ಮತ್ತೆ ಬಿಜೆಪಿಗೆ ಮರಳುವ ಸೂಚನೆ ಕೊಟ್ಟ ಮಾಜಿ ಸಚಿವ!
ಬೆಂಗಳೂರು, ಅಕ್ಟೋಬರ್ 16; "ಕೆಲವು ರಾಜಕೀಯ ನಿರ್ಧಾರಗಳ ವಿಚಾರದಲ್ಲಿ ನನ್ನಿಂದ ತಪ್ಪಾಗಿದೆ. ಬಿಜೆಪಿ ಬಿಟ್ಟಿರುವುದಕ್ಕೆ ನನಗೆ ಪಶ್ಚಾತಾಪವಿದೆ" ಎಂದು ಮಾಜಿ ಸಚಿವರು ಹೇಳಿದ್ದಾರೆ. ಈ ಮೂಲಕ ಮತ್ತೆ ಬಿಜೆಪಿಗೆ ವಾಪಸ್ ಆಗುವ ಸುಳಿವು ನೀಡಿದ್ದಾರೆ.
ಕಾರವಾರದಲ್ಲಿ ಶನಿವಾರ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. "ಕೆಲವೇ ದಿನಗಳಲ್ಲಿ ತಮ್ಮ ರಾಜಕೀಯ ನಿರ್ಧಾರವನ್ನು ಪ್ರಕಟಿಸುವುದಾಗಿ" ಸಚಿವರು ಘೋಷಣೆ ಮಾಡಿದ್ದಾರೆ.
2023ರ ಚುನಾವಣೆ ಸಮಯದಲ್ಲಿ ಆನಂದ್ ಅಸ್ನೋಟಿಕರ್ ನಡೆ ಯಾವ ಕಡೆ ಎಂಬ ಚರ್ಚೆ ನಡೆದಿತ್ತು. ಇಂತಹ ಸಂದರ್ಭದಲ್ಲಿಯೇ ಮಾಜಿ ಸಚಿವರ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ. ಜೆಡಿಎಸ್‌ನಿಂದ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಸಚಿವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಕಾರವಾರ-ಅಂಕೋಲಾ ಕ್ಷೇತ್ರ ಈಗಾಗಲೇ ಬಿಜೆಪಿಯ ವಶದಲ್ಲಿದೆ. ರೂಪಾಲಿ ನಾಯ್ಕ್ ಶಾಸಕರು. ಮುಂದಿನ ಚುನಾವಣೆಯಲ್ಲಿಯೂ ಅವರಿಗೆ ಟಿಕೆಟ್ ಪಕ್ಕಾ ಎಂಬ ಮಾತುಗಳು ಹಬ್ಬಿವೆ. ಇಂತಹ ಸಮಯದಲ್ಲಿಯೇ ಆನಂದ್ ಅಸ್ನೋಟಿಕರ್ ಬಿಜೆಪಿಗೆ ಮರಳುವ ಸುಳಿವು ಕೊಟ್ಟಿದ್ದಾರೆ.

ಬಿಜೆಪಿ ಪಕ್ಷ ಬಿಡುವಂತೆ ಆಯಿತು
ಕಾರವಾರದಲ್ಲಿ ಶನಿವಾರ ಮಾತನಾಡಿದ ಆನಂದ್ ಅಸ್ನೋಟಿಕರ್, "ಬಿಜೆಪಿ ಬಿಟ್ಟಿರುವುದಕ್ಕೆ ನನಗೆ ಪಶ್ಚಾತಾಪವಿದೆ. ಬಿಜೆಪಿ ಬಿಡುವ ನನ್ನ ರಾಜಕೀಯದಿಂದ ತಪ್ಪಾಗಿದೆ. ವೈಯಕ್ತಿಕ ಕಾರಣಗಳು ಹಾಗೂ ಅಂತಹ ವಾತಾವರಣದಿಂದ ಬಿಜೆಪಿ ಬಿಡುವಂತೆ ಆಯಿತು" ಎಂದು ಬೇಸರ ವ್ಯಕ್ತಪಡಿಸಿದರು.
"ನಾನು ಯಾವ ಪಕ್ಷಕ್ಕೂ ಟಿಕೆಟ್ ಕೇಳಲು ಹೋಗುವುದಿಲ್ಲ. ಮಾಜಿ ಸಚಿವರೊಬ್ಬರು ಒಂದು ತಿಂಗಳು ಕಾಯಿ ಎಂದು ಹೇಳಿದ್ದಾರೆ" ಎಂದು ಆನಂದ್ ಅಸ್ನೋಟಿಕರ್ ಹೇಳುವ ಮೂಲಕ ಕುತೂಹಲ ಮೂಡಿಸಿದರು.

