ಕಸದ ರಾಶಿಯಲ್ಲಿ ಪತ್ತೆಯಾಯ್ತು ಶಿವಲಿಂಗ ಆಕಾರದ ಐತಿಹಾಸಿಕ ಬೆಳಗಾವಿ ಕಲ್ಯಾಣಿ: 300 ವರ್ಷದ ಇತಿಹಾಸಕ್ಕೆ ಮರುಜೀವ
ಬೆಳಗಾವಿ: ನಮ್ಮ ಕಣ್ಣ ಮುಂದೆಯೇ ಇರುವ ಅದೆಷ್ಟೋ ಐತಿಹಾಸಿಕ ಸ್ಮಾರಕಗಳು ಎಲ್ಲರ ಬೇಜವಬ್ದಾರಿ ಮತ್ತು ನಿರ್ಲಕ್ಷ್ಯದಿಂದಾಗಿ ಕಸದ ರಾಶಿಯಲ್ಲಿ ಕಣ್ಮರೆಯಾಗುತ್ತಿವೆ. ಆದರೆ, ನಮ್ಮಲ್ಲಿ ಇಚ್ಛಾಶಕ್ತಿ ಇದ್ದರೆ ಮಣ್ಣಲ್ಲಿ ಮಣ್ಣಾಗಿ ಹೋಗಿರುವ ಇತಿಹಾಸಕ್ಕೆ ಸ್ವಲ್ಪ ಮಟ್ಟಿಗೆ ಮರುಜೀವ ನೀಡಬಹುದು ಎನ್ನುವುದಕ್ಕೆ ಬೆಳಗಾವಿ ಜಿಲ್ಲೆಯ ಮುತ್ಗಾ ಗ್ರಾಮ ಸಾಕ್ಷಿಯಾಗಿದೆ.
ಹೌದು, ಬರೋಬ್ಬರಿ ಮೂರು ದಶಕಗಳಿಂದ ಕಸ, ಚರಂಡಿ ನೀರು ಹಾಗೂ ಮಣ್ಣಿನ ಅಡಿಯಲ್ಲಿ ಸಂಪೂರ್ಣವಾಗಿ ಹೂತುಹೋಗಿದ್ದ ಸುಮಾರು 300 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಬೆಳಗಾವಿ ಕಲ್ಯಾಣಿವೊಂದನ್ನಾ ಇದೀಗ ಯಶಸ್ವಿಯಾಗಿ ಪುನರುಜ್ಜೀವನಗೊಳಿಸಲಾಗಿದೆ.

ಒಂದು ಕಾಲದಲ್ಲಿ, ಮುತ್ಗಾ ಗ್ರಾಮದಲ್ಲಿ ಇಂಥಹದೊಂದು ಐತಿಹಾಸಿಕ ಕಲ್ಯಾಣಿ ಇದೆ ಎನ್ನುವುದನ್ನಾ ಸಂಪೂರ್ಣವಾಗಿ ಮರೆತುಹೋಗಿದ್ದ, ತ್ಯಾಜ್ಯದ ತೊಟ್ಟಿಯಾಗಿದ್ದ ಈ ತಾಣವೀಗ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ಜೊತೆಗೆ, ಪಾರಂಪರಿಕ ಸಂರಕ್ಷಣೆ ಮತ್ತು ಸಾಂಪ್ರದಾಯಿಕ ಜಲಮೂಲಗಳ ರಕ್ಷಣೆಗೆ ಸರ್ಕಾರ ತಗೆದುಕೊಂಡಿರುವ ಕ್ರಮಗಳ ಬಗ್ಗೆ ಹೊಸ ಚರ್ಚೆವೊಂದನ್ನಾ ಹುಟ್ಟುಹಾಕಿದೆ.
30 ವರ್ಷಗಳಿಂದ ಕಸದಲ್ಲಿ ತುಂಬಿ ಹೋಗಿತ್ತು ಈ 300 ವರ್ಷಗಳ ಹಳೆಯ ಕಲ್ಯಾಣಿ
ಮುತ್ಗಾ ಗ್ರಾಮದ ಕಾಂಚವೀರ ನಗರದಲ್ಲಿರುವ ಈ ಐತಿಹಾಸಿಕ ಕಲ್ಯಾಣಿಯು ದಶಕಗಳ ಕಾಲ ಜನರ ನಿರ್ಲಕ್ಷ್ಯದಿಂದಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತ್ತು. ವಿಪರ್ಯಾಸವೆಂದರೆ, ಈ ಜಾಗದಲ್ಲಿ ಕಲ್ಯಾಣಿ ಇದೆ ಎಂಬುದನ್ನೇ ಬಹುತೇಕರು ಮರೆತೇ ಹೋಗಿದ್ದಾರೆ. ಆದರೆ, ಬೆಳಗಾವಿ ಮೂಲದ 'ಪ್ಯಾಸ್ ಫೌಂಡೇಶನ್, ಎನ್‌ಎಸ್‌ಎಸ್ ಸ್ವಯಂಸೇವಕರು ಹಾಗೂ ಸ್ಥಳೀಯ ನಿವಾಸಿಗಳ ಒಗ್ಗಟ್ಟಿನಿಂದಾಗಿ ಈ ಪ್ರಾಚೀನ ಜಲಮೂಲಕ್ಕೆ ಇಂದು ಮರುಜೀವ ಸಿಕ್ಕಿದೆ. ಸಮಾಜ ಸೇವಕ ನಿತಿನ್ ಖೋಟ್ ಅವರ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಆರಂಭವಾದ ಈ ಕಾರ್ಯಾಚರಣೆಯಲ್ಲಿ, ಸ್ವಯಂಸೇವಕರು ಟನ್‌ಗಟ್ಟಲೆ ಕಸ, ಹೂಳು ಮತ್ತು ಅವಶೇಷಗಳನ್ನ ತೆರವುಗೊಳಿಸಿ ಕಲ್ಯಾಣಿಯ ಮೂಲ ಸ್ವರೂಪವನ್ನ ಮತ್ತೆ ಹೊರತಂದಿದ್ದಾರೆ.
