6 Day Eggs for School kids: ಕರ್ನಾಟಕದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ವಾರದಲ್ಲಿ 6 ದಿನ ಸಿಗಲಿದೆ ಮೊಟ್ಟೆ!
ಬೆಂಗಳೂರು ಜುಲೈ 18: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ವಾರದಲ್ಲಿ ಆರು ದಿನ ಬೇಯಿಸಿದ ಮೊಟ್ಟೆ ನೀಡಲು ಅಜೀಂ ಪ್ರೇಮ್‌ಜಿ ಫೌಂಡೇಷನ್ ಮುಂದೆ ಬಂದಿದೆ.
ಇದಕ್ಕಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೊಂದಿಗೆ ಅಜೀಂ ಪ್ರೇಮ್‌ಜಿ ಫೌಂಡೇಷನ್ ಕೈಜೋಡಿಸಿದೆ. ವಾರದಲ್ಲಿ 6 ದಿನ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲು ಅಜೀಂ ಪ್ರೇಮ್‌ಜಿ ಫೌಂಡೇಷನ್ 1,500 ಕೋಟಿ ರೂಪಾಯಿ ದೇಣಿಗೆ ನೀಡಲು ಮುಂದಾಗಿದೆ.

ಸರ್ಕಾರ ಮತ್ತು ಅಜೀಂ ಪ್ರೇಮ್‌ಜಿ ಫೌಂಡೇಶನ್ ನಡುವಿನ ಔಪಚಾರಿಕ ಒಪ್ಪಂದಕ್ಕೆ ಶನಿವಾರ ಸಹಿ ಹಾಕುವ ಸಾಧ್ಯತೆಯಿದೆ. ಒಪ್ಪಂದದಲ್ಲಿ ನೀಡುವ ದೇಣಿಗೆಯನ್ನು ಪ್ರಸ್ತುತ ಎರಡು ದಿನಗಳಿಗಿಂತ ವಾರದಲ್ಲಿ ಆರು ದಿನ ಬೇಯಿಸಿದ ಮೊಟ್ಟೆಗಳನ್ನು ಪೂರೈಸಲು ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1 ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ವಾರಕ್ಕೆ ಎರಡು ದಿನ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ 38.37 ಲಕ್ಷ ಮಕ್ಕಳು ಮೊಟ್ಟೆಗೆ ಬೇಡಿಕೆ ಸಲ್ಲಿಸಿದ್ದರು. ಉಳಿದ ಮಕ್ಕಳಿಗೆ ಶೇಂಗಾ ಚಿಕ್ಕಿ, ಬಾಳೆ ಹಣ್ಣು ನೀಡಲಾಗಿತ್ತು.
ನಿಧಿಯ ಕೊರತೆ
ವಾರದಲ್ಲಿ ಆರು ದಿನ ಬೇಯಿಸಿದ ಮೊಟ್ಟೆ ಪೂರೈಕೆ ಮಾಡುವ ಪ್ರಸ್ತಾವನೆ ಹಲವು ತಿಂಗಳಿನಿಂದ ಸರ್ಕಾರದ ಮುಂದಿತ್ತು. ಆದರೆ ಹಣದ ಕೊರತೆಯಿಂದ ಅದನ್ನು ಅನುಷ್ಠಾನಗೊಳಿಸಲು ಇಲಾಖೆಗೆ ಸಾಧ್ಯವಾಗಿರಲಿಲ್ಲ. ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಹಣಕಾಸಿನ ನೆರವಿನಿಂದಾಗಿ ಆರು ದಿನ ಮೊಟ್ಟೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ.

