7th Pay Commission: ನಿವೃತ್ತ ಸರ್ಕಾರಿ ನೌಕರರಿಗೆ ಸಿಗುವ ವಿವಿಧ ಸೌಲಭ್ಯಗಳು
ಬೆಂಗಳೂರು, ಅಕ್ಟೋಬರ್ 07: ಕರ್ನಾಟಕ ಸರ್ಕಾರ ರಚನೆ ಮಾಡಿದ್ದ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದೆ. 558 ಪುಟಗಳ ಸಂಪುಟ-1ರ ವರದಿಯನ್ನು ಆಗಸ್ಟ್‌ನಿಂದಲೇ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯೂ ಒಪ್ಪಿಗೆ ನೀಡಿದೆ. ವರದಿಯಲ್ಲಿ ನಿವೃತ್ತ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯಗಳ ಕುರಿತು ಹಲವು ಶಿಫಾರಸುಗಳನ್ನು ಮಾಡಲಾಗಿದೆ. ಅವುಗಳಿಗೆ ಸಾಕಷ್ಟು ವಿವರಣೆಗಳನ್ನು ಸಹ ಆಯೋಗ ನೀಡಿದೆ. ನಿವೃತ್ತರಿಗೆ ಸಿಗುವ ವಿವಿಧ ಸೌಲಭ್ಯಗಳ ಮಾಹಿತಿ ಇಲ್ಲಿದೆ.
ಪೂರ್ಣ ಪ್ರಮಾಣದ ನಿವೃತ್ತಿ ವೇತನಕ್ಕೆ ಬೇಕದ ಕನಿಷ್ಠ ಅರ್ಹತಾದಾಯಕ ಸೇವೆ. ಪ್ರಸ್ತುತ ಪೂರ್ಣ ಪ್ರಮಾಣದ ನಿವೃತ್ತಿ ವೇತನವನ್ನು ಪಡೆಯುವುದಕ್ಕಾಗಿ ಕನಿಷ್ಠ ಅರ್ಹತಾದಾಯಕ ಸೇವೆಯು 30 ವರ್ಷಗಳಿಗೆ ನಿಗದಿಯಾಗಿರುತ್ತದೆ. ದಿನಾಂಕ 11.01.2019 ರಂದು ಇದನ್ನು ರಾಜ್ಯ ಸರ್ಕಾರವು 33 ವರ್ಷಗಳಿಂದ 30 ವರ್ಷಗಳಿಗೆ ಇಳಿಸಿದೆ. ಕನಿಷ್ಠ ಅರ್ಹತಾದಾಯಕ ಸೇವೆಯನ್ನು 30 ವರ್ಷಗಳಿಂದ 25 ವರ್ಷಗಳಿಗೆ ಮತ್ತಷ್ಟು ಇಳಿಸುವಂತೆ ಕೋರಿ ಆಯೋಗವು ಮನವಿಗಳನ್ನು ಸ್ವೀಕರಿಸಿರುತ್ತದೆ.

