ಯಕ್ತಿಗಳಿದ್ದಾರೆ, ಚೆನ್ನಾಗಿ ಬರೆಯುತ್ತಾರೆ. ಅಪರಾಧ ಸುದ್ದಿಗಳನ್ನು ವೈಭವೀಕರಿಸುವುದನ್ನು ಬಿಟ್ಟು, ಸಮಾಜದಲ್ಲಿ ಬದಲಾವಣೆ ತರುವಂತಹ ಲೇಖನಗಳನ್ನು ಪ್ರಕಟಿಸಬೇಕು.

ಶಾಲಾ ಮಕ್ಕಳು : ಸಮಾಜ ಸುಧಾರಣೆ ಯಾರು ಮಾಡಬೇಕು. ಅವರಿಗೆ ಮಾರ್ಗದರ್ಶಕರು ಯಾರು?

ಹಜಾರೆ : ಮಾರ್ಗದರ್ಶಕರ ಬಗ್ಗೆ ನೀವು ಕೇಳುತ್ತಿದ್ದಿರಿ. ನಮ್ಮ ದೇಶದಲ್ಲಿ ಹಲವಾರು ಮಹಾತ್ಮರಿದ್ದಾರೆ. ಅವರ ಬಗ್ಗೆ ಓದಿದಾಗ ನಮಗೆ ಮಾರ್ಗ ತಿಳಿಯುತ್ತದೆ. ಹೋರಾಟಕ್ಕೆ ಸ್ಫೂರ್ತಿ ದೊರೆಯುತ್ತದೆ. ನನ್ನ ಹೋರಾಟಕ್ಕೆ ಯಾರು ಮಾರ್ಗದರ್ಶನ ಮಾಡಿಲ್ಲ. ಹೋರಾಟಕ್ಕೆ ಧುಮುಕುವ ಯುವಕರು ಮಹಾತ್ಮರ ಬಗ್ಗೆ ಓದಿಕೊಂಡು ನಿಮ್ಮ ಹೋರಾಟದ ಬಗ್ಗೆ ಮಾರ್ಗಗಳನ್ನು ನಿರ್ಧರಿಸಿಕೊಳ್ಳಿ.

ಸಿ.ಕೆ.ರಾಮಮೂರ್ತಿ : ದೇಶಕ್ಕೆ ಉತ್ತಮ ಶಿಕ್ಷಣ ವ್ಯವಸ್ಥೆ ಬೇಕು. ನೀವು ಹೇಳುವ ಶಿಕ್ಷಣ ವ್ಯವಸ್ಥೆ ಮಾದರಿ ಯಾವುದು?

ಹಜಾರೆ : ನನ್ನ ಗ್ರಾಮದಲ್ಲಿರುವ ಶಾಲೆಯೇ ಉತ್ತಮ ಶಿಕ್ಷಣ ವ್ಯವಸ್ಥೆಗೆ ಉದಾಹರಣೆಯಾಗಿದೆ. ಆದರೆ, ಸರ್ಕಾರ ಅದನ್ನು ಒಪ್ಪುತ್ತಿಲ್ಲ. ಜನರು ಹಜಾರೆ ಅವರೇ ಮುಂದೆ ಹೋಗಿ, ನಾವು ನಿಮ್ಮ ಜೊತೆ ಇದ್ದೇವೆ ಎಂದು ಹೇಳುತ್ತಾರೆ. ಆದರೆ, ತಿರುಗಿ ನೋಡಿದರೆ ಯಾರು ಇರುವುದಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾದರೆ, ಜನರು ನಮ್ಮೊಂದಿಗೆ ಕೈ ಜೋಡಿಸಬೇಕು.

ಶೃತಿ : ಎಲ್ಲರನ್ನು ಬದಲಾವಣೆ ಮಾಡುವ ಬದಲು ನೀವು ಏಕೆ ಅಖಾಡಕ್ಕೆ ಇಳಿಯಬಾರದು?

