ಬ್ರೇಕಿಂಗ್: ರಾಜ್ಯದಲ್ಲಿ 24 ಗಂಟೆಗಳಲ್ಲೇ 267 ಕೊವಿಡ್-19 ಕೇಸ್!
ಬೆಂಗಳೂರು, ಜೂನ್.03: ಕರ್ನಾಟಕದಲ್ಲಿ ನೊವೆಲ್ ಕೊರೊನಾ ವೈರಸ್ ಅಟ್ಟಹಾಸಕ್ಕೆ ಮುಂದುವರಿದಿದೆ. ರಾಜ್ಯದಲ್ಲಿ ಒಂದೇ ದಿನ ದಾಖಲೆಯ ಮಟ್ಟದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು ಪತ್ತೆಯಾಗಿದ್ದು, 24 ಗಂಟೆಗಳಲ್ಲಿ 267 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.
ಬುಧವಾರ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ರಾಜ್ಯದ ಜನರಿಗೆ ಆಘಾತವನ್ನು ನೀಡಿದೆ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 4,063ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇದುವರೆಗೂ 1,514 ಕೊರೊನಾ ವೈರಸ್ ಸೋಂಕುತರು ಗುಣಮುಖರಾಗಿದ್ದು, 2,494 ಸಕ್ರೀಯ ಪ್ರಕರಣಗಳಿವೆ. ಕರ್ನಾಟಕದಲ್ಲಿ ಕೊರೊನಾ ವೈರಸ್ ಮಹಾಮಾರಿಗೆ ಬುಧವಾರ ಮತ್ತೊಬ್ಬರು ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 53ಕ್ಕೆ ಏರಿಕೆಯಾಗಿದೆ.

ಕೊರೊನಾ ವೈರಸ್ ನಿಂದ ಮತ್ತೊಂದು ಸಾವು
ದಾವಣಗೆರೆಯಲ್ಲಿ ಕೊರೊನಾ ವೈರಸ್ ಸೋಂಕಿಗೆ ಮತ್ತೊಬ್ಬ ವ್ಯಕ್ತಿ ಪ್ರಾಣ ಬಿಟ್ಟಿದ್ದಾರೆ. ದಾವಣಗೆರೆ ನಿವಾಸಿಯಾಗಿದ್ದ 80 ವರ್ಷದ ವೃದ್ಧೆ ಪೇಶೆಂಟ್ ನಂಬರ್.3,861 ಕೊರೊನಾ ವೈರಸ್ ಚಿಕಿತ್ಸೆ ಫಲಕಾರಿಯಾಗದೇ ಪ್ರಾಣ ಬಿಟ್ಟಿದ್ದಾರೆ. ರೋಗಿ ಸಂಖ್ಯೆ 2,415 ಸಂಪರ್ಕದಿಂದ ಸೋಂಕು ತಗಲಿರುವ ವೃದ್ಧೆಯಲ್ಲಿ ತೀವ್ರ ಜ್ವರ, ಕೆಮ್ಮು ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು.

ರಾಜ್ಯದ ಪಾಲಿಗೆ ಮಹಾರಾಷ್ಟ್ರವೇ ಮಗ್ಗಲು ಮುಳ್ಳು
ರಾಜ್ಯದಲ್ಲಿ ಬುಧವಾರ ಪತ್ತೆಯಾದ 267 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳಲ್ಲಿ 232 ಮಂದಿಗೆ ಮಹಾರಾಷ್ಟ್ರದ ನಂಟು ಇರುವುದು ದೃಢಪಟ್ಟಿದೆ. ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆ ವಿಚಾರದಲ್ಲಿ ಮಹಾರಾಷ್ಟ್ರವು ಕರ್ನಾಟಕದ ಪಾಲಿಗೆ ಮತ್ತೊಮ್ಮೆ ಮಗ್ಗಲು ಮುಳ್ಳಾಗಿದೆ.

ಜಿಲ್ಲಾವಾರು ಪತ್ತೆಯಾದ ಸೋಂಕಿತ ಪ್ರಕರಣಗಳು
ಕರ್ನಾಟಕದಲ್ಲಿ ಬುಧವಾರ ಒಂದೇ ದಿನ 267 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿವೆ. ಕಲಬುರಗಿಯಲ್ಲಿ ಒಂದೇ ದಿನ 105 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಉಡುಪಿ - 62, ರಾಯಚೂರು - 35, ಬೆಂಗಳೂರು ನಗರ -20, ಮಂಡ್ಯ -13, ಯಾದಗಿರಿ -9, ವಿಜಯಪುರ - 6, ದಾವಣಗೆರೆ -3, ದಕ್ಷಿಣ ಕನ್ನಡ -2, ಮೈಸೂರು - 2, ಬಾಗಲಕೋಟೆ - 2, ಶಿವಮೊಗ್ಗ -2, ಕೋಲಾರ -2, ಬೆಂಗಳೂರು ಗ್ರಾಮಾಂತರ -1, ಧಾರವಾಡ - 1, ಬಳ್ಳಾರಿ -1, ಹಾಸನ -1 ಪ್ರಕರಣಗಳು ಪತ್ತೆಯಾಗಿವೆ.

ಜಿಲ್ಲಾವಾರು ಗುಣಮುಖರಾದ ಕೊವಿಡ್-19 ಸೋಂಕಿತರೆಷ್ಟು?
ರಾಜ್ಯದಲ್ಲಿ 267 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದರೆ ಇಂದು ಒಂದೇ ದಿನ 111 ಮಂದಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಹಾಸನ - 28, ಬೆಂಗಳೂರು - 19, ದಾವಣಗೆರೆ -13, ಚಿಕ್ಕಬಳ್ಳಾಪುರ -13, ದಕ್ಷಿಣ ಕನ್ನಡ - 9, ಬೆಳಗಾವಿ - 7, ಬಳ್ಳಾರಿ -5, ಬಾಗಲಕೋಟೆ -5, ಶಿವಮೊಗ್ಗ -4, ವಿಜಯಪುರ - 3, ಗದಗ -3, ಉತ್ತರ ಕನ್ನಡ -1, ಧಾರವಾಡ -1 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.












Click it and Unblock the Notifications