ರಾಜ್ಯ ಸರ್ಕಾರಕ್ಕೆ ಉನ್ನತ ಮಟ್ಟದಲ್ಲಿ ಅನುಭವಿ ಅಧಿಕಾರಿಗಳ ಅಗತ್ಯವಿದ್ದು ಮತ್ತು ಪ್ರಸ್ತುತ ಕನಿಷ್ಠ ಅರ್ಹತಾದಾಯಕ ಸೇವೆಯ ವಯಸ್ಸನ್ನು ಮತ್ತಷ್ಟು ಕಡಿತಗೊಳಿಸುವುದು ಆಡಳಿತಾತ್ಮಕವಾಗಿ ಪ್ರಯೋಜನಕಾರಿಯಲ್ಲ ಎಂದು ಆಯೋಗವು ಅಭಿಪ್ರಾಯ ಪಡುತ್ತದೆ. ಸರ್ಕಾರಿ ಸೇವೆಗೆ ತಡವಾಗಿ ಸೇರಿದ ಕಾರಣಕ್ಕಾಗಿ 30 ವರ್ಷಗಳ ಕನಿಷ್ಠ ಅರ್ಹತಾದಾಯಕ ಸೇವೆಯನ್ನು ಸಲ್ಲಿಸದೇ ನಿವೃತ್ತಿಯಾಗುವ ನೌಕರರು ತಮ್ಮ ಸೇವೆಯ ವರ್ಷಗಳಿಗನುಸಾರ ನಿವೃತ್ತಿ ವೇತನವನ್ನು ಪಡೆಯುವುದರಿಂದ, ಕನಿಷ್ಠ ಅರ್ಹತಾದಾಯಕ ಸೇವೆಯನ್ನು ಮತ್ತಷ್ಟು ಇಳಿಸಲು ಯಾವುದೇ ಆಧಾರವಿಲ್ಲ ಎಂದು ಆಯೋಗವು ಭಾವಿಸುತ್ತದೆ. ಆದ್ದರಿಂದ, ಪೂರ್ಣ ಪ್ರಮಾಣದ ನಿವೃತ್ತಿ ವೇತನವನ್ನು ಪಡೆಯುವುದಕ್ಕಾಗಿ ಪ್ರಸ್ತುತ ಜಾರಿಯಲ್ಲಿರುವ 30 ವರ್ಷಗಳ ಕನಿಷ್ಠ ಅರ್ಹತಾದಾಯಕ ಸೇವೆಯನ್ನು ಮುಂದುವರೆಸಲು ಆಯೋಗವು ಶಿಫಾರಸ್ಸು ಮಾಡುತ್ತದೆ.
ಹೆಚ್ಚುವರಿ ನಿವೃತ್ತಿ, ವೇತನ: ಪ್ರಸ್ತುತ ಹೆಚ್ಚುವರಿ ನಿವೃತ್ತಿ ವೇತನವನ್ನು ಮೂಲ ವೇತನದ ಶೇ 20, ಶೇ 30, ಶೇ 40, ಶೇ 50 ಮತ್ತು ಶೇ 100 ಅನ್ನು ಅನುಕ್ರಮವಾಗಿ 80-85 ವಯಸ್ಸಿನವರಿಗೆ, 85-90 ವಯಸ್ಸಿನವರಿಗೆ, 90-95 ವಯಸ್ಸಿನವರಿಗೆ, 95-100 ವಯಸ್ಸಿನವರಿಗೆ ಮತ್ತು 100 ವರ್ಷ ಮತ್ತು ಮೇಲ್ಮಟ್ಟ ವಯಸ್ಸಿನವರಿಗೆ ಸಂದಾಯ ಮಾಡಲಾಗುತ್ತಿದೆ. ಇದು ಕೇಂದ್ರ ಸರ್ಕಾರದ ಕಲ್ಪಿಸಿರುವ ಅವಕಾಶಗಳನ್ನು ಹೋಲುತ್ತದೆ.
ಕೆಎಸ್‌ಜಿಇಎ ಮತ್ತು ಕೆಎಸ್‌ಜಿಆರ್‌ಇಎ ಎರಡೂ ಸಂಘಗಳು, 70 ರಿಂದ 80 ವಯೋಮಾನದವರಿಗೂ ಶೇ 10ರಷ್ಟು ಹೆಚ್ಚುವರಿ ನಿವೃತ್ತಿ ವೇತನವನ್ನು ಸಂದಾಯ ಮಾಡಲು ಕೋರಿರುತ್ತವೆ. ಈ ವಯೋಮಾನದ ನಿವೃತ್ತಿ ವೇತನದಾರರಿಗೆ ಹೆಚ್ಚುವರಿ ನಿವೃತ್ತಿ ವೇತನ ಸೌಲಭ್ಯದ ಈ ಅವಕಾಶವು ಕೆಲವು ರಾಜ್ಯಗಳಲ್ಲಿ ಜಾರಿಯಲ್ಲಿರುವುದನ್ನು ಆಯೋಗವು ಗಮನಿಸಿದೆ. ಈ ಬೇಡಿಕೆಯು ಪರಿಗಣನೆಗೆ ಅರ್ಹವೆಂದು ಪರಿಗಣಿಸಿ, 70 ರಿಂದ 80 ವರ್ಷಗಳ ವಯಸ್ಸಿನ ಸಮೂಹದ ಪಿಂಚಣಿದಾರರಿಗೆ ಶೇ10ರಷ್ಟು ಹೆಚ್ಚುವರಿ ನಿವೃತ್ತಿ ವೇತನವನ್ನು ಪಾವತಿಸಲು ಆಯೋಗವು ಶಿಫಾರಸ್ಸು ಮಾಡುತ್ತದೆ.
