7th pay commission; ವರದಿ ಜಾರಿ ಬಗ್ಗೆ ಕರ್ನಾಟಕ ಸರ್ಕಾರದ ನಿಲುವೇನು
ಬೆಂಗಳೂರು, ಡಿಸೆಂಬರ್ 12; ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಕರ್ನಾಟಕ ಸರ್ಕಾರ 7ನೇ ರಾಜ್ಯ ವೇತನ ಆಯೋಗದ ವರದಿ ಜಾರಿ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ವಿಧಾನಸಭೆಯಲ್ಲಿಯೂ ಈ ಕುರಿತು ಪ್ರಶ್ನೋತ್ತರದ ಕಲಾಪದ ಸಂದರ್ಭದಲ್ಲಿ ಚರ್ಚೆ ನಡೆದಿದೆ.
ವಿಧಾನಸಭೆಯಲ್ಲಿ ಶಾಸಕ ಐಹೊಳೆ ದುರ್ಯೋಧನ 7ನೇ ರಾಜ್ಯ ವೇತನ ಆಯೋಗದ ಕುರಿತು ಕೇಳಿರುವ ಪ್ರಶ್ನೆಗೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ. ಆದರೆ ವರದಿ ಜಾರಿಗೊಳಿಸುವ ಸಂಬಂಧ ಕರ್ನಾಟಕ ಸರ್ಕಾರ ನಿಲು ಸ್ಪಷ್ಟಪಡಿಸಿಲ್ಲ ಎಂಬುದು ಸರ್ಕಾರಿ ನೌಕರರ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

ಮುಖ್ಯಮಂತ್ರಿಗಳು ಉತ್ತರದಲ್ಲಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಲು ದಿನಾಂಕ 9/11/2022ರ ಸರ್ಕಾರಿ ಆದೇಶದಲ್ಲಿ ತ್ರಿ ಸದಸ್ಯದ 7ನೇ ರಾಜ್ಯ ವೇತನ ಆಯೋಗವನ್ನು ರಚಿಸಿ ಆದೇಶಿಸಲಾಗಿರುತ್ತದೆ. ದಿನಾಂಕ 6/11/2023ರ ಆದೇಶದಲ್ಲಿ ಆಯೋಗದ ಕಾಲಾವಧಿಯನ್ನು ದಿನಾಂಕ 15/3/2023ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಮುಂದುವರೆದು ಸಿದ್ದರಾಮಯ್ಯ, ಪ್ರಸ್ತುತ ರಾಜ್ಯ ಸರ್ಕಾರವು ವೇತನ ಆಯೋಗದ ಅಂತಿಮ ವರದಿಯ ನಿರೀಕ್ಷೆಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ. ಆದರೆ 2024-25ರ ಬಜೆಟ್‌ನಲ್ಲಿ ವೇತನ ಆಯೋಗ ವರದಿ ಜಾರಿಗಾಗಿ ಅನುದಾನ ಮೀಸಲಿಡುವ ಸಂಬಂಧ ಯಾವುದೇ ಭರವಸೆ ಕೊಟ್ಟಿಲ್ಲ ಎಂಬುದು ಈಗ ಚರ್ಚೆಯ ವಿಚಾರ.
ಪ್ರತಿಪಕ್ಷಗಳ ಧರಣಿ; ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ವೈ. ಎ. ನಾರಾಯಣಸ್ವಾಮಿ ನಿಯಮ 330ರಡಿ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿ ಕುರಿತು ಪ್ರಶ್ನೆ ಮಾಡಿದ್ದರು. ಮುಖ್ಯಮಂತ್ರಿಗಳ ಪರವಾಗಿ ಸಭಾನಾಯಕ ಎನ್. ಎಸ್. ಬೋಸರಾಜು ಉತ್ತರ ನೀಡಿ, "2024ರ ಮಾರ್ಚ್ 15ಕ್ಕೆ ವೇತನ ಆಯೋಗದ ಅಂತಿಮ ವರದಿ ಬರಲಿದೆ. ಆ ಬಳಿಕ ಸೂಕ್ತ ನಿರ್ಧಾರ ಕೈಗೊಂಡು ನೌಕರರಿಗೆ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ" ಎಂದು ಹೇಳಿದ್ದರು.
