Booster Dose: ಶೇ.79ರಷ್ಟು ಜನ 3ನೇ ಡೋಸ್ ಪಡೆಯಲು ಅರ್ಹ, 2,3ನೇ ಡೋಸ್ ಪಡೆಯದ ಮಾಹಿತಿ ಇಲ್ಲಿದೆ
ಬೆಂಗಳೂರು, ಡಿಸೆಂಬರ್ 28: ಕರ್ನಾಟಕ ರಾಜ್ಯದಲ್ಲಿ ಈವರೆಗೆ ಶೇ. 79ರಷ್ಟು ಮಂದಿ ಎರಡನೇ ಡೋಸ್ ಹಾಗೂ ಶೇ.20ರಷ್ಟು ಮಂದಿ ಮಾತ್ರ ಕೋವಿಡ್ ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್ ತೆಗೆದುಕೊಂಡಿದ್ದಾರೆ. ಕೋವಿಡ್ ವ್ಯಾಪಿಸುತ್ತಿರುವ ಹೊತ್ತಿನಲ್ಲಿ ಸಮರ್ಪಕವಾಗಿ ಲಸಿಕೆ ಪಡೆಯುವುದು ಅಗತ್ಯವಾಗಿದೆ ಎಂದು ಆರೋಗ್ಯ ಇಲಾಖೆ ಪ್ರತಿಪಾದಿಸಿದೆ.
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಶೇ.79ರಷ್ಟು ಅಂದರೆ 18 ವರ್ಷಕ್ಕಿಂತ ಮೇಲ್ಪಟ್ಟ 3,91,86,687 ಅರ್ಹ ಜನರು ಕೋವಿಡ್ ಲಸಿಕೆಯನ್ನು ಎರಡನೇ ಡೋಸ್ ತೆಗೆದುಕೊಂಡಿದ್ದಾರೆ. ಅದೇ ರೀತಿ 18 ರಿಂದ 59 ವರ್ಷದೊಳಗಿನ ಶೇ. 86ರಷ್ಟು ಅಂದರೆ 3,42,19,206 ಮಂದಿ ಹಾಗೂ 60 ವರ್ಷ ಮೇಲ್ಪಟ್ಟ ಶೇ. 53ರಷ್ಟು (41,22,150) ಜನ ಇದುವರೆಗೂ ಕೋವಿಡ್ ಬೂಸ್ಟರ್ (3ನೇ) ಡೋಸ್ ತೆಗೆದುಕೊಂಡಿಲ್ಲ.
ವಿಪರ್ಯಾಸವೆಂದರೆ ಶೇ.35ರಷ್ಟು ಆರೋಗ್ಯ ಕಾರ್ಯಕರ್ತರು ಹಾಗೂ ಶೇ.49 ರಷ್ಟು ಮುಂಚೂಣಿ ಕೆಲಸಗಾರರು ಇದುವರೆಗೂ ಬೂಸ್ಟರ್ ಡೋಸ್ ತೆಗೆದುಕೊಂಡಿಲ್ಲ ಎನ್ನಲಾಗಿದೆ. ಅದೇ ರೀತಿ ಬೋಸ್ಟರ್ ಡೋಸ್ ಕಡಿಮೆ ಪಡೆದ ಜಿಲ್ಲೆಗಳನ್ನು ಗುರುತಿಸಲಾಗಿದೆ. ಕಲಬುರಗಿ ಶೇ.11, ದಕ್ಷಿಣ ಕನ್ನಡ ಶೇ.13, ಬಾಗಲಕೋಟೆ, ತುಮಕೂರು ಮತ್ತು ಬೀದರ್ ತಲಾ ಶೇ.15 ಹಾಗೂ ಬೆಂಗಳೂರು ನಗರ ಶೇ.16 ರಷ್ಟು. ಮೈಸೂರು ಶೇ.28 , ರಾಮನಗರ ಶೇ.32 ರಷ್ಟು ಬೂಸ್ಟರ್ ಡೋಸ್ ಪಡೆದಿವೆ.

