Anant Nag: ಸಕ್ರಿಯ ರಾಜಕಾರಣಕ್ಕೆ ನಟ ಅನಂತ್ ನಾಗ್, ಇಂದು ಬಿಜೆಪಿ ಸೇರ್ಪಡೆ
2023 ರ ಚುನಾವಣೆಗೆ ಬಿಜೆಪಿ ಪ್ರಚಾರದ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಈ ವೇಳೆ ಅನಂತ್ ನಾಗ್ ಕೂಡ ಸಕ್ರೀಯರಾಗಿರಲಿದ್ದಾರೆ ಎನ್ನಲಾಗಿದೆ.
ಬೆಂಗಳೂರು,ಫೆಬ್ರವರಿ22: ಸಿನಿಮಾರಂಗದಲ್ಲೂ ಸಕ್ರೀಯರಾಗಿರುವ ಹಿರಿಯ ನಟ ಅನಂತ್ ನಾಗ್ ಇದೀಗ ರಾಜಕೀಯದಲ್ಲೂ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುಲು ನಿರ್ಧರಿಸಿದ್ದು, ಇಂದು (ಫೆಬ್ರವರಿ 22 ಬುಧವಾರ) ಅನಂತ್ ನಾಗ್ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ.
ನಗರದ ಮಲ್ಲೇಶ್ವರ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಜೆ 4:30 ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಪಕ್ಷವನ್ನ ಸೇರುತ್ತಿದ್ದಾರೆ.
ಪಕ್ಷ ಸೇರ್ಪಡೆಯ ಸಂದರ್ಭದಲ್ಲಿ ಸಚಿವ ಮುನಿರತ್ನ, ಡಾ. ಸುಧಾಕರ್ ಹಾಗೂ ಇತರ ನಾಯಕರು ಕಾರ್ಯಕ್ರದಲ್ಲಿ ಹಾಜರಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಿಂದೆ ಜೆ.ಎಚ್. ಪಟೇಲ್ ಸರ್ಕಾರದಲ್ಲಿ ಅನಂತ್ ನಾಗ್ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಶಾಸಕರಾಗಿ, ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅನಂತ್ ನಾಗ್, ಜೆ.ಎಚ್. ಪಟೇಲ್ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
2004ರಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಸೋಲನ್ನ ಅನುಭವಿಸಿದ್ದರು. 2023ರ ಚುನಾವಣೆಗೆ ಬಿಜೆಪಿ ಪ್ರಚಾರದ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಈ ವೇಳೆ ಅನಂತ್ ನಾಗ್ ಕೂಡ ಸಕ್ರೀಯರಾಗಿರಲಿದ್ದಾರೆ ಎನ್ನಲಾಗಿದೆ.

ಮುಂದಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ರಾಜ್ಯಕ್ಕೆ ಪದೇ ಪದೇ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಕೇಂದ್ರ ನಾಯಕರನ್ನ ಕರೆಸುವ ಮೂಲಕ ಭರ್ಜರಿ ಪ್ರಚಾರವನ್ನ ರಾಜ್ಯ ಬಿಜೆಪಿ ನಾಯಕರು ನಡೆಸುತ್ತಿದ್ದಾರೆ.
ಈಗಾಗಲೇ ಮೂರು ದಿನಗಳ ಕಾಲ ರಾಜ್ಯ ಪ್ರವಾಸವನ್ನ ಜೆ ಪಿ ನಡ್ಡಾ ಅವರು ಮಾಡುತ್ತಿದ್ದು, ನಾಳೆ(ಫೆ 23) ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.












Click it and Unblock the Notifications