ಆದರೆ ಈ ಉತ್ತರದಿಂದ ತೃಪ್ತರಾಗದ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಅಲ್ಲದೇ ಮುಖ್ಯಮಂತ್ರಿಗಳೇ ಬಂದು ಉತ್ತರ ನೀಡಬೇಕು ಎಂದು ಪಟ್ಟು ಹಿಡಿದಿದ್ದವು. ಅಧಿವೇಶನ ಮುಕ್ತಾಯಗೊಳ್ಳುವಾಗ ಮುಖ್ಯಮಂತ್ರಿಗಳು ಉಭಯ ಸದನದಲ್ಲಿ ಉತ್ತರ ನೀಡುತ್ತಾರೆ. ಆಗ 7ನೇ ರಾಜ್ಯ ವೇತನ ಆಯೋಗದ ವಿಚಾರ ಪ್ರಸ್ತಾಪಿಸಲಿದ್ದಾರೆಯೇ? ಕಾದು ನೋಡಬೇಕಿದೆ.
ವೈ. ಎ. ನಾರಾಯಣಸ್ವಾಮಿ ಮಾತನಾಡಿ, "ರಾಜ್ಯದಲ್ಲಿ ಜನಸಂಖ್ಯೆ 4 ಕೋಟಿ ಇದ್ದಾಗ 3.50 ಲಕ್ಷ ಸರ್ಕಾರಿ ನೌಕರರು ಇದ್ದರು. ಈಗ ಜನಸಂಖ್ಯೆ ಆರೂವರೆ ಕೋಟಿ ಆದರೂ ಸಹ ಸರ್ಕಾರಿ ನೌಕರರ ಸಂಖ್ಯೆ 5.20 ಲಕ್ಷದಷ್ಟಿದೆ. 2.25 ಲಕ್ಷ ಹುದ್ದೆಗಳು ಖಾಲಿ ಇವೆ. ಅಧಿಕಾರಿ ಮತ್ತು ಸಿಬ್ಬಂದಿ ಒತ್ತಡದಲ್ಲಿ ಕೆಲಸ ಮಾಡುವಂತೆ ಆಗಿದೆ" ಎಂದರು.
"ಖಾಲಿ ಇರುವ ಹುದ್ದೆಗಳಿಂದಲೇ ಸರ್ಕಾರಕ್ಕೆ ವಾರ್ಷಿಕ 8531 ಕೋಟಿ ರೂ. ವೇತನ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣದಲ್ಲಿಯೇ ಸರ್ಕಾರಿ ನೌಕರರಿಗೆ ಶೇ 23ರಷ್ಟು ವೇತನ ಪರಿಷ್ಕರಣೆ ಮಾಡಬಹುದು. ಆದರೆ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ವೇತನ ಆಯೋಗದ ಅವಧಿಯನ್ನು ಎರಡನೇ ಬಾರಿಗೆ ವಿಸ್ತರಣೆ ಮಾಡಿ ವಿಳಂಬ ಧೋರಣೆ ಅನುಸರಿಸುತ್ತಿದೆ" ಎಂದು ಆರೋಪಿಸಿದರು.
ಸರ್ಕಾರಿ ನೌಕರರು ಈ ವರ್ಷದ ನವೆಂಬರ್‌ನಲ್ಲಿಯೇ ಕರ್ನಾಟಕ ಸರ್ಕಾರ 7ನೇ ರಾಜ್ಯ ವೇತನ ಆಯೋಗದ ವರದಿ ಸ್ವೀಕಾರ ಮಾಡಲಿದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ವೇತನ ಆಯೋಗದ ಅವಧಿಯನ್ನು 2024ರ ಮಾರ್ಚ್ ತನಕ ವಿಸ್ತರಣೆ ಮಾಡಲಾಗಿದೆ. ಆದ್ದರಿಂದ 2024-25ರ ಬಜೆಟ್ ಮಂಡನೆ ಬಳಿಕ ವೇತನ ಆಯೋಗದ ವರದಿ ಸಲ್ಲಿಕೆಯಾಗಲಿದೆ. ಆದ್ದರಿಂದ ಬಜೆಟ್‌ನಲ್ಲಿ ವರದಿ ಅನುಷ್ಠಾನಕ್ಕೆ ಅನುದಾನವನ್ನು ಮೀಸಲಿಡಲಾಗುತ್ತದೆಯೇ? ಇನ್ನೂ ತಿಳಿಯಬೇಕಿದೆ.












Click it and Unblock the Notifications