ಹಜಾರೆ : ನಾನು ಚುನಾವಣೆಗೆ ನಿಂತರೆ ಠೇವಣಿ ಕಳೆದುಕೊಳ್ಳುತ್ತೇನೆ ಎಂದು ಹೇಳಿದ ಅಣ್ಣಾ ಹಜಾರೆ, ಇದು ಚೆನ್ನಾಗಿ ತಿಳಿದಿದ್ದರಿಂದ ನಾನು ಚುನಾವಣೆಯಿಂದ ದೂರವಿದ್ದೇನೆ. ಆದರೆ, ನಿಧಾನವಾಗಿಯಾದರೂ ದೇಶ ಬದಲಾವಣೆ ಆಗುತ್ತದೆ ಎಂಬುದು ನನ್ನ ನಂಬಿಕೆ ಎಂದು ಹಜಾರೆ ಹೇಳಿದರು.

ಮಮತಾಗೆ ಬೆಂಬಲ : ನಾನು ಹೇಳಿದ 17 ಅಂಶಗಳನ್ನು ಈಡೇರಿಸುವ ಭರವಸೆಯನ್ನು ಮಮತಾ ಬ್ಯಾನರ್ಜಿ ನೀಡಿದ್ದಾರೆ. ಆದ್ದರಿಂದ ಅವರನ್ನು ಬೆಂಬಲಿಸುತ್ತೇನೆ. ಎರಡು ದಿನಗಳ ಹಿಂದೆ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ನನ್ನನ್ನು ಭೇಟಿ ಮಾಡಿದ್ದರು. 17 ಅಂಶಗಳನ್ನು ಈಡೇರಿಸುತ್ತೇನೆ ಎಂದು ಹೇಳಿದರು. ಅದನ್ನು ಅಫಿಡೆವಿಟ್ ನಲ್ಲಿ ನೀಡಿ ಎಂದು ಹೇಳಿದೆ. ನಂತರ ಅವರಿಂದ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದರು.

ಮಕ್ಕಳು : ಭ್ರಷ್ಟಾಚಾರದ ತೊಲಗಿಸುವ ಕ್ರಿಯೆ ಎಲ್ಲಿಂದ ಆರಂಭವಾಗಬೇಕು?

ಹಜಾರೆ : ಮಕ್ಕಳು ವಾರ್ಷಿಕ ಪರೀಕ್ಷೆಯಲ್ಲಿ ನಾನು ಕಾಪಿ ಹೊಡೆಯುವುದಿಲ್ಲ ಎಂದು ನೀವು ಮೊದಲು ತೀರ್ಮಾನ ಕೈಗೊಳ್ಳಿ. ಅಲ್ಲಿಂದಲೇ ನಮ್ಮ ಹೋರಾಟ ಆರಂಭವಾಗಬೇಕು. ಪರೀಕ್ಷೆಯಲ್ಲಿ ಕಾಪಿ ಹೊಡೆಯುವುದು ಸಹ ಭ್ರಷ್ಟಾಚಾರ ಎಂದು ಹಜಾರೆ ಮಕ್ಕಳ ಪ್ರಶ್ನೆಗೆ ಉತ್ತರ ನೀಡಿದರು.

ಶ್ಯಾಮ್ ಸುಂದರ್ : ಕರ್ನಾಟಕದ ಭ್ರಷ್ಟಾಚಾರದ ಬಗ್ಗೆ ಏನು ಹೇಳುತ್ತೀರಿ?

ಹಜಾರೆ : ಕರ್ನಾಟಕ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ ಆದ್ದರಿಂದ ಇಲ್ಲಿನ ಭ್ರಷ್ಟಾಚಾರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹಜಾರೆ ಉತ್ತರಿಸಿದರು. ಕರ್ನಾಟಕದ ಭ್ರಷ್ಟಾಚಾರದ ಬಗ್ಗೆ ನಾವು ಅವರಿಗೆ ಹೆಚ್ಚಿನ ಮಾಹಿತಿ ನೀಡಿಲ್ಲ ಎಂದು ಸಂತೋಷ್ ಹೆಗ್ಡೆ ಹಜಾರೆ ಮಾತಿಗೆ ಧ್ವನಿ ಗೂಡಿಸಿದರು.

