'ಬಿಜೆಪಿಯವರಿಗೆ ಸಿಬಿಐ ಮೇಲೆ ಈಗ ನಂಬಿಕೆ ಬಂತೇ!'
ಬೆಂಗಳೂರು, ಮಾ. 23 : 'ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಾವಿನ ಪ್ರಕರಣದಲ್ಲಿ ಮುಖ್ಯಮಂತ್ರಿ, ಮಂತ್ರಿಗಳು, ಮತ್ತಿನ್ಯಾರೇ ಆಗಲಿ ಭಾಗಿಯಾಗಿದ್ದಾರೆ ಎಂದು ಸಾಬೀತಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ' ಎಂದು ರಾಜ್ಯಸಭಾ ಸದಸ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಹೇಳಿದರು.
ಸೋಮವಾರ ವಿಧಾನಸೌಧದಲ್ಲಿ ಟಿವಿ9 ಜೊತೆ ಮಾತನಾಡುತ್ತಿದ್ದ ಬಿ.ಕೆ.ಹರಿಪ್ರಸಾದ್, 'ಪ್ರತಿಪಕ್ಷಗಳು ಸಾವಿನಮನೆಯಲ್ಲಿ, ಸ್ಮಶಾನದಲ್ಲಿ ರಾಜಕಾರಣ ಮಾಡುತ್ತಿವೆ, ಡಿಕೆ ರವಿ ಅವರ ತಂದೆ-ತಾಯಿಗಳ ಭಾವನೆಗೆ ಸ್ಪಂದಿಸಿ ಪ್ರಕರಣವನ್ನು ಸಿಬಿಐ ತನಿಖೆ ಒಪ್ಪಿಸಲಾಗಿದೆಯೇ ವಿನಾ, ಪ್ರತಿಪಕ್ಷಗಳ ಆಗ್ರಹಕ್ಕೆ ಮಣಿದು ಸಿಬಿಐ ತನಿಖೆ ಘೋಷಿಸಿಲ್ಲ' ಎಂದರು. [ಡಿಕೆ ರವಿ ಪ್ರಕರಣ ಸಿಬಿಐ ತನಿಖೆಗೆ]

'ಡಿಕೆ ರವಿ ಅವರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಸರ್ಕಾರ ವಿಳಂಬ ಧೋರಣೆ ಅನುಸರಿಸಿಲ್ಲ ಎಂದು ಸಿದ್ದರಾಮಯ್ಯ ಅವರ ಸರ್ಕಾರವನ್ನು ಸಮರ್ಥಿಸಿಕೊಂಡು ಮಾತನಾಡಿದ ಹರಿಪ್ರಸಾದ್, ಸರ್ಕಾರಕ್ಕೆ ಕರ್ನಾಟಕದ ಪೊಲೀಸರ ಮೇಲೆ ನಂಬಿಕೆ ಇತ್ತು. ಆದ್ದರಿಂದ ಸಿಐಡಿ ತನಿಖೆಗೆ ಪ್ರಕರಣವನ್ನು ಒಪ್ಪಿಸಿದ್ದರು' ಎಂದು ತಿಳಿಸಿದರು. [ರವಿ ಪ್ರಕರಣ ಸಿಬಿಐಗೆ : ಯಾರು, ಏನು ಹೇಳಿದರು?]
'ಬಿಜೆಪಿಯವರು ಮಾದರಿ ಎಂದು ಹೇಳುವ ಗುಜರಾತ್ ಸೇರಿದಂತೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಪೊಲೀಸ್ ವ್ಯವಸ್ಥೆಗೆ ಹೋಲಿಕೆ ಮಾಡಿದರೆ ನಮ್ಮ ಕರ್ನಾಟಕದ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ' ಆದ್ದರಿಂದ ಸರ್ಕಾರ ಪ್ರಕರಣದ ತನಿಖೆಯನ್ನು ಅವರಿಗೆ ಒಪ್ಪಿಸಿತ್ತು ಎಂದರು. [ಸಿಐಡಿ, ಸಿಬಿಐ ನಡುವಿನ ವ್ಯತ್ಯಾಸವೇನು?]
ಸಿಬಿಐ ಬಗ್ಗೆ ಬಿಜೆಪಿಗೆ ನಂಬಿಕೆ ಇದೆಯೇ : 'ಇಷ್ಟು ದಿನ ಸಿಬಿಐ ಎಂದರೆ ಕಾಂಗ್ರೆಸ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ ಎಂದು ಹೇಳುತ್ತಿದ್ದ ಬಿಜೆಪಿಯವರಿಗೆ ಈಗ ಸಿಬಿಐ ಮೇಲೆ ನಂಬಿಕೆ ಬಂದಿದೆಯೇ? ಎಂದು ಪ್ರಶ್ನಿಸಿದ ಹರಿಪ್ರಸಾದ್ ಅವರು, ಸಿಬಿಐ ತನಿಖೆ ನಡೆಸುತ್ತಿರುವ ನಾನಾ ಪ್ರಕರಣಗಳ ವಿಚಾರಣೆ ಯಾವ ಹಂತದಲ್ಲಿದೆ ಎಂದು ತಿಳಿದಿದೆ' ಎಂದು ವ್ಯಂಗ್ಯವಾಡಿದರು
ಈ ಪ್ರಕರಣಗಳನ್ನು ಸಿಬಿಐಗೆ ವಹಿಸಿ : 'ಬಿಜೆಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಿ.ಕೆ.ಹರಿಪ್ರಸಾದ್ ಅವರು, ಯಡಿಯೂರಪ್ಪ ಅವರ ಪತ್ನಿ ಮೈತ್ರೇಯಾ ದೇವಿ ಸಾವಿನ ಪ್ರಕರಣ, ಬಿಜೆಪಿ ನಾಯಕ ಉಡುಪಿ ರಘುಪತಿ ಭಟ್ ಪತ್ನಿ ಪದ್ಮಪ್ರಿಯ ನಿಗೂಢ ಸಾವಿನ ಪ್ರಕರಣ, ಅಕ್ರಮ ಗಣಿಗಾರಿಕೆ ಪ್ರಕರಣ, ರಾಮದಾಸ್ ಪ್ರಕರಣವನ್ನು ಸಿಬಿಐಗೆ ವಹಿಸಲು ಕಾಂಗ್ರೆಸ್ ಒತ್ತಾಯ ಮಾಡಿರಲಿಲ್ಲವೇ? ಎಂದು ಪ್ರಶ್ನಿಸಿದರು.
'ಅಂದು ಸಿಬಿಐ ಎಂದರೆ ಕಾಂಗ್ರೆಸ್ ಕೈಗೊಂಬೆ. ಎಂದೆಲ್ಲ ಅಂದು ಬಿಜೆಪಿ ವ್ಯಂಗ್ಯ ಮಾಡುತ್ತಿತ್ತು. ಆದರೆ ಇಂದು ಬಿಜೆಪಿ, ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದೆ ಎಂದ ಅವರು, ಡಿಕೆ ರವಿ ಅವರ ಪ್ರಕರಣದಲ್ಲಿ ಸರ್ಕಾರದ್ದೇ ತಪ್ಪು ಎಂದು ಬಿಂಬಿಸಲು ವಿಪಕ್ಷಗಳು ಸತತ ಪ್ರಯತ್ನ ನಡೆಸಿವೆ' ಎಂದು ದೂರಿದರು.












Click it and Unblock the Notifications