30 ಜಿಲ್ಲೆಗಳಲ್ಲಿ ಆರಂಭವಾಗಲಿದೆ ಇಂದಿರಾ ಗಾಂಧಿ ಹಾಸ್ಟೆಲ್
ಬೆಂಗಳೂರು, ನ. 19 : ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 97ನೇ ಜನ್ಮದಿನಾಚರಣೆ ಪ್ರಯುಕ್ತ ರಾಜ್ಯ ಸರ್ಕಾರ ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಬಂಪರ್ ಕೊಡುಗೆ ನೀಡಿದೆ. ರಾಜ್ಯದ 30 ಜಿಲ್ಲೆಗಳಲ್ಲಿಯೂ ಇಂದಿರಾ ಗಾಂಧಿ ಹೆಸರಿನಲ್ಲಿ ಉಚಿತ ಹಾಸ್ಟೆಲ್ ಆರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಸಚಿವ ಎಚ್.ಆಂಜನೇಯ, ಎಲ್ಲ ಜಿಲ್ಲೆಗಳಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ಹಾಸ್ಟೆಲ್ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕೆ ಇಂದಿರಾ ಗಾಂಧಿ ನರ್ಸಿಂಗ್ ಹಾಸ್ಟೆಲ್ ಎಂದು ಹೆಸರಿಡಲಾಗಿದೆ ಎಂದರು.

ಪ್ರತಿ ಹಾಸ್ಟೆಲ್‌ನಲ್ಲಿ ತಲಾ 100 ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ಕಲ್ಪಿಸಲಾಗುವುದು. ಹಾಗೆಯೇ, ವಿದ್ಯಾರ್ಥಿನಿಯರಿಗೆ ಸರ್ಕಾರದಿಂದ ತಿಂಗಳಿಗೆ 1000 ರೂ. ಶಿಷ್ಯ ವೇತನ ನೀಡಲಾಗುವುದು ಎಂದರು. ಸದ್ಯ ಬಾಡಿಗೆ ಕಟ್ಟಡದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಹಾಸ್ಟೆಲ್‌ಗಳನ್ನು ಪ್ರಾರಂಭಿಸಲಾಗುವುದು. ನಂತರ ಸ್ವಂತ ಕಟ್ಟಡದ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 97ನೇ ಜನ್ಮದಿನಾಚರಣೆ ಪ್ರಯುಕ್ತ ಈ ಹಾಸ್ಟೆಲ್ ಗಳನ್ನು ಪ್ರತಿ ಜಿಲ್ಲೆಯಲ್ಲಿಯೂ ಆರಂಭಿಸಲಾಗುತ್ತಿದೆ. ಈ ಹಾಸ್ಟೆಲ್‌ಗಳಲ್ಲಿ ಪ್ರವರ್ಗ 1 ಕ್ಕೆ 10 ಸೀಟು, 2ಎ ಸಮುದಾಯದ ವಿದ್ಯಾರ್ಥಿನಿಯರಿಗೆ 35 ಸೀಟು, 2 ಬಿ ಗೆ 9, 3 ಎಗೆ 9, 3 ಬಿಗೆ 12, ಎಸ್‌ಸಿ ವಿದ್ಯಾರ್ಥಿನಿಯರಿಗೆ 21 ಮತ್ತು ಎಸ್‌ಟಿ ಸಮುದಾಯದ 4 ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಮಂಗಳವಾರ ಇಂದಿರಾ ಗಾಂಧಿ ಜನ್ಮದಿನಾಚರಣೆ ಪ್ರಯುಕ್ತ ರಾಜ್ಯಾದ್ಯಂತ ಭಿಕ್ಷುಕರ ಕೇಂದ್ರಗಳಲ್ಲಿರುವ ಸುಮಾರು 2000 ನಿರಾಶ್ರಿತರಿಗೆ ಸರ್ಕಾರದ ವತಿಯಿಂದ ಒಂದು ಜತೆ ಉಡುಪು ವಿತರಿಸಲಾಗುವುದು ಎಂದು ಹೇಳಿದರು.












Click it and Unblock the Notifications