ಆದರೆ ಮೊಟ್ಟೆಗಳನ್ನು ಖರೀದಿಸುವ ಮತ್ತು ಪೂರೈಸುವ ವಿಧಾನ ಹಾಗೂ ಅವುಗಳನ್ನು ಪೂರೈಸುವ ಆರಂಭಿಕ ದಿನಾಂಕವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಅಸ್ತಿತ್ವದಲ್ಲಿರುವ ವ್ಯವಸ್ಥೆಯಡಿ ಸ್ಥಳೀಯ ಮಟ್ಟದಲ್ಲಿ ಮೊಟ್ಟೆಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳಿಗೆ (ಎಸ್‌ಡಿಎಂಸಿ) ನೀಡಲಾಗಿದೆ. ಈಗ ವಾರದಲ್ಲಿ ಉಳಿದ ನಾಲ್ಕು ದಿನ ಸಂಘಟನೆಯೊಂದಿಗೆ ಚರ್ಚಿಸಿ ಮೊಟ್ಟೆ ನೀಡುವ ಜವಬ್ದಾರಿಯನ್ನು ಯಾರಿಗೆ ನೀಡಬೇಕೆಂದು ತೀರ್ಮಾನಿಸಬೇಕಿದೆ.
1 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೇಯಿಸಿದ ಮೊಟ್ಟೆಗಳನ್ನು ಸರಬರಾಜು ಮಾಡಲಾಗುತ್ತಿತ್ತು. 9 ಮತ್ತು 10 ನೇ ತರಗತಿಯ ಮಕ್ಕಳು 1 ರಿಂದ 8 ನೇ ತರಗತಿಯ ಮಕ್ಕಳೊಂದಿಗೆ ಮಧ್ಯಾಹ್ನದ ಊಟವನ್ನು ಸೇವಿಸುತ್ತಾರೆ.
ಪ್ರಸ್ತುತ ಇಲಾಖೆಯು ಸುಮಾರು 60 ಲಕ್ಷ ಮಕ್ಕಳಿಗೆ ವಾರಕ್ಕೆ ಎರಡು ಬಾರಿ ಮೊಟ್ಟೆ ನೀಡುತ್ತಿದ್ದು, 1.2 ಕೋಟಿ ಮೊಟ್ಟೆಗಳನ್ನು ಸರಬರಾಜು ಮಾಡಲಾಗುತ್ತಿದೆ. ಇಲಾಖೆಯಿಂದ ಲಭ್ಯವಿರುವ ವಿವರಗಳ ಪ್ರಕಾರ, 30 ರಷ್ಟು ವಿದ್ಯಾರ್ಥಿಗಳು ಮೊಟ್ಟೆಗಳನ್ನು ಸೇವಿಸುತ್ತಿಲ್ಲ ಮತ್ತು ಕಡಲೆಕಾಯಿ ಚಿಕ್ಕಿ ಅಥವಾ ಬಾಳೆಹಣ್ಣು ತಿನ್ನಲು ಬಯಸುತ್ತಾರೆ.

ಪ್ರತಿ ಮಗುವಿಗೆ ವಾರಕ್ಕೆ ಎರಡು ಬಾರಿಯಂತೆ ವರ್ಷಕ್ಕೆ ಸರಾಸರಿ 100 ಮೊಟ್ಟೆಗಳು ಸಿಗುತ್ತಿವೆ. ಸರ್ಕಾರದ ನಿರ್ಧಾರ ಜಾರಿಯಾದ ನಂತರ ಪ್ರತಿ ಮಗುವಿಗೂ ವರ್ಷಕ್ಕೆ 300 ಮೊಟ್ಟೆಗಳು ದೊರಕಲಿವೆ.
ಒಂದು ಮೊಟ್ಟೆಗೆ ಆರು ರೂ. ನಿಗದಿ ಮಾಡಲಾಗಿದೆ. ಈ ಹಣವನ್ನು ಶಾಲಾ ಶಿಕ್ಷಣ ಇಲಾಖೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಜಂಟಿ ಖಾತೆಗೆ ಹಾಕುತ್ತದೆ. ಅದರಲ್ಲಿ ಮೊಟ್ಟೆ ಬೇಯಿಸಲು ಇಂಧನ ವೆಚ್ಚ 30 ಪೈಸೆ, ಮೊಟ್ಟೆತ ಗಟ್ಟಿಪದರ ಸುಲಿದು ಕೊಡುವ ಬಿಡಿಯೂಟ ತಯಾರಕರು ಮತ್ತು ಸಹಾಯಕರಿಗೆ 30 ಪೈಸೆ, ಸಾಗಣೆ ವೆಚ್ಚ 20 ಪೈಸೆ ನೀಡಲಾಗುತ್ತಿದೆ. ಮೊಟ್ಟೆಗೆ ತಗುಲುವ ಒಟ್ಟು ವೆಚ್ಚದಲ್ಲಿ ಇನ್ನು ಮೂಮದೆ ಮೂರನೇ ಎರಡು ಭಾಗವನ್ನು ಅಜೀಂ ಪ್ರೇಮ್‌ಜಿ ಫೌಂಡೇಷನ್ ಭರಿಸಲಿದೆ.












Click it and Unblock the Notifications