ಸಂಗೀತಾ ಕಟ್ಟಿ : ಪುನಃ ರಾಮರಾಜ್ಯ ನಿರ್ಮಾಣವಾಗುವುದೇ?

ಹಜಾರೆ : ಭಾರತ ರಾಮರಾಜ್ಯವಾಗುವುದನ್ನು ನಾನು ನೋಡುತ್ತೇನೆ ಎಂಬ ನಂಬಿಕೆ ಇಲ್ಲ. ಆದರೆ, ರಾಮರಾಜ್ಯ ನಿರ್ಮಾಣ ಮಾಡುವ ಮಾರ್ಗವನ್ನು ತೋರಿಸಿದ್ದೇನೆ, ಅದನ್ನು ಮುಂದುವರೆಸಿಕೊಂಡು ಹೋಗವುದು ನಿಮ್ಮ ಜವಾಬ್ದಾರಿ ಎಂದು ಹಜಾರೆ ಹೇಳಿದರು.

ರವಿಹೆಗಡೆ : ಸತ್ಯಾಗ್ರಹ ಮಹತ್ವ ಕಳೆದು ಕೊಳ್ಳುತ್ತಿದೆ. ನಿಮ್ಮ ತಂಡ ಬೇರೆ ಆಗಿದ್ದರಿಂದ ಹೋರಾಟಕ್ಕೆ ನಷ್ಟ ಉಂಟಾಗಿಲ್ಲವೇ?

ಹಜಾರೆ : ಸತ್ಯಾಗ್ರಹದ ನಂತರ ದೇಶದಲ್ಲಿ ಜಾಗೃತಿ ಆರಂಭವಾಯಿತು. ನಾವು ದೂರವಾಗಿದ್ದೇವೆ ನಿಜ. ಆದರೆ, ದೂರವಾಣಿ ಮೂಲಕ ಮಾತುಕತೆ ನಡೆಸುತ್ತೇವೆ. ಸದ್ಯ ಭ್ರಷ್ಟಾಚಾರದ ಸಂಪೂರ್ಣವಾಗಿ ಹೋಗಿಲ್ಲ. ಆದರೆ, ಅದರ ಬಗ್ಗೆ ಜಾಗೃತಿ ಮೂಡಿದೆ. ರಾಮಲೀಲಾ ಮೈದಾನದ ಹೋರಾಟದ ನಂತರ ಬೇರೆ ಆಗುತ್ತೇವೆ ಎಂಬ ಭಾವನೆ ನಮ್ಮಲ್ಲಿ ಇರಲಿಲ್ಲ. ಆದರೆ, ಅವರ ಮನಸ್ಸಿನಲ್ಲಿ ಪಕ್ಷದ ಆಲೋಚನೆ ಬಂದು ಅವರು ದೂರಾದರು. ಅದನ್ನು ನಾನು ಹೇಗೆ ತಡೆಯಲಿ?

ರಂಗನಾಥ್ : ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಬೇಕೆ?

ಹಜಾರೆ : ಮಹಾತ್ಮ ಗಾಂಧೀಜಿ ಸ್ವರಾಜ್ಯದ ಬಗ್ಗೆ ಮಾತನಾಡಿದ್ದರು. ಅವರು ವಿದೇಶಿ ಬಂಡವಾಳ ಹೂಡಿಕೆ ಬಗ್ಗೆ ಮಾತನಾಡಿರಲಿಲ್ಲ. ಆದ್ದರಿಂದ ಅದರ ಅವಶ್ಯಕತೆ ಇದೆ ಎಂದು ಅನ್ನಿಸುವುದಿಲ್ಲ.

ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ಬಗ್ಗೆ ಏನು ಹೇಳುತ್ತೀರಿ?

ಹಜಾರೆ : ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವವರನ್ನು ಸಾರ್ವಜನಿಕವಾಗಿ ಶಿಕ್ಷಿಸಬೇಕು ಎಂದು ಹಲವು ಬಾರಿ ಹೇಳಿದ್ದೇನೆ. ಆ ವಿಚಾರದಲ್ಲಿ ನನ್ನ ನಿಲುವು ಅದೇ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+