ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿದ ಸರ್ಕಾರ
ಬೆಂಗಳೂರು, ಮೇ 26; ಕರ್ನಾಟಕ ಸರ್ಕಾರ ಆಡಳಿತ ಹಿತದೃಷ್ಟಿಯಿಂದ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳನ್ನು ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಿದೆ. ಹಲವು ಕಾರಣಗಳಿಂದ ಚುನಾವಣೆ ತಡವಾಗುತ್ತಿದ್ದು, ಅಧ್ಯಕ್ಷ/ ಉಪಾಧ್ಯಕ್ಷ ಹುದ್ದೆ ಆಯ್ಕೆ ನಡೆದಿಲ್ಲ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಟಿ. ಮಂಜುನಾಥ ಈ ಕುರಿತು ಆದೇಶ ಹೊರಿಡಿಸಿದ್ದಾರೆ. ರಾಜ್ಯಪತ್ರದಲ್ಲಿಯೂ ಇದನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.

ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಕಲಂ 42ರ ಉಪ ಕಲಂ-5 ರಲ್ಲಿ ಅಧ್ಯಕ್ಷ/ ಉಪಾಧ್ಯಕ್ಷ ಸ್ಥಾನಗಳ ಚುನಾವಣಾ ಪ್ರಕ್ರಿಯೆ ಬಗ್ಗೆ ವಿವರಿಸಲಾಗಿದೆ ಹಾಗೂ ಅಧ್ಯಕ್ಷ/ ಉಪಾಧ್ಯಕ್ಷ ಸ್ಥಾನ ಖಾಲಿ ಇರುವ ಅವಧಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದ್ದು, ಅದರನ್ವಯ ನಗರಸಭೆಗಳಿಗೆ ಡೆಪ್ಯೂಟಿ ಕಮೀಷನರ್ ಅಥವಾ ಸಮಾನ ದರ್ಜೆಯ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಪುರಸಭೆಗಳಿಗೆ ಸಂಬಂಧಿಸಿದಂತೆ ಅಸಿಸ್ಟಂಟ್ ಕಮೀಷನರ್ ದರ್ಜೆಗೆ ಕಡಿಮೆ ಇಲ್ಲದ ಅಧಿಕಾರಿ ಕಾರ್ಯಗಳನ್ನು ನಡೆಸಬೇಕು ಎಂದು ವಿವರಣೆ ನೀಡಲಾಗಿದೆ.
ಜಿಲ್ಲಾ ಮುಖ್ಯಸ್ಥ ಕಾರ್ಯಸ್ಥಾನದಲ್ಲಿನ ಮುನ್ಸಿಪಲ್ ಕೌನ್ಸಿಲ್ ತಹಶೀಲ್ದಾರ್ ಅಥವಾ ಸಮಾನ ದರ್ಜೆಯ ಅಧಿಕಾರಿಗಳು ಮತ್ತು ಇತರ ಮುನ್ಸಿಪಲ್ ಕೌನ್ಸಿಲ್‌ಗಳ ಸಂದರ್ಭದಲ್ಲಿ (ಪಟ್ಟಣ ಪಂಚಾಯಿತಿ) ತಹಶೀಲ್ದಾರರು ಇವರು ಪ್ರಕಾರ್ಯಗಳನ್ನು ನೆರವೇರಿಸತಕ್ಕದ್ದು ಎಂದು ತಿಳಿಸಲಾಗಿದೆ.

ಆದ್ದರಿಂದ, ಕರ್ನಾಟಕ ಪೌರಸಭಗಳ ಕಾಯ್ದೆ 1964ರ ಕಲಂ-315 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಕೆಳಕಂಡ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ/ ಉಪಾಧ್ಯಕ್ಷ ಹುದ್ದೆಗಳಿಗೆ ಚುನಾವಣೆ ನಡೆಸುವವರೆಗೆ ಅವುಗಳ ಕಾರ್ಯನಿರ್ವಹಣೆಗಾಗಿ ಹಾಗೂ ಆಡಳಿತ ಹಿತದೃಷ್ಟಿಯಿಂದ ಆಡಳಿತಾಧಿಕಾರಿಗಳನ್ನು ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಿದೆ ಎಂದು ಆದೇಶದಲ್ಲಿ ಹೇಳಿದ್ದಾರೆ.
ಯಾವ-ಯಾವ ಸ್ಥಳೀಯ ಸಂಸ್ಥೆಗಳು?; ಸರ್ಕಾರ ಆಡಳಿತಾಧಿಕಾರಿಗಳನ್ನು ನಗರಸಭೆ ಹುಣಸೂರು, ನಗರಸಭೆ ನಿಪ್ಪಾಣಿ, ನಗರಸಭೆ ನಂಜನಗೂಡು, ನಗರಸಭೆ ಗೋಕಾಕ್, ನಗರಸಭೆ ಉಳ್ಳಾಲ, ನಗರಸಭೆ ಪುತ್ತೂರಿಗೆ ನೇಮಕ ಮಾಡಿದೆ.
ಪುರಸಭೆಗಳಾದ ಚಿಕ್ಕೋಡಿ, ಕೊಣ್ಣೂರು, ಮೂಡಲಗಿ, ಬೈಲಹೊಂಗಲ, ರಾಮದುರ್ಗ, ಸಂಕೇಶ್ವರ, ಕಾರ್ಕಳ, ಹುಕ್ಕೇರಿ, ಕಡೂರು, ಕುಂದಾಪುರ, ಸಕಲೇಶಪುರ, ಸದಲಗಾ, ಸವದತ್ತಿ, ಹೊಳಲ್ಕೆರೆ, ಕುಡಚಿ, ಕೆ. ಆರ್. ನಗರಕ್ಕೆ ಆಡಳಿತಾಧಿಕಾರಿ ನೇಮಿಸಿದೆ.
ಪುರಸಭೆ ಬಂಟ್ವಳ, ಮೂಡಿಬಿದಿರೆ, ಚಿಂಚೋಳಿ, ಎಚ್. ಡಿ. ಕೋಟೆ, ಪಿರಿಯಾಪಟ್ಟಣ, ಟಿ. ನರಸೀಪುರ, ಚನ್ನರಾಯಪಟ್ಟಣ, ಹೊಳೆನರಸೀಪುರ, ಬನ್ನೂರು, ಹೊನ್ನಾಳಿಗೆ ಆಡಳಿತಾಧಿ ನೇಮಕ ಮಾಡಿ ಆದೇಶಿಸಿದೆ.
ಉಳಿದಂತೆ ಪಟ್ಟಣ ಪಂಚಾಯಿತಿಗಳಾದ ಸಾಲಿಗ್ರಾಮ, ಸೋಮವಾರಪೇಟೆ, ಖಾನಾಪುರ, ಸುಳ್ಯ, ಆಲೂರು, ಅರಕಲಗೂಡು, ಮುಲ್ಕಿ ಮತ್ತು ಬೆಳ್ತಂಗಡಿಗೆ ಆಡಳಿತಾಧಿಕಾರಿ ನೇಮಕವಾಗಿದೆ.












Click it and Unblock the Notifications