ಆಸ್ಪತ್ರೆಗೆ ಸೇರಿಸುವ ನೆಪದಲ್ಲಿ ಅಪಘಾತವಾದ ವ್ಯಕ್ತಿಯಿಂದ ₹80,000 ಪಡೆದು ಪರಾರಿ
ಈಗೆಲ್ಲ ಮತ್ತೊಬ್ಬರ ಕಷ್ಟಕ್ಕೆ ಮಿಡಿಯುವ ಮನಸ್ಥಿತಿ ಜನರಲ್ಲಿ ವಿರಳವಾಗುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಆಪತ್ತಿನಲ್ಲೂ ಮೋಸ ವಂಚನೆ ಮಾಡುವ ಮೂಲಕ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ರಸ್ತೆಗಳಲ್ಲಿ ಅಪಘಾತವಾದವರ ಸಹಾಯಕ್ಕೆ ಜನ ಅಷ್ಟಾಗಿ ಧಾವಿಸುವುದಿಲ್ಲ. ಆದರೆ ಇಲ್ಲಿಯ ಕಥೆಯೇ ಬೇರೆ, ಅಪಘಾತವಾಗಿದ್ದ ವ್ಯಕ್ತಿಯ ಸಹಾಯಕ್ಕೆ ಬಂದವರು ಆಸ್ಪತ್ರೆಗೆ ದಾಖಲಿಸುವ ಭರವಸೆ ನೀಡಿ, ಆತನ ಫೋನ್‌ಪೇನಿಂದ 80,000 ರೂಪಾಯಿ ಪಡೆದು, ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮೈಸೂರು ಜಿಲ್ಲೆಯ ಹುಣಸೂರು ವ್ಯಾಪ್ತಿಯ ಬೆಂಕಿಪುರ ಗ್ರಾಮದ ಗಣೇಶ್ ಎಂಬುವವರು ಕಡಕೊಳ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ಮಧ್ಯರಾತ್ರಿ ಮನೆಗೆ ವಾಪಸ್ ಬರುವಾಗ ನಾಯಿ ಅಡ್ಡಲಾಗಿ ಬಂದಿದ್ದರಿಂದ ರಸ್ತೆಗೆ ಬಿದ್ದು ಪ್ರಜ್ಞೆ ತಪ್ಪಿದ್ದರು. ಆಗ ಯಾರೋ ಅಪರಿಚಿತ ವ್ಯಕ್ತಿಗಳು ಬಂದು ಇವರನ್ನು ಎತ್ತಿ, ನಿಮ್ಮನ್ನು ಆಸ್ಪತ್ರೆಗೆ ಸೇರಿಸುತ್ತೇನೆ ಎಂದು ಹೇಳಿ ಅವರ ಮೊಬೈಲ್‌ನಿಂದ ಬಲವಂತವಾಗಿ ಯುಪಿಐ ಪಿನ್ ನಂಬರ್ ಪಡೆದು, ಫೋನ್ ಪೇಯಿಂದ 80,000 ರೂಪಾಯಿಗಳನ್ನು ತನ್ನ ಮೊಬೈಲ್‌ಗೆ ವರ್ಗಾಯಿಸಿಕೊಂಡಿದ್ದರು.

ಹಣ ಪಡೆದ ನಂತರ ಗಣೇಶ್ ಅವರನ್ನು ಆಸ್ಪತ್ರೆಗೂ ಸಹ ಸೇರಿಸದೆ, ಆ ಮೊಬೈಲ್ ಅಲ್ಲೇ ಬಿಟ್ಟು ಪರಾರಿಯಾಗಿದ್ದ. ಬಳಿಕ ಅವರು ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಆರೋಪಿಯ ಪತ್ತೆಯ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಸಿ.ಮಲ್ಲಿಕ್ ಹಾಗೂ ಎಲ್.ನಾಗೇಶ್ ಮಾರ್ಗದರ್ಶನದಲ್ಲಿ ಮೈಸೂರು ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿ ಆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಬ್ಬರ ಬಂಧನ
ಆರೋಪಿಗಳು ಮೈಸೂರು ನಗರದ ಮಹದೇವಪುರದ ರಮೇಶ.ಜಿ ಬಿನ್ ಗೋವಿಂದ (25), ರಾಮಬಾಯಿ ನಗರದ ಮನು ಬಿನ್ ಮುತ್ತಣ್ಣ ಎಂದು ತಿಳಿದುಬಂದಿದ್ದು, ವಶಕ್ಕೆ ಪಡೆದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಆರೋಪಿಗಳ ಕಡೆಯಿಂದ ಕೃತ್ಯಕ್ಕೆ ಬಳಸಿದ್ದ ಎರಡು ಮೊಬೈಲ್‌ಗಳು ಹಾಗೂ ಸಂತ್ರಸ್ತ ಗಣೇಶ್ ಅವರಿಂದ ಪಡೆದಿದ್ದ 80,000 ರೂಪಾಯಿ ಹಣ ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಉಪಾಧೀಕ್ಷಕ ಆರ್.ಶ್ರೀಕಾಂತ್, ಪೊಲೀಸ್ ನಿರೀಕ್ಷಕ ಸುನೀಲ್.ಎಸ್.ಪಿ, ಪೊಲೀಸ್ ಉಪ ನಿರೀಕ್ಷಕ ಸುರೇಶ್ ಬೋಪಣ್ಣ ಹಾಗೂ ಸಿಬ್ಬಂದಿಗಳಾದ ಮಂಜುನಾಥ, ರಂಗಸ್ವಾಮಿ, ಬಸವರಾಜು ಈ ಪ್ರಕರಣದ ಪತ್ತೆಯಲ್ಲಿ ಭಾಗಿಯಾಗಿದ್ದರು.












Click it and Unblock the Notifications