ನಿವೃತ್ತಿ ವೇತನದ ಪರಿವರ್ತನೆ: ಪ್ರಸ್ತುತದಲ್ಲಿ, ಸರ್ಕಾರಿ ನೌಕರರು, ಆತ ಅಥವಾ ಆಕೆಯ ನಿವೃತ್ತಿಯ ಸಮಯದಲ್ಲಿ ನಿವೃತ್ತಿ ವೇತನದ 13ನೇ ಭಾಗವನ್ನು ಪರಿವರ್ತಿಸಲು ಅವಕಾಶವಿದ್ದು, ಪರಿವರ್ತಿತ ಅವಧಿಯು 15 ವರ್ಷಗಳಗಿರುತ್ತವೆ. ಪರಿವರ್ತನೆಯು ಐಚ್ಛಿಕವಾಗಿದ್ದು ಮತ್ತು ಪರಿವರ್ತಿಸಲಾದ ಹಣದ ಮೇಲೆ ಸರ್ಕಾರವು ಕೇವಲ ಅತ್ಯಲ್ಪ ಬಡ್ಡಿ ದರವನ್ನು ವಿಧಿಸುತ್ತದೆ. ಸರ್ಕಾರವು ಪರಿವರ್ತಿತ ಹಣ ಮತ್ತು ಅದರ ಮೇಲಿನ ಬಡ್ಡಿಯನ್ನು ಪರಿವರ್ತಿತ ಅವಧಿಯು ಮುಕ್ತಾಯವಾಗುವ ಮೊದಲು ಮರುಪೂರಣ ಮಾಡಿಕೊಳ್ಳುತ್ತದೆ.
ಆಯೋಗವು ಹಲವು ಸಂಘಗಳಿಂದ ಜಾರಿಯಲ್ಲಿರುವ ಪರಿವರ್ತನೆಯ ಅವಧಿಯನ್ನು 15 ವರ್ಷಗಳಿಂದ 12 ವರ್ಷಗಳಿಗೆ ಇಳಿಸಲು ಮನವಿಗಳನ್ನು ಸ್ವೀಕರಿಸಿರುತ್ತದೆ. ಗುಜರಾತ್‌ನಲ್ಲಿ ಪರಿವರ್ತನೆ ಅವಧಿಯು 13 ವರ್ಷಗಳಾಗಿದ್ದರೂ, ಇತರ ರಾಜ್ಯಗಳಲ್ಲಿ ಮತ್ತು ಕೇಂದ್ರ ಸರ್ಕಾರದಲ್ಲಿ ಇದನ್ನು 15 ವರ್ಷಗಳ ಮುಂದುವರೆಸಲಾಗಿದೆ ಎಂಬುದನ್ನ ಗಮನಿಸಲಾಗಿದೆ.
ಈ ವಿಷಯವನ್ನು ನಾವು ಪರಿಶೀಲಿಸಿರುತ್ತೇವೆ ಮತ್ತು ಪರಿವರ್ತನೆಯ ಅವಧಿಯನ್ನು ಇಳಿಸುವಂತೆ ಕೋರಿರುವ ಮನವಿಗಳಲ್ಲಿ ಯಾವುದೇ ಅರ್ಹತೆ ಇಲ್ಲದಿರುವುದರಿಂದ, ಪ್ರಸಕ್ತ ಜಾರಿಯಲ್ಲಿರುವ 15 ವರ್ಷಗಳ ಪರಿವರ್ತನೆಯ ಅವಧಿಯನ್ನು ಉಳಿಸಿಕೊಳ್ಳಲು ಶಿಫಾರಸು ಮಾಡುತ್ತೇವೆ.












Click it and Unblock the Notifications