ಆಸ್ತಿ ತೆರಿಗೆ ಯಾವಾಗ ಅನ್ವಯ?, ತೀರ್ಪಿನಲ್ಲಿ ಸ್ಪಷ್ಟಪಡಿಸಿದ ಹೈಕೋರ್ಟ್
ಬೆಂಗಳೂರು, ಜುಲೈ 28: ಸ್ವಾಧೀನಾನುಭವ ಪ್ರಮಾಣ ಪತ್ರ (ಒ.ಸಿ) ವಿತರಣೆ ನಂತರವಷ್ಟೇ ಕಟ್ಟಡಕ್ಕೆ ತೆರಿಗೆ ಅನ್ವಯವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮೈಸೂರು ಮಹಾನಗರ ಪಾಲಿಕೆ ನೀಡಿದ್ದ ತೆರಿಗೆ ಬೇಡಿಕೆ ನೋಟಿಸ್ ಪ್ರಶ್ನಿಸಿ ಬಿ. ಎಂ. ಹ್ಯಾಬಿಟೇಟ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಸ್ವಾಧೀನಾನುಭವ ಪ್ರಮಾಣಪತ್ರ ವಿತರಣೆ ನಂತರವಷ್ಟೇ ಕಟ್ಟಡಕ್ಕೆ ತೆರಿಗೆ ಅನ್ವಯವಾಗುತ್ತದೆ. ಅಲ್ಲಿಯವರೆಗೆ ಖಾಲಿ ಜಾಗಕ್ಕೆ ಮಾತ್ರ ತೆರಿಗೆ ವಿಧಿಸಬಹುದು ಎಂದು ಕೋರ್ಟ್ ಹೇಳಿದೆ.

ವಾದ-ಪ್ರತಿವಾದವೇನು?: ಅರ್ಜಿದಾರರ ಪರ ವಕೀಲರು, ಮಲ್ಟಿಫ್ಲೆಕ್ಸ್ ನಿರ್ಮಾಣಕ್ಕೆ ಅನುಮತಿ ನೀಡಲು ಜಿಲ್ಲಾಧಿಕಾರಿ ವಿಳಂಬ ಮಾಡಿದ ಕಾರಣ ನಿಗದಿಯಂತೆ 2010ಕ್ಕೆ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಲಿಲ್ಲ.
ಪಾಲಿಕೆಯಿಂದ ಒ.ಸಿ ಪಡೆದ ನಂತರವಷ್ಟೇ ಕಟ್ಟಡವನ್ನು ಬಳಕೆ ಮಾಡಲಾಗಿದೆ. ಹಾಗಾಗಿ, ಪಾಲಿಕೆಯು ಒ.ಸಿ ವಿತರಿಸಿದ ದಿನದಿಂದ ಆಸ್ತಿ ತೆರಿಗೆ ಸಂಗ್ರಹಿಸಬೇಕೇ ಹೊರತು ಅದಕ್ಕೂ ಹಿಂದಿನ ಅವಧಿಗಲ್ಲಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಪಾಲಿಕೆ ಪರ ವಕೀಲರು, ನಕ್ಷೆ ಅನುಮೋದನೆ ಪ್ರಕಾರ ಕಟ್ಟಡ ನಿರ್ಮಾಣ ಕಾಮಗಾರಿಯು 2008ಕ್ಕೆ ಪೂರ್ಣಗೊಳಿಸಬೇಕಿತ್ತು. ಜಿಲ್ಲಾಧಿಕಾರಿಗಳ ಅನುಮತಿ ಹಾಗೂ ಅಗ್ನಿಶಾಮಕ ದಳದ ಅನುಮತಿ ವಿಳಂಬವಾಗಿದೆ ಎನ್ನುವ ಕಾರಣಕ್ಕೆ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುವಂತಿಲ್ಲಎಂದು ತಿಳಿಸಿದರು.
