7th Pay Commission; ವಿವಿಧ ವೃಂದದ ವೇತನ ಹೆಚ್ಚಳ ಬೇಡಿಕೆ, ವಿವರ
ಬೆಂಗಳೂರು, ಅಕ್ಟೋಬರ್ 11: ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ರಾಜ್ಯ 7ನೇ ವೇತನ ಆಯೋಗಕ್ಕೆ ಸಲ್ಲಿಕೆ ಮಾಡಿರುವ ವರದಿಯಲ್ಲಿ ವಿವಿಧ ವೃಂದದ ವೇತನ ಹೆಚ್ಚಳದ ಕುರಿತು ಬೇಡಿಕೆ, ವಿವರಣೆಯನ್ನು ನೀಡಿದೆ. ಆಯೋಗ ನವೆಂಬರ್ ತಿಂಗಳಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುವ ನಿರೀಕ್ಷೆ ಇದೆ. ಸರ್ಕಾರಿ ನೌಕರರು ವೇತನ ಎಷ್ಟು? ಹೆಚ್ಚಳವಾಗಲಿದೆ? ಎಂದು ಕಾದು ಕುಳಿತಿದ್ದಾರೆ.
ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ವರದಿಯಲ್ಲಿ 7ನೇ ವೇತನ ಆಯೋಗಕ್ಕೆ ಹಿರಿಯ ಸಹಾಯಕರು (Senior Assistant)/ ಹಿರಿಯ ಶೀಘ್ರಲಿಪಿಗಾರರು (Senior Steno)/ಶಾಖಾಧಿಕಾರಿ (Section Officer) ವೃಂದದ ಹುದ್ದೆಗಳ ವೇತನದ ಕುರಿತು ವಿವರಣೆಯನ್ನು ನೀಡಿದೆ.

ಹಿರಿಯ ಸಹಾಯಕ ಹುದ್ದೆಯು ಅತ್ಯಂತ ಜವಾಬ್ದಾರಿಯುತವಾದ ಹುದ್ದೆಯಾಗಿದ್ದು, ಒಂದು ಶಾಖೆಯಲ್ಲಿ ಶಾಖಾಧಿಕಾರಿಗಳ ನಂತರ ಹಿರಿಯ ಸಹಾಯಕರೇ ಅದರ ಉತ್ತರದಾಯಿತ್ವವನ್ನು ವಹಿಸುವ ಜವಾಬ್ದಾರಿಯನ್ನು ಹೊಂದಿರುತ್ತಾನೆ ಹಾಗೂ ಶಾಖೆಯ ವಿಷಯಗಳಲ್ಲಿ ಅತ್ಯಂತ ಪ್ರಮುಖವಾದ ವಿಷಯಗಳಿಗೆ ಸಂಬಂಧಿಸಿದಂತೆ ವಿಷಯ ನಿರ್ವಾಹಕನಾಗಿರುತ್ತಾನೆ.
ಕೇಂದ್ರ ಸಚಿವಾಲಯದಲ್ಲಿ ಹಾಗೂ ನೆರೆಯ ರಾಜ್ಯಗಳ ಸಚಿವಾಲಯದಲ್ಲಿ ಸದರಿ ಹುದ್ದೆಯ ಪದನಾಮವು ಸಹಾಯಕ ಶಾಖಾಧಿಕಾರಿಯಾಗಿದ್ದಲ್ಲದೇ, ಅದೊಂದು ಗ್ರೂಪ್-ಬಿ ನಾನ್ ಗೆಜೆಟೆಡ್ ಹುದ್ದೆಯಾಗಿರುತ್ತದೆ ತತ್ಸಂಬಂಧ ಹಿರಿಯ ಸಹಾಯಕ ಹುದ್ದೆಯ ವೇತನ ಶ್ರೇಣಿಯನ್ನು ರೂ. 37,900-70,850 ರಿಂದ ರೂ. 10,900-78,200ಕ್ಕೆ ಹೆಚ್ಚಿಸುವುದು ಹಾಗೂ ಸದರಿ ಹುದ್ದೆಯ ಪದನಾಮವನ್ನು 'ಸಹಾಯಕ ಶಾಖಾಧಿಕಾರಿ' ಎಂದು ಬದಲಾಯಿಸಿ ಕೇಂದ್ರ ಹಾಗೂ ನೆರೆ ರಾಜ್ಯಗಳಂತೆ ಗ್ರೂಪ್-ಬಿ ನಾನ್ ಗೆಜೆಟೆಡ್ ಹುದ್ದೆಯನ್ನಾಗಿ ಉನ್ನತೀಕರಿಸುವುದು, ಸುಗಮ ಆಡಳಿತಕ್ಕೆ ಅತ್ಯಂತ ಸೂಕ್ತವಾಗಿರುತ್ತದೆ ಎಂದು ಬೇಡಿಕೆ ಇಡಲಾಗಿದೆ.
