7th Pay Commission: ಕೇಂದ್ರ, ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿ ವ್ಯತ್ಯಾಸಗಳು
ಬೆಂಗಳೂರು, ಆಗಸ್ಟ್ 13: ಕರ್ನಾಟಕದ ಸರ್ಕಾರಿ ನೌಕರರು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ಮುಂದೆ ಕೇಂದ್ರ ಸರ್ಕಾರಿ ನೌಕರರ ಮಾದರಿ ವೇತನ ಶ್ರೇಣಿಯ ಬೇಡಿಕೆಯನ್ನು ಇಟ್ಟಿದ್ದರು. ಸರ್ಕಾರ ಈಗಾಗಲೇ 7ನೇ ರಾಜ್ಯ ವೇತನ ಆಯೋಗದ ವರದಿಯನ್ನು ಅಂಗೀಕರಿಸಿದ್ದು, ಆಗಸ್ಟ್ ತಿಂಗಳಿನಿಂದಲೇ ಜಾರಿಯಾಗುವಂತೆ ವರದಿ ಶಿಫಾರಸು ಜಾರಿಗೊಳಿಸಲಾಗುತ್ತಿದೆ.
ಮಾರ್ಚ್ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವರದಿ ನೀಡಿದ್ದ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವೇತನ ರಚನೆ ಮತ್ತು ವೇತನ ಶ್ರೇಣಿಗಳ ನಡುವೆ ಗಮನಾರ್ಹ ವ್ಯತ್ಯಾಸವಿದೆ ಎಂದು ಹೇಳಿತ್ತು. ಎರಡೂ ವ್ಯವಸ್ಥೆಗಳಲ್ಲಿನ ಹುದ್ದೆಗಳ ನಡುವಿನ ಸರಿಸಮಾನತೆಯನ್ನು ಸ್ಥಾಪಿಸಲು ಪ್ರತಿಯೊಂದು ಹುದ್ದೆಗಳ ಮೇಲೆ ಪರಿಣಾಮ ಬೀರುವಂತಹ ಹಲವಾರು ಅಂಶಗಳನ್ನು ತುಲನಾತ್ಮಕವಾಗಿ ಅಧ್ಯಯನ ಮಾಡುವ ಅಗತ್ಯವಿದೆ ಎಂದು ಹೇಳಿತ್ತು.

ಪ್ರಮುಖ ವ್ಯತ್ಯಾಸಗಳು
ರಾಜ್ಯ 7ನೇ ವೇತನ ಆಯೋಗ ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ವರದಿಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವೇತನ ರಚನೆ ಮತ್ತು ವೇತನ ಶ್ರೇಣಿಗಳ ನಡುವೆ ಇರುವ ಪ್ರಮುಖ ವ್ಯತ್ಯಾಸಗಳನ್ನು ಪಟ್ಟಿ ಮಾಡಿದೆ, ಅವುಗಳು
* ಪ್ರಸಕ್ತ, ಭಾರತ ಸರ್ಕಾರದ ವೇತನ ಶ್ರೇಣಿಗಳು ಮುಕ್ತ ಅವಕಾಶವುಳ್ಳ ವೇತನ ಶ್ರೇಣಿಗಳಾಗಿದ್ದರೆ, ರಾಜ್ಯ ಸರ್ಕಾರದ ವೇತನ ಶ್ರೇಣಿಗಳು ನಿಶ್ಚಿತ ಪ್ರಾರಂಭಿಕ ಮತ್ತು ಅಂತಿಮ ಬಿಂದುಗಳನ್ನು ಹೊಂದಿರುವ ಪರಂಪರಾಗತ ಶ್ರೇಣಿಗಳಾಗಿರುತ್ತವೆ.
* ಭಾರತ ಸರ್ಕಾರದಲ್ಲಿನ ಕನಿಷ್ಠ ವೇತನ ಮತ್ತು ರಾಜ್ಯ ಸರ್ಕಾರದ ವೇತನ ರಚನೆಯಲ್ಲಿನ ಕನಿಷ್ಠ ವೇತನಗಳಲ್ಲಿ ಪರಸ್ಪರ ಭಿನ್ನತೆ ಇವೆ.
* ವೇತನ ಶ್ರೇಣಿಗಳ ಪರಿಷ್ಕರಣೆಯ ಕಾಲ ಮತ್ತು ಅದರನುಸಾರ ಎಐಎಸಿಪಿಐ ಸೂಚ್ಯಾಂಕ ಬಿಂದುಗಳಲ್ಲಿ ವ್ಯತ್ಯಾಸವಿದೆ.
* ಶ್ರೇಣಿಗಳ ಸಂಖ್ಯೆ, ವಾರ್ಷಿಕ ವೇತನ ಬಡ್ತಿ ದರಗಳು ಮತ್ತು ವ್ಹೇಟೇಜ್ ಅಥವಾ ವೇತನ ನಿಗದಿಯಲ್ಲಿ ನೀಡಲಾದ ಫಿಟ್ಮೆಂಟ್ ಸೌಲಭ್ಯಗಳು ಭಿನ್ನವಾಗಿವೆ.