ಸಿಹಿನೀರಿನ ಒರತೆ ಪತ್ತೆ
ಕಲ್ಯಾಣಿಯಲ್ಲಿದ್ದ ತ್ಯಾಜ್ಯಗಳನ್ನ ತೆಗೆದು ಸ್ವಚ್ಛಗೊಳಿಸಿದ ನಂತರ ಕಲ್ಯಾಣಿಯ ನೈಜ ಸೌಂದರ್ಯ ಎಲ್ಲರ ಮುಂದೆ ಅನಾವರಣಗೊಂಡಿದೆ. ಸುಮಾರು 80 ಅಡಿ ಆಳವಿರುವ ಈ ಬಾವಿಗೆ ಇಳಿಯಲು 53 ಸುಂದರವಾದ ಕಲ್ಲಿನ ಮೆಟ್ಟಿಲುಗಳಿವೆ. ಕಾರ್ಯಾಚರಣೆಯ ವೇಳೆ ತ್ಯಾಜ್ಯವನ್ನೆಲ್ಲಾ ಹೊರತೆಗೆದಾಗ, ಬಾವಿಯ ತಳಭಾಗದಲ್ಲಿ ನೈಸರ್ಗಿಕವಾದ ಸಿಹಿನೀರಿನ ಒರತೆಗಳು ಪತ್ತೆಯಾಗಿವೆ. ಇದೀಗ ಶತಮಾನಗಳಷ್ಟು ಹಳೆಯದಾದ ಈ ಕಲ್ಯಾಣಿಯಲ್ಲಿ ಮತ್ತೆ ಶುದ್ಧವಾದ ನೀರು ತುಂಬಿಕೊಂಡಿದೆ. ಇಲ್ಲಿರುವ ಕಲ್ಲಿನ ಕಂಬಗಳು ಮತ್ತು ಕೆತ್ತನೆಯ ಕಮಾನುಗಳು ಇಂದಿಗೂ ಸುಭದ್ರವಾಗಿದ್ದು, ಅಂದಿನ ಕಾಲದ ಕರಕುಶಲತೆ ಹಾಗೂ ವಾಸ್ತುಶಿಲ್ಪದ ವೈಭವವನ್ನು ಕಣ್ಮುಂದೆ ತರುತ್ತಿವೆ.
VIDEO | A remarkable piece of heritage has been restored in Karnataka's Belagavi district. A 300-year-old stepwell, which had been buried under garbage and debris, has been brought back to life.
— Press Trust of India (@PTI_News) July 3, 2026
The 80-feet-deep stepwell, believed to have been built during the Adil Shahi dynasty… pic.twitter.com/QVVgvE2nsL
ಮೇಲಿನಿಂದ ನೋಡಿದರೆ ಕಾಣುವ 'ಶಿವಲಿಂಗ' ಆಕಾರ
ಇನ್ನೂ ಈ ಕಲ್ಯಾಣಿಯ ಅತ್ಯಂತ ಆಕರ್ಷಕ ವಿಚಾರವೆಂದರೆ ಇದರ ವಿಶಿಷ್ಟವಾದ ವಿನ್ಯಾಸ. ಡ್ರೋನ್ ಅಥವಾ ಮೇಲಿನಿಂದ ನೋಡಿದಾಗ ಈ ಕಲ್ಯಾಣಿಯೂ ಶಿವಲಿಂಗ ಆಕಾರವನ್ನೂ ಹೋಲುತ್ತದೆ. ಈ ವಿಶಿಷ್ಟವಾದ ವಾಸ್ತುಶಿಲ್ಪವೇ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಜನರನ್ನು ಆಕರ್ಷಿಸುತ್ತಿದೆ.
ಇತಿಹಾಸಕಾರರ ಪ್ರಕಾರ, ಈ ವಾಸ್ತುಶಿಲ್ಪವು ಆದಿಲ್ ಶಾಹಿ ರಾಜವಂಶ ಅಥವಾ ಆರಂಭಿಕ ಮರಾಠರ ಕಾಲಕ್ಕೆ ಸೇರಿದ್ದಾಗಿದೆ. ಭಾರತದ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಈ ಕಲ್ಯಾಣಿಯನ್ನ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ರಹಸ್ಯ ಸಭೆಗಳ ತಾಣವಾಗಿ ಬಳಸುತ್ತಿದ್ದರು ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ. ಮುತ್ಗಾ ಗ್ರಾಮದ ಪಾರಂಪರಿಕ ಸಂರಕ್ಷಣೆಯ ಈ ಅದ್ಭುತ ಕಥೆಯು ಕೇವಲ ಒಂದು ಕಲ್ಯಾಣಿಯ ಪುನರುಜ್ಜೀವನವಲ್ಲ, ಬದಲಾಗಿ ನಮ್ಮ ಸುತ್ತಮುತ್ತಲೂ ಅಡಗಿರಬಹುದಾದ ಇತಿಹಾಸದ ಹೆಜ್ಜೆಗುರುತುಗಳನ್ನ ಸಂರಕ್ಷಿಸುವ ಜವಾಬ್ದಾರಿಯನ್ನು ನೆನಪಿಸುತ್ತದೆ.


Click it and Unblock the Notifications