ಎರಡೂ ಕಡೆ ವಾದ ಆಲಿಸಿದ ಬಳಿಕ ನ್ಯಾಯಾಲಯ, "ಆಸ್ತಿಯನ್ನು ಪರಿಶೀಲಿಸಿ ಒ.ಸಿ ನೀಡುವಲ್ಲಿ ಪಾಲಿಕೆ ಸಾಕಷ್ಟು ವಿಳಂಬ ಮಾಡಿದೆ. ಒ.ಸಿ ಪಡೆಯುವ ಮುನ್ನ ಅರ್ಜಿದಾರರು ಕಟ್ಟಡವನ್ನು ಬಳಕೆ ಮಾಡಿದ್ದಾರೆಂಬುದಕ್ಕೆ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ. ಒ.ಸಿ ಪಡೆದ ನಂತರವೇ ಕಟ್ಟಡವನ್ನು ಬಳಕೆ ಮಾಡಲಾಗಿದೆ. ಹಾಗಾಗಿ, ಒ.ಸಿ ಪಡೆದ ನಂತರ ಮಾತ್ರ ಪಾಲಿಕೆ ತೆರಿಗೆ ವಿಧಿಸಬಹುದಾಗಿದೆ" ಎಂದು ಆದೇಶಿಸಿದೆ.
ಅಲ್ಲದೆ, ಕಟ್ಟಡಕ್ಕೆ 2011ರ ಏ.25ಕ್ಕೆ ಒ.ಸಿ ನೀಡಿರುವುದರಿಂದ ಅಲ್ಲಿಂದಾಚೆಗೆ ತೆರಿಗೆಯನ್ನು ವಸೂಲು ಮಾಡಬಹುದು ಎಂದು ಮೈಸೂರು ಮಹಾನಗರ ಪಾಲಿಕೆಗೆ ನ್ಯಾಯಾಲಯ ಸೂಚಿಸಿದೆ.
ಯಾವುದೇ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡು ಅದಕ್ಕೆ ಸಕ್ಷಮ ಪ್ರಾಧಿಕಾರದಿಂದ ಒ.ಸಿ ಪಡೆದ ನಂತರವಷ್ಟೇ ಅದಕ್ಕೆ ಆಸ್ತಿ ತೆರಿಗೆ ವಿಧಿಸಲು ನಿಯಮಗಳಲ್ಲಿಅವಕಾಶವಿದೆ. ಅಲ್ಲಿಯವರೆಗೆ ಖಾಲಿ ಅಥವಾ ಮುಕ್ತ ಜಾಗಕ್ಕೆ ಮಾತ್ರ ತೆರಿಗೆ ವಿಧಿಸಬಹುದಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ಮೈಸೂರಿನ ಜಯಲಕ್ಷ್ಮೀಪುರಂನ ವಿನೋಬನಗರದಲ್ಲಿಅರ್ಜಿದಾರ ಬಿ. ಎಂ. ಹ್ಯಾಬಿಟೇಟ್ ಸಂಸ್ಥೆಯು ಮಲ್ಟಿಫ್ಲೆಕ್ಸ್ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಮೈಸೂರು ಮಹಾನಗರ ಪಾಲಿಕೆ 2006ರಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿ, ನಕ್ಷೆ ಮಂಜೂರು ಮಾಡಿತ್ತು.
ಅದರಂತೆ 2006ರಲ್ಲಿಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಆದರೆ ಕಟ್ಟಡಕ್ಕೆ 2011ರ ಏ.25ರಂದು ಒ.ಸಿ ನೀಡಲಾಗಿತ್ತು. ಮೈಸೂರು ಮಹಾನಗರ ಪಾಲಿಕೆಯು 2015ರಲ್ಲಿ ನೋಟಿಸ್ ನೀಡಿ 2007ರಿಂದ ಅನ್ವಯವಾಗುವಂತೆ ಆಸ್ತಿ ತೆರಿಗೆ ಪಾವತಿಸಬೇಕೆಂದು ಸೂಚಿಸಿತ್ತು. ಅದನ್ನು ಪ್ರಶ್ನಿಸಿ ಬಿ. ಎಂ. ಹ್ಯಾಬಿಟೇಟ್ ಸಂಸ್ಥೆಯು ಹೈಕೋರ್ಟ್ ಮೊರೆ ಹೋಗಿತ್ತು.












Click it and Unblock the Notifications