ಗ್ರೇಟರ್ ಬೆಂಗಳೂರು ಚುನಾವಣೆ: ಮಹಿಳೆಯವರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ಅಕ್ಟೋಬರ್ 08: ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಯಲ್ಲಿ ಶೇ.50ರಷ್ಟು ಟಿಕೆಟ್ ಅನ್ನು ಮಹಿಳೆಯರಿಗೆ ನೀಡಲಾಗುವುದು. ಆ ಮೂಲಕ ಮುಂದಿನ ದಿನಗಳಲ್ಲಿ ಬೆಂಗಳೂರಿನ ಪಾಲಿಕೆಗಳಲ್ಲಿ ಅರ್ಧದಷ್ಟು ಮಹಿಳಾ ಕಾರ್ಪೊರೇಟರ್ ಗಳು ಇರುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹಿಳೆಯವರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿಯು (B.PAC) ಮೌಂಟ್ ಕಾರ್ಮೆಲ್ ಕಾಲೇಜು ಸಹಯೋಗದಲ್ಲಿ ಕಾಲೇಜು ಆವರಣದಲ್ಲಿ ಬುಧವಾರ ಬೆಂಗಳೂರು ಅಭಿವೃದ್ಧಿ, ಪರಿವರ್ತನೆ ಕುರಿತು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ನಾವೆಲ್ಲರೂ ಬೆಂಗಳೂರಿನ ನಾಗರಿಕರು. ನಗರೀಕರಣ ಯಾವುದೇ ದೇಶ ಅಥವಾ ನಗರಕ್ಕೆ ದೊಡ್ಡ ಸವಾಲು. ಜನ ಬೆಂಗಳೂರಿಗೆ ವಲಸೆ ಬರುವುದು ಶಿಕ್ಷಣ, ಉದ್ಯೋಗ ಹಾಗೂ ಉತ್ತಮ ಜೀವನ ಕಟ್ಟಿಕೊಳ್ಳುವ ಆಸೆಯಿಂದ. ಯಾವುದೇ ನಗರದ ಜನಸಂಖ್ಯೆ ಹೆಚ್ಚಿದಾಗ ಸಮಸ್ಯೆಗಳು ಹೆಚ್ಚಾಗುತ್ತವೆ.

ಶಿಕ್ಷಣದ ವಿಚಾರದಲ್ಲಿ ಬೆಂಗಳೂರು ದೇಶದ ಇತರೇ ನಗರಗಳಿಗಿಂತ ಉತ್ತಮವಾಗಿದೆ. ಬೆಂಗಳೂರಿನಲ್ಲಿ 25 ಲಕ್ಷ ಐಟಿ ಉದ್ಯೋಗಿಗಳು ಇದ್ದಾರೆ. 2 ಲಕ್ಷ ವಿದೇಶಿ ಪಾಸ್ ಪೋರ್ಟ್ ಹೊಂದಿರುವವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 70 ಲಕ್ಷ ಇತ್ತು. ಈಗ ಅದು 1.40 ಕೋಟಿಗೆ ಏರಿದೆ" ಎಂದರು. ಕೆಂಪೇಗೌಡರು ಎಲ್ಲಾ ಸಮುದಾಯಗಳಿಗೂ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟು ಬೆಂಗಳೂರನ್ನು ನಿರ್ಮಿಸಿದರಾದರೂ ಬೆಂಗಳೂರು ಯೋಜಿತ ನಗರವಲ್ಲ. ಅನೇಕ ವಿಚಾರಗಳಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಆಕರ್ಷಣೆಯಾಗಿದೆ. ಬೆಂಗಳೂರಿನಲ್ಲಿ ಅತ್ಯುತ್ತಮ ಮಾನವ ಸಂಪನ್ಮೂಲವಿದೆ ಎಂಬ ಕಾರಣಕ್ಕೆ ಇಲ್ಲಿ ಎಚ್ಎಎಲ್, ಐಟಿಐ, ಬೆಮೆಲ್ ಸೇರಿದಂತೆ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿವೆ.
ನಮ್ಮ ರಾಜ್ಯದಲ್ಲಿ 270ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜು, 70 ಮೆಡಿಕಲ್ ಕಾಲೇಜು, 1,400 ನರ್ಸಿಂಗ್ ಕಾಲೇಜುಗಳಿವೆ. ಆದರೂ ಸಂಚಾರ, ಕಸ ವಿಲೇವಾರಿ, ಕುಡಿಯುವ ನೀರಿನಂತಹ ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದಕ್ಕೆ ಪರಿಣಾಮಕಾರಿ ಆಡಳಿತ, ಪರಿಣಾಮಕಾರಿ ಸೇವೆ, ಸಮನ್ವಯತೆ ಸಾಧಿಸುವ ಉದ್ದೇಶದಿಂದ ಜಿಬಿಎ ಅಸ್ತಿತ್ವಕ್ಕೆ ತರಲಾಗಿದೆ. ನಾಗರಿಕರು ಹಾಗೂ ಅಧಿಕಾರಿಗಳು ಪರಸ್ಪರ ಸಹಕಾರದಲ್ಲಿ ಕೆಲಸ ಮಾಡುವವರೆಗೂ ಬೆಂಗಳೂರಿನ ಪ್ರಗತಿ ಅಸಾಧ್ಯ ಎಂದು ತಿಳಿಸಿದರು.
ಬೆಂಗಳೂರು 198 ವಾರ್ಡ್ ಗಳೊಂದಿಗೆ ದೊಡ್ಡ ಪ್ರಮಾಣದಲ್ಲಿತ್ತು. ಎಲ್ಲಾ ವಾರ್ಡ್ ಗಳನ್ನು ನಿರ್ವಹಣೆ ಮಾಡಲು ಕೇವಲ ಒಬ್ಬರೇ ಆಯುಕ್ತರಿದ್ದರು. ಒಬ್ಬರಿಂದ ಇಷ್ಟೆಲ್ಲಾ ನಿರ್ವಹಣೆ ಕಷ್ಟ. ಮುಂದಿನ 10-15 ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ 2 ಕೋಟಿ ತಲುಪಲಿದೆ. ಸಂಚಾರ ದಟ್ಟಣೆ ಸೇರಿದಂತೆ ಇತರೆ ಸಮಸ್ಯೆಗಳನ್ನು ನಿಭಾಯಿಸಲು ನಾನು ಮೊದಲು ಬೆಂಗಳೂರಿನ ಪಾಲಿಕೆಗಳನ್ನು ವಿಂಗಡಿಸಿ, ಉತ್ತಮ ಆಡಳಿತ ನೀಡಲು ಐದು ಪಾಲಿಕೆಗಳನ್ನು ಮಾಡಿ 368 ವಾರ್ಡ್ ಗಳನ್ನು ರಚಿಸಲಾಗಿದೆ. ಸ್ವಚ್ಛತೆ, ಸಂಚಾರ ಸುಧಾರಣೆಗೆ ಅನೇಕ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನ ಸಮಸ್ಯೆಗಳು ಮಾತ್ರ ದೊಡ್ಡದಾಗಿ ಸದ್ದು ಮಾಡಲಾಗಿದೆ. ನಮ್ಮಲ್ಲಿ ಮಾಧ್ಯಮಗಳು ಸ್ವತಂತ್ರ್ಯವಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಬೇರೆ ರಾಜ್ಯಗಳಲ್ಲಿ ಈ ಅವಕಾಶ ಇಲ್ಲ ಎಂದು ತಿಳಿಸಿದರು.












Click it and Unblock the Notifications