Breaking: ಕರ್ನಾಟಕದ 252 ಗ್ರಾ.ಪಂ.ಗೆ ಚುನಾವಣೆ, ಬೆಳಗ್ಗೆ 8ರಿಂದ ಮತದಾನ, ಅ.31ಕ್ಕೆ ಫಲಿತಾಂಶ
ಬೆಂಗಳೂರು, ಅಕ್ಟೋಬರ್ 28: ಕರ್ನಾಟಕದ ರಾಜ್ಯದ ಒಟ್ಟು 252 ಗ್ರಾಮ ಪಂಚಾಯಿತಿಗಳಿಗೆ ಇಂದು (ಅ.28) ಶುಕ್ರವಾರ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಮತದಾನ ಪ್ರಕ್ರಿಯೆಯು ಸಂಜೆ 5 ಗಂಟೆಗೆ ಪೂರ್ಣಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ರಾಜ್ಯದ ಅವಧಿ ಮುಗಿದ 257 ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ವಿವಿಧ ಕಾರಣಗಳಿಗೆ ತೆರವಾದ 187 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಶುಕ್ರವಾರ ನಡೆದಿದೆ. ಈ ಚುನಾವಣೆ ಫಲಿತಾಂಶವು ಅಕ್ಟೋಬರ್ 31ರಂದು ಹೊರಬೀಳಲಿದೆ. ಅಂದು ಬೆಳಗ್ಗೆ 8ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ.
ಇದೇ 2022ರ ಆಗಸ್ಟ್‌ನಿಂದ ನವೆಂಬರ್ ವೇಳೆಗೆ ಅವಧಿ ಮುಕ್ತಾಯ ಆಗಲಿರುವ 203 ಗ್ರಾಮ ಪಂಚಾಯತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಇದರೊಂದಿಗೆ ವಿವಿಧ ಕಾರಣಗಳಿಂದ ತೆರವಾಗಿರುವ 49 ಗ್ರಾಮ ಪಂಚಾಯತಿಗಳ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯನ್ನು ಅಕ್ಟೋಬರ್ 28ಕ್ಕೆ ನಡೆಸುವುದಾಗಿ ಕರ್ನಾಟಕ ರಾಜ್ಯ ಚುಣಾವಣೆ ಆಯೋಗ ಮೂರು ವಾರಗಳ ಹಿಂದೆ ಘೋಷಿಸಿದೆ. ಅದರಂತೆ ಇಂದು ಶುಕ್ರವಾರ ಚುನಾವಣೆ ಆರಂಭವಾಗಿದೆ.

ಈ ಚುನಾವಣೆ ನಡೆಯುವ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಸರ್ಕಾರಿ ನೌಕರರಿಗೆ ವೇತನ ಸಹಿತ ರಜೆ ಸರ್ಕಾರ ಆದೇಶಿಸಿತ್ತು. ಆದೇಶದಲ್ಲಿ ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡವರಿಗೆ ರಜೆ ಇಲ್ಲ, ಅವರು ಮತದಾನ ಮಾಡಲು ಅಗತ್ಯ ವ್ಯವಸ್ಥೆ ಕೈಗೊಳ್ಳುವಂತೆ ತಿಳಿಸಿತ್ತು.

ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಮತ್ತು ಅನುದಾನ ರಹಿತ ಶೈಕ್ಷಣಿಕ ಸಂಸ್ಥೆಗಳಿಗೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕ್‌ಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಖಾನೆ, ಸಹಕಾರಿ ರಂಗದ ಸಂಘ-ಸಂಸ್ಥೆಗಳ, ವ್ಯವಹಾರಿಕ ಮತ್ತು ಔದ್ಯಮಿಕ ಸಂಸ್ಥೆಗಳು, ಇತರ ಖಾಯಂ ಹಾಗೂ ದಿನಗೂಲಿ ಕೆಲಸದ ನೌಕರರಿಗೆ ಸಿಮೀತವಾಗಿ ರಜೆ ನೀಡಲಾಗಿದೆ.












Click it and Unblock the Notifications