ದ್ವಿತೀಯ ಪಿಯು ಪರೀಕ್ಷೆ-3 ಫಲಿತಾಂಶ ಜು. 16ಕ್ಕೆ ಪ್ರಕಟ
ಬೆಂಗಳೂರು, ಜುಲೈ 15: 2024ರ ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶವನ್ನು ಜುಲೈ 16ರ ಮಂಗಳವಾರ ಪ್ರಕಟಿಸಲಾಗುತ್ತದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಈ ಕುರಿತು ಮಾಹಿತಿ ನೀಡಿದೆ.
ಮಂಜುಳಾ ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಈ ಕುರಿತು ಮಾಹಿತಿ ನೀಡಿದ್ದಾರೆ. 2024ರ ದ್ವಿತೀಯ ಪಿಯುಸಿ ಪರೀಕ್ಷೆ-3 ಅನ್ನು ದಿನಾಂಕ 24/06/2024 ರಿಂದ 5/7/2024ರ ತನಕ ನಡೆಸಲಾಗಿತ್ತು.

ಈ ಪರೀಕ್ಷೆ ಫಲಿತಾಂಶವನ್ನು ದಿನಾಂಕ 16/7/2024ರ ಮಧ್ಯಾಹ್ನ 3 ಗಂಟೆಗೆ NIC ವೆಬ್‌ಸೈಟ್ https://karresults.nic.in ನಲ್ಲಿ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಿತಾಂಶ ವೀಕ್ಷಿಸಬಹುದು.
ಫಲಿತಾಂಶ ವೀಕ್ಷಣೆ ಮಾಡುವುದು ಹೇಗೆ?: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಒಟ್ಟು ಮೂರು ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಈ ಬಾರಿ ನಡೆಸಿದೆ. 3ನೇ ಹಾಗೂ ಅಂತಿಮ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ಒಟ್ಟು 75,995 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದರು. ಜೂನ್ 26ರಿಂದ ಜುಲೈ 5ರ ತನಕ ಸುಗಮವಾಗಿ ರಾಜ್ಯದ 248 ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆಯಲ್ಲಿ ಪರೀಕ್ಷೆಗಳನ್ನು ನಡೆಸಲಾಗಿತ್ತು.
ಕಲಾ ವಿಭಾಗ 30, 811 ಹಾಗೂ ವಿಜ್ಞಾನ ವಿಭಾಗ 19,783, ವಾಣಿಜ್ಯ ವಿಭಾಗದ 25,401 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆ ನಡೆಯುವ ಕಾಲೇಜುಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿನ ಪ್ರದೇಶವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿತ್ತು. ಸಿಸಿ ಕಣ್ಗಾವಲಿನಲ್ಲಿ ಪರೀಕ್ಷೆ ನಡೆದಿತ್ತು.
ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ರೋಲ್ ನಂಬರ್ ಮೂಲಕ ಫಲಿತಾಂಶ ವೀಕ್ಷಿಸಬಹುದು. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ವಿಷಯ ಸಂಯೋಜನೆ/ ಸ್ಟ್ರೀಮ್ ಅನ್ನು ಬಳಸಿಕೊಳ್ಳಬೇಕು.
ಫಲಿತಾಂಶ ನೋಡುವ ಹಂತಗಳು
* karresults.nic.in ವೆಬ್‌ಸೈಟ್‌ಗೆ ಭೇಟಿ ನೀಡಿ
* ಮುಖಪುಟದಲ್ಲಿ ಪಿಯುಸಿ ಪರೀಕ್ಷೆ ಫಲಿತಾಂಶದ ಮೇಲೆ ಕ್ಲಿಕ್ ಮಾಡಿ
* ಲಾಗಿನ್ ಆದ ಪುಟದಲ್ಲಿ, ನಿಮ್ಮ KSEAB ನೋಂದಣಿ ಸಂಖ್ಯೆ ಹಾಕಿ
* ವಿಷಯ ಸಂಯೋಜನೆ ಅಥವಾ ಸ್ಟ್ರೀಮ್ ಆಯ್ಕೆ ಮಾಡಿ (ವಿಜ್ಞಾನ/ ಕಲೆ/ ವಾಣಿಜ್ಯ)
* ಫಲಿತಾಂಶವನ್ನು ಮುಂದಿನ ಪುಟದಲ್ಲಿ ವೀಕ್ಷಿಸಿ
2024ರ ಪರೀಕ್ಷೆ-1 ಮತ್ತು 2ರಲ್ಲಿ ಉತ್ತೀರ್ಣರಾಗಿದ್ದು ಫಲಿತಾಂಶ ಉತ್ತಮಪಡಿಸಿಕೊಳ್ಳಲು 2024ರ ದ್ವಿತೀಯ ಪಿಯುಸಿ ಪರೀಕ್ಷೆ-3 ಅನ್ನು ಬರೆಯಲು ಇಚ್ಛಿಸಿದಲ್ಲಿ, ಅಂತಹ ವಿದ್ಯಾರ್ಥಿಗಳು ಫಲಿತಾಂಶ ಪಟ್ಟಿಯ ಆಧಾರದ ಮೇಲೆ ನಿಯಮಾನುಸಾರ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಅರ್ಜಿಯನ್ನು ಕಾಲೇಜಿನಲ್ಲಿ ಪ್ರಾಂಶುಪಾಲರಿಗೆ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ವಿದ್ಯಾರ್ಥಿಗಳು ಫಲಿತಾಂಶ ಉತ್ತಮಪಡಿಸಿಕೊಳ್ಳಲು ONLINE ಮುಖಾಂತರವೂ ಅರ್ಜಿ ಸಲ್ಲಿಸಬಹುದಾಗಿತ್ತು. 2024ನೇ ಸಾಲಿಗಿಂತ ಹಿಂದಿನ ಪರೀಕ್ಷೆಗಳಲ್ಲಿ ಉತ್ತೀರ್ಣರಾದ/ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು.
ಮಾರ್ಚ್ 2024ರ ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು 2ರಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಅನುತ್ತೀರ್ಣ ಅಂಕಪಟ್ಟಿ ಅರ್ಜಿಗಳನ್ನು ಮಂಡಲಿಯಿಂದ ನೀಡಲಾಗುವುದಿಲ್ಲ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಂಡಲಿಯಿಂದ ನೀಡಲಾಗುವ ಫಲಿತಾಂಶ ಪಟ್ಟಿಯ ಆಧಾರದ ಮೇಲೆ ಪರೀಕ್ಷೆ-3ಕ್ಕೆ ನೋಂದಾಯಿಸಿಕೊಳ್ಳಬೇಕಿತ್ತು.
ಪರೀಕ್ಷೆ-1ಕ್ಕೆ ನೋಂದಾಯಿಸಿಕೊಂಡು ಪರೀಕ್ಷೆ-1 ಮತ್ತು ಪರೀಕ್ಷೆ-2 ಅನ್ನು ಬರೆಯದೇ ಇರುವ ವಿದ್ಯಾರ್ಥಿಗಳು ಪರೀಕ್ಷೆ-3ಕ್ಕೆ ನೋಂದಾಯಿಸಿಕೊಳ್ಳಲು ಅವಕಾಶವಿತ್ತು. ಮಾರ್ಚ್ 2024ರ ಪರೀಕ್ಷೆ-1ಕ್ಕೆ ನೋಂದಾಯಿಸಿದ್ದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ-3ಕ್ಕೆ Online ನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ಮಂಡಲಿ ಹೇಳಿತ್ತು.












Click it and Unblock the Notifications