ನಾನು ಇಂದು ಇಲ್ಲಿ ಇದ್ದೇನೆ
ಆನಂದ್ ಅಸ್ನೋಟಿಕರ್, "ಬಿಜೆಪಿ ನಾಯಕರ ಬೆಂಬಲದಿಂದ ಹಾಗೂ ಅವರ ಆಶೀರ್ವಾದದಿಂದ ನಾನು ಇಲ್ಲಿ ಇದ್ದೇನೆ. ರಾಜಕೀಯದ ಪ್ರಮುಖರು, ಸಂಸದ ಅನಂತ ಕುಮಾರ್ ಹೆಗಡೆಯವರನ್ನು ಕೂಡಾ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡು ಮುಂದಿನ ಹೆಜ್ಜೆ ಇಡುತ್ತೇನೆ. ಒಂದು ತಿಂಗಳಿನಲ್ಲಿ ನನ್ನ ರಾಜಕೀಯ ನಿರ್ಧಾರ ತಿಳಿಸುತ್ತೇನೆ" ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್‌ನಿಂದ ದೂರವಾಗಿರುವ ಆನಂದ್ ಅಸ್ನೋಟಿಕರ್ ಬಿಜೆಪಿ ಸೇರುವ ಪ್ರಯತ್ನ ನಡೆಸಿದ್ದಾರೆ ಎಂಬ ಸುದ್ದಿಗಳು ಹಲವು ದಿನಗಳಿಂದ ಹಬ್ಬಿತ್ತು. ಈಗ ಮಾಜಿ ಸಚಿವರು ನೀಡಿರುವ ಹೇಳಿಕೆ ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

ಬಿಜೆಪಿಯಲ್ಲಿದ್ದ ಆನಂದ್ ಅಸ್ನೋಟಿಕರ್
ಆನಂದ್ ಅಸ್ನೋಟಿಕರ್ ಕಾರವಾರ-ಅಂಕೋಲಾ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದಾರೆ. ಒಂದು ಬಾರಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. 2013ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಅವರು 44,847 ಮತಗಳನ್ನು ಪಡೆದು ಪಕ್ಷೇತರನಾಗಿ ಕಣಕ್ಕಿಳಿದಿದ್ದ ಸತೀಶ್ ಸೈಲ್ ವಿರುದ್ಧ ಸೋತಿದ್ದರು. 2018ರ ಚುನಾವಣೆಯಲ್ಲಿ ಆನಂದ್ ಅಸ್ನೋಟಿಕರ್ ಜೆಡಿಎಸ್‌ನಿಂದ ಕಣಕ್ಕಿಳಿದರು, ಸತೀಶ್ ಸೈಲ್ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಇಬ್ಬರೂ ಸೋಲು ಕಂಡರು. ಬಿಜೆಪಿಯ ರೂಪಾಲಿ ನಾಯ್ಕ್ ಗೆಲುವು ಸಾಧಿಸಿದರು.
ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿಯೇ ರೂಪಾಲಿ ನಾಯ್ಕ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2019ರ ಲೋಕಸಭೆ ಚುನಾವಣೆ ಬಳಿಕ ಜೆಡಿಎಸ್‌ನಿಂದ ದೂರವಾಗಿರುವ ಆನಂದ್ ಅಸ್ನೋಟಿಕರ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.

ರೂಪಾಲಿ ನಾಯ್ಕ್ ಒಪ್ಪುತ್ತಾರಾ?
ರೂಪಾಲಿ ನಾಯ್ಕ್ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದಾರೆ. ಆನಂದ್ ಅಸ್ನೋಟಿಕರ್ ಬಿಜೆಪಿಗೆ ಬಂದರೆ ಬಿಜೆಪಿ ಟಿಕೆಟ್‌ಗೆ ಪೈಪೋಟಿ ಎದುರಾಗಲಿದೆ. ಆದ್ದರಿಂದ ಅಸ್ನೋಟಿಕರ್ ಸೇರ್ಪಡೆಗೆ ಒಪ್ಪಿಗೆ ನೀಡಲಿದ್ದಾರೆಯೇ? ಎಂಬುದು ಬಹುಮುಖ್ಯ ಪ್ರಶ್ನೆಯಾಗಿದೆ.
2018ರಲ್ಲಿಯೇ ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಸತೀಶ್ ಸೈಲ್ ಸಹ ಈ ಬಾರಿ ಪಕ್ಷ ಸಂಘಟನೆ ಮಾಡುವ ಮೂಲಕ ಗೆಲುವಿಗಾಗಿ ತಂತ್ರ ರೂಪಿಸುತ್ತಿದ್ದಾರೆ.












Click it and Unblock the Notifications