ನಿಚ್ಚಳವಾಗಿ, ಎರಡು ವೇತನ ರಚನೆಗಳ ನಡುವೆ ಅನೇಕ ಮೂಲಭೂತ ವ್ಯತ್ಯಾಸಗಳಿದ್ದು, ಇವರಡರ ನಡುವೆ ಸಮಾನತೆ ಅಥವಾ ಸಮಾನತೆಗೆ ಹತ್ತಿರ ಮತ್ತು ಸರಿಸಮಾನತೆಯನ್ನು ಸ್ಥಾಪಿಸುವುದು ಒಂದು ಜಟಿಲ ಕಾರ್ಯವಾಗಿದೆ ಎಂದು ವರದಿಯಲ್ಲಿ ವಿವರಣೆ ನೀಡಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಹುದ್ದೆಗಳು ಮತ್ತು ವೃಂದಗಳ ಸರಿಸಮಾನತೆಯನ್ನು ನಿರ್ಧರಿಸುವುದು ಆಡಳಿತಕ್ಕೆ ಸಂಬಂಧಿಸಿದಂತೆ ಜಾರಿಯಲ್ಲಿರುವ ಆಡಳಿತದ ರಚನೆ, ಶಾಸನ ಹಾಗೂ ನಿಯಮಗಳಿಂದ ಅಧಿಕಾರ ಹೊಂದಿರುವ ಹುದ್ದೆಗಳು ಮತ್ತು ಮುಂಬಡ್ತಿ ಅವಕಾಶಗಳ ಅಂಶಗಳನ್ನು ಒಳಗೊಂಡಿದೆ. ಇನ್ನಿತರ ಕೆಲವುಗಳು, ಹುದ್ದೆಗಳಿಗೆ ಮಾತ್ರ ಸಂಬಂಧಿಸಿದ್ದು, ಅವುಗಳೆಂದರೆ ಪದನಾಮ ಮತ್ತು ಪರಿಭಾಷೆ, ವೇತನ, ನೇಮಕಾತಿ ವಿಧಾನ, ಹುದ್ದೆಗಳನ್ನು ನೇರ ನೇಮಕಾತಿ ಅಥವಾ ಮುಂಬಡ್ತಿಯ ಮೂಲಕ ಭರ್ತಿ ಮಾಡುವ ವಿಧಾನ, ವಿದ್ಯಾರ್ಹತೆ, ತರಬೇತಿ ಮತ್ತು ಅನುಭವದ ಅಗತ್ಯತೆ ಹಾಗೂ ಕಾರ್ಯಬಾಹುಳ ಅಂಶಗಳನ್ನು ಒಳಗೊಂಡಿರುತ್ತದೆ.
ಕರ್ತವ್ಯಗಳಿಗೆ ಸಂಬಂಧಿಸಿದಂತೆ ಕೆಲವು ಅಂಶಗಳಿದ್ದು, ಹುದ್ದೆಗೆ ವಹಿಸಲಾದ ಜವಾಬ್ದಾರಿಗಳು, ನಿಯಂತ್ರಣ ಅಥವಾ ಅಭಿವೃದ್ಧಿಯ ಸ್ವರೂಪದ ಕರ್ತವ್ಯಗಳು, ಕ್ಷೇತ್ರ ವ್ಯಾಪ್ತಿ, ವರ್ಗಾವಣೆ, ಕಾರ್ಯನಿರ್ವಹಿಸುವ ವಾತಾವರಣ ಮತ್ತು ಹುದ್ದೆಯ ನಿರ್ವಹಣೆಗೆ ಹೊಂದಿಕೊಂಡ ವಿಪತ್ತು ಇದ್ದಲ್ಲಿ ಇವುಗಳನ್ನು ಸಹ ಸರಿಸಮಾನತ ನಿರ್ಧರಿಸುವಲ್ಲಿ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇದರೊಂದಿಗೆ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಕೇಂದ್ರ ಸರ್ಕಾರದಲ್ಲಿ ಸರಿಸನಿಹ 5,000 ವೃಂದಗಳಿದ್ದರೆ ರಾಜ್ಯ ಸರ್ಕಾರದಲ್ಲಿ ಕೇವಲ ಸುಮಾರು 2,000 ವೃಂದಗಳಿರುತ್ತವೆ.
ರಾಜ್ಯ ಸರ್ಕಾರದಲ್ಲಿರುವ ಕೆಲವು ಹುದ್ದೆಗಳೊಂದಿಗೆ ಕೇಂದ್ರ ಸರ್ಕಾರದಲ್ಲಿರುವ ಕೆಲವು ಹುದ್ದೆಗಳ ಸರಿಸಮಾನತೆಯನ್ನು ಸ್ಥಾಪಿಸುವುದು ಸಾಧ್ಯವಾಗಬಹುದಾದರೂ, ಅವುಗಳನ್ನು ವೇತನದ ಅಂಶದ ಮೇಲೆ ಸಮೀಕರಿಸಲು ಮುಂದುವರೆದಲ್ಲಿ, ಇಲಾಖೆಯೊಳಗಿನ ಪ್ರಸ್ತುತ ವೇತನ ಶ್ರೇಣಿಗಳಲ್ಲಿನ ಸಾಪೇಕ್ಷತೆಗಳಲ್ಲಿ ಹಾಗೂ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಸಮಾನ ವೃಂದಗಳ ಹುದ್ದೆಗಳಲ್ಲಿ ಅಸಮಾನತೆಗಳಿಗೆ ಕಾರಣವಾಗಬಹುದು ಎಂದು ವರದಿ ತಿಳಿಸಿದೆ.












Click it and Unblock the Notifications