ಕರ್ನಾಟಕ ರಾಜ್ಯದ ಆರ್ಥಿಕ ಇಲಾಖೆಯ ಆದೇಶ 3/8/2022ರಲ್ಲಿ ಹಿರಿಯ ಸಹಾಯಕರ ವೃಂದದ ಸಮಾನಾಂತರ ಹಾಗೂ ಸಮಾನ ವೇತನ ಶ್ರೇಣಿಯ ಕೆಲವು ಇತರೆ ಇಲಾಖೆಯ ಹುದ್ದೆಗಳನ್ನು ಸುಮಾರು 1 ರಿಂದ 3 ಹಂತಗಳ ವೇತನ ಶ್ರೇಣಿಯೊಂದಿಗೆ ಹುದ್ದೆಯನ್ನು ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಲಾಗಿರುತ್ತದೆ. ವಿಶೇಷವೇನೆಂದರೆ ಸದರಿ ಆದೇಶಲ್ಲಿ ನಾನ್ ಗೆಜೆಟೆಡ್ ಹಾಗೂ ಗ್ರೂಪ್ -ಸಿ ಹುದ್ದೆಯ ವೇತನ ಶ್ರೇಣಿಯನ್ನು ಗೆಜೆಟೆಡ್ ಗ್ರೂಪ್ -ಎ ಮತ್ತು ಗ್ರೂಪ್-ಬಿ ವೇತನ ಶ್ರೇಣಿಗೆ ಹೆಚ್ಚಿಸಿರುವುದು ಕಾಣಬಹುದಾಗಿದೆ.
ಹಿರಿಯ ಶೀಘ್ರಲಿಪಿಗಾರರ ಹುದ್ದೆಯು ಸಚಿವಾಲಯದಲ್ಲಿ ಅತ್ಯಂತ ಜವಾಬ್ದಾರಿಯುತವಾದ ಹುದ್ದೆಯಾಗಿದ್ದು, ಪ್ರಸ್ತುತ ಹಿರಿಯ ಸಹಾಯಕ ಹುದ್ದೆಯ ಸಮಾನಾಂತರ ಹುದ್ದೆಯಾಗಿರುತ್ತದೆ. ಪ್ರಸ್ತುತ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಗಳಂತಹ ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳ ಆಪ್ತ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದರಿಯವರ ವೇತನ ಶ್ರೇಣಿಯನ್ನು ಒಂದು ಹಂತದ ವೇತನ ಶ್ರೇಣಿಗೆ ಹೆಚ್ಚಿಸುವುದು ಸೂಕ್ತವಾಗಿರುತ್ತದೆ. ವೇತನ ಶ್ರೇಣಿಯನ್ನು 37,900-70,850 ಹೆಚ್ಚಿಸಬೇಕು ಎಂದು ಬೇಡಿಕೆ ಇಡಲಾಗಿದೆ.
ಶಾಖಾಧಿಕಾರಿ ಹುದ್ದೆ; ಸಚಿವಾಲಯದ ಶಾಖಾಧಿಕಾರಿ ಹುದ್ದೆಯು ಅತ್ಯಂತ ಪ್ರಮುಖವಾದ ಹುದ್ದೆಯಾಗಿದ್ದು, ಒಂದು ಶಾಖೆಯ ಸಮಸ್ತ ಉಸ್ತುವಾರಿಯನ್ನು ಹೊಂದಿರುತ್ತದೆ ಹಾಗೂ ಸದರಿ ಹುದ್ದೆಯು ತಹಶೀಲ್ದಾರ್ ಹುದ್ದೆಗಳಿಗೆ ಸರಿಸಮವಾಗಿದ್ದು, ಬಹು ವರ್ಷಗಳಿಂದ ಸಚಿವಾಲಯದ ಶಾಖಾಧಿಕಾರಿಗಳನ್ನು ನಿಯೋಜನೆಯ ಮೇರೆಗೆ ತಾಲ್ಲೂಕು ತಹಶೀಲ್ದಾರ್ ತಾಲ್ಲೂಕು ದಂಡಾಧಿಕಾರಿ ಹುದ್ದೆಗಳಿಗೆ ನಿಯೋಜಿಸಲಾಗುತ್ತಿದೆ.
ಕೆಲವು ವರ್ಷಗಳ ಹಿಂದೆ ತಹಶೀಲ್ದಾರ್ ಹುದ್ದೆಯನ್ನು ಗ್ರೇಡ್-1 ಮತ್ತು ಗ್ರೇಡ್ -2 ತಹಶೀಲ್ದಾರ್ ಹುದ್ದೆಗಳನ್ನಾಗಿ ಬೇರ್ಪಡೆ ಮಾಡಿ ಪ್ರತ್ಯೇಕ ವೇತನ ಶ್ರೇಣಿಯನ್ನು ನಿಗದಿಗೊಳಿಸಿದ್ದು, ಗ್ರೇಡ್ -1 ತಹಶೀಲ್ದಾರ್ ಹುದ್ದೆಯ ವೇತನ ಶ್ರೇಣಿಯನ್ನು ಸಚಿವಾಲಯದ ಶಾಖಾಧಿಕಾರಿ ಹುದ್ದೆಯ ವೇತನ ಶ್ರೇಣಿಗಿಂತಲೂ ಹೆಚ್ಚಿಸಲಾಗಿರುತ್ತದೆ.
