ಶುಕ್ರವಾರ ವಿದ್ಯಾರ್ಥಿಗಳಿಗೆ ಮೋಡಿ ಮಾಡಲಿದ್ದಾರೆ ಮೋದಿ
ಬೆಂಗಳೂರು, ಸೆ.4 : ಪ್ರಧಾನಿ ನರೇಂದ್ರ ಮೋದಿ ಶಿಕ್ಷಕರ ದಿನವಾದ ಶುಕ್ರವಾರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡುವ ಭಾಷಣವನ್ನು ಕರ್ನಾಟಕದ 56 ಲಕ್ಷಕ್ಕೂ ಅಧಿಕ ಮಕ್ಕಳು ವೀಕ್ಷಿಸಲಿದ್ದಾರೆ. ರಾಜ್ಯದ ವಿದ್ಯಾರ್ಥಿಗಳಿಗೆ ಈ ಭಾಷಣದ ವೀಕ್ಷಣೆಗೆ ಅವಕಾಶ ಕಲ್ಪಿಸಲು ರಾಜ್ಯ ಶಿಕ್ಷಣ ಇಲಾಖೆ ಸಕಲ ರೀತಿಯಲ್ಲಿ ಸಜ್ಜಾಗಿದೆ.
ಶಿಕ್ಷಕರ ದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಧ್ಯಾಹ್ನ 3 ಗಂಟೆಯಿಂದ 4.45ರ ತನಕ ದೆಹಲಿಯ ಮಾಣೆಕ್ ಷಾ ಸಭಾಂಗಣದಲ್ಲಿ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಭಾಷಣ ಟಿವಿ, ರೆಡಿಯೋ ಮತ್ತು ಹಲವಾರು ವೆಬ್‌ಸೈಟ್‌ಗಳಲ್ಲಿ ನೇರ ಪ್ರಸಾರವಾಗಲಿದೆ. [ಶಿಕ್ಷಕರ ದಿನಾಚರಣೆಯೋ? ಗುರು ಉತ್ಸವವೋ?]

ಕರ್ನಾಟಕದಲ್ಲಿ ಭಾಷಣ ಪ್ರಸಾರದ ಬಗ್ಗೆ ಮಾಹಿತಿ ನೀಡಿರುವ ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಅದೋನಿ ಸೈಯದ್ ಸಲೀಂ ಅವರು, ರಾಜ್ಯದಲ್ಲಿ ಸರ್ಕಾರಿ, ಅನುದಾನಿತ, ಖಾಸಗಿ ಸೇರಿದಂತೆ ಒಟ್ಟು 74 ಸಾವಿರ ಶಾಲೆಗಳಿವೆ. ಇಲ್ಲಿ ಸುಮಾರು ಒಂದು ಕೋಟಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. 40 ಸಾವಿರ ಶಾಲೆಗಳಲ್ಲಿ ಟಿವಿ ಸೌಲಭ್ಯವಿದ್ದು, 56 ಲಕ್ಷ ವಿದ್ಯಾರ್ಥಿಗಳು ಟಿವಿ ಮೂಲಕ ಪ್ರಧಾನಿ ಭಾಷಣ ನೋಡಲಿದ್ದಾರೆ ಎಂದು ತಿಳಿಸಿದರು.
ಟಿವಿ ಇಲ್ಲದ ಶಾಲೆಗಳಲ್ಲಿ ಕಂಪ್ಯೂಟರ್ ಮೂಲಕ ಕಾರ್ಯಕ್ರಮ ವೀಕ್ಷಿಸಲು ಹಾಗೂ ರೇಡಿಯೊ ಮೂಲಕ ಆಲಿಸಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಗಳಲ್ಲಿರುವ ಶಿಕ್ಷಕರ ತರಬೇತಿ ಕೇಂದ್ರಗಳಲ್ಲೂ ಕಾರ್ಯಕ್ರಮ ಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು. ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗದಂತೆ ಸಂವಾದ ವೀಕ್ಷಣೆಗೆ ಅವಕಾಶ ಕಲ್ಪಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಏನಿದು ಕಾರ್ಯಕ್ರಮ? : ಸೆ.5ರ ಶುಕ್ರವಾರ ಶಿಕ್ಷಕರ ದಿನ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಈ ಸಂದರ್ಭದಲ್ಲಿ ಮಾತನಾಡಲಿದ್ದಾರೆ. ನಂತರ ವಿವಿಧ ರಾಜ್ಯಗಳ ಏಳು ಶಾಲೆಗಳ ವಿದ್ಯಾರ್ಥಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.
ನೇರ ಪ್ರಸಾರ : ಪ್ರಧಾನಮಂತ್ರಿ ಅವರ ಈ ಕಾರ್ಯಕ್ರಮವನ್ನು ದೂರದರ್ಶನ, ಡಿಡಿ ನ್ಯೂಸ್, ಡಿಡಿ ಭಾರತಿ, ಡಿಡಿ ಚಂದನ ಸೇರಿದಂತೆ 15 ಪ್ರಾದೇಶಿಕ ಚಾನೆಲ್‌ಗಳು, 52 ಖಾಸಗಿ ಚಾನೆಲ್‌ಗಳು ಮತ್ತು ಆಕಾಶವಾಣಿ ನೇರಪ್ರಸಾರ ಮಾಡಲಿವೆ.












Click it and Unblock the Notifications