ಖುಷಿಯ ಸಂಗತಿ ಎಂದರೆ 12 ರಿಂದ 14 ವರ್ಷ ವಯಸ್ಸಿನ ಮಕ್ಕಳಲ್ಲಿ, ಎಲ್ಲರೂ ಲಸಿಕೆಯ ಮೊದಲ ಮತ್ತು ಎರಡನೇ ಡೋಸ್ ತೆಗೆದುಕೊಂಡಿದ್ದಾರೆ. ಆದರೆ 15 ರಿಂದ 17 ವರ್ಷ ವಯಸ್ಸಿನವರಲ್ಲಿ, ಶೇ.89 ಮೊದಲ ಡೋಸ್ ತೆಗೆದುಕೊಂಡಿದ್ದಾರೆ ಮತ್ತು ಶೇ. 85 ನಷ್ಟು ಎರಡನೇ ಡೋಸ್ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಕೆಲ ದೇಶಗಳಲ್ಲಿ 4ಡೋಸ್ ಲಸಿಕೆ ವಿತರಣೆ ಪೂರ್ಣ
ರಾಜ್ಯದಲ್ಲಿ ಕೋವಿಡ್ ಕಡಿಮೆ ಆಯಿತೆಂದು ಜನರು ಮೂರನೇ ಡೋಸ್ ತೆಗೆದುಕೊಳ್ಳಲು ಆಸಕ್ತಿ ತೋರಿರಲಿಲ್ಲ. ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇಲ್ಲವೇ ಪುನಃ ಕೋವಿಡ್ ಅಲೆ ಕಂಡು ಬರುತ್ತಿದ್ದಂತೆ ಭಯದಿಂದ ಆಸ್ಪತ್ರೆಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಬೂಸ್ಟರ್ ಡೋಸ್ ಪಡೆಯಲು ಮುಂದಾಗುತ್ತಾರೆ ಎಂದು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ತಜ್ಞರು ತಿಳಿಸಿದರು.
ಕೊರೋನಾ ಅತ್ಯಧಿಕ ಪ್ರಮಾಣದಲ್ಲಿ ಉಲ್ಬಣಗೊಂಡ ದೇಶಗಳಲ್ಲಿ ಜನರು ಈಗಾಗಲೇ ಕೋವಿಡ್ ಲಸಿಕೆಯ 4 ನೇ ಡೋಸ್ ಪಡೆದಿವೆ. ಕೆಲವು ದೇಶಗಳು 5ನೇ ಡೋಸ್ ಪಡೆಯಲು ಸಹ ಆಲೋಚಿಸುತ್ತಿವೆ. ಲಸಿಕೆ ಮಹತ್ವ ತಿಳಿಸಲು ರಾಜ್ಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಬೂಸ್ಟರ್ ಡೋಸ್ ಪಡೆದರೆ 6 ತಿಂಗಳು ಸುರಕ್ಷಿತ
ಸದ್ಯ ಹೆಚ್ಚುತ್ತಿರುವ ಕೊರೊನ ಓಮಿಕ್ರಾನ್ ಉಪತಳಿ BF.7 ಸೋಂಕು ತಗಲಿದ ವ್ಯಕ್ತಿಯಲ್ಲಿ ಉಸಿರಾಟದ ಸಮಸ್ಯೆ ಎದುರಾಗುತ್ತದೆ. ಆದರೆ 80 ವರ್ಷ ಮೇಲ್ಪಟ್ಟ, ರೋಗನಿರೋಧಕ ಶಕ್ತಿ ಕುಂದಿದ, ಮೂತ್ರಪಿಂಡದ ಡಯಾಲಿಸಿಸ್‌ಗೆ ಒಳಗಾಗುವವರು, ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವವರು, ಹೃದಯ ಸಂಬಂಧಿ ಕಾಯಿಲೆಗಳಿಂದ ಚೇತರಿಸಿಕೊಳ್ಳುತ್ತಿರುವವರು ಈ ಸೋಂಕಿನಿಂದ ಹೆಚ್ಚು ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಹೀಗಾಗಿ ಅವರೆಲ್ಲ 3ನೇ ಡೋಸ್ ಪಡೆದರೆ ಉತ್ತಮ ಎಂದು ತಜ್ಞರು ಹೇಳಿದ್ದಾರೆ.
ರಾಜ್ಯದಲ್ಲಿ ಹೊಸ ಕೋವಿಡ್ ಅಲೆ ಭೀತಿ ಹೆಚ್ಚಾಗುತ್ತಿದೆ. ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು, ಒಮ್ಮೆ ಲಸಿಕೆ ಪಡೆದರೆ ಅದರಿಂದ ಆರು ತಿಂಗಳವರೆಗೆ ನಾವು ವೈರಸ್‌ನಿಂದ ಸುರಕ್ಷಿತವಾಗಿರಬಹುದು ಎಂದರು.












Click it and Unblock the Notifications