ಅದಲ್ಲದೇ ಒರ್ವ ಶಾಖಾಧಿಕಾರಿಯನ್ನು ನಿಯೋಜನೆ ಮೇಲೆ ತಹಶೀಲ್ದಾರ್ ಗ್ರೇಡ್-1 ಹುದ್ದೆಗೆ ನಿಯೋಜಿಸಿದಾಗ ಸದರಿ ಹುದ್ದೆಯ ಕೆಲಸ ಕಾರ್ಯಗಳಿಗೆ ಸಮಾನವಾಗಿ ಶಾಖಾಧಿಕಾರಿಯು ಕೆಲಸ ನಿರ್ವಹಿಸಿದ್ದರೂ ಸಹ ಅವರಿಗೆ ತಹಶೀಲ್ದಾರ್ ಗ್ರೇಡ್-1 ಹುದ್ದೆಯಲ್ಲಿ ಇರುವ ವೇತನ ಶ್ರೇಣಿಯು ಪಡೆಯದೇ ಇರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದ್ದಲ್ಲದೇ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ನೀತಿಯು/ ತರ್ಕವು ಸಹ ಹುಸಿಗೊಳ್ಳುತ್ತದೆ ಎಂದು ವರದಿಯಲ್ಲಿ ಹೇಳಿದೆ.
ಈ ತಾರತಮ್ಯವನ್ನು ಸಂಘವು ಈ ಹಿಂದೆ ರಚಿಸಲಾಗಿದ್ದ ವೇತನ ಆಯೋಗಗಳ ಗಮನಕ್ಕೆ ತಂದಿರುತ್ತದೆ. ಮುಂದುವರೆದು, ಕರ್ನಾಟಕ ನಾಲ್ಕನೇ ವೇತನ ಆಯೋಗ-1993 ತನ್ನ ವರದಿಯಲ್ಲಿ ಈ ಕುರಿತು ಉಲ್ಲೇಖಿಸಿದೆ ಎಂದು ಹೇಳಿದೆ. ಆದರೆ ಇದುವರೆಗೂ ತಹಶೀಲ್ದಾರ್ ಗ್ರೇಡ್-1 ಹುದ್ದೆಯ ವೇತನ ಶ್ರೇಣಿಯನ್ನು ಸಚಿವಾಲಯದ ಶಾಖಾಧಿಕಾರಿ ಹುದ್ದೆಗೆ ನೀಡಿರುವುದಿಲ್ಲ. ಪ್ರಸಕ್ತ ವೇತನ ಸಮಿತಿಯು ಈ ತಾರತಮ್ಯವನ್ನು ಹೋಗಲಾಡಿಸಬೇಕೆಂಬುದು ಸಂಘದ ಕೋರಿಕೆಯಾಗಿದೆ.
ಪ್ರಸ್ತುತ ಸಚಿವಾಲಯದ ಇಲಾಖೆಯ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಯವರಿಗೆ ಪೀಠಾಧಿಕಾರಿ (Desk Officer System) ವ್ಯವಸ್ಥೆಯನ್ನು ಜಾರಿಗೊಳಿಸಲು ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಸದರಿ ಹುದ್ದೆಗೆ ಅಧೀನ ಕಾರ್ಯದರ್ಶಿ ಅಥವಾ ಶಾಖಾಧಿಕಾರಿಗಳನ್ನು ನಿಯೋಜಿಸಬಹುದಾಗಿರುತ್ತದೆ.
ಅಂದರೆ, ಪೀಠಾಧಿಕಾರಿ ಹುದ್ದೆಯಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಕಾರ್ಯನಿರ್ವಹಿಸುವ ಶಾಖಾಧಿಕಾರಿಗಳಿಗೆ ಇತರೆ ಇಲಾಖೆಗಳಲ್ಲಿ ಶಾಖಾಧಿಕಾರಿಗಳಾಗಿ ಕಾರ್ಯನಿರ್ವಹಿಸುವವರಿಗೆ ನೀಡುತ್ತಿರುವ ವೇತನ ಶ್ರೇಣಿಯನ್ನೇ ನಿಗದಿಪಡಿಸಿರುವುದು ಸಮಂಜಸವಾಗಿರುವುದಿಲ್ಲ. ತತ್ಸಬಂಧ ಪ್ರಸ್ತುತ ವೇತನ ಶ್ರೇಣಿಯನ್ನು ರೂ. 43,100-83,900 ರಿಂದ 52,650-97,100ಕ್ಕೆ ಹೆಚ್ಚಿಸುವ ಅವಶ್ಯಕತೆ ಇರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.












Click it and Unblock the Notifications