Monsoon 2025: ಮಳೆ ನಕ್ಷತ್ರಗಳ ಅನ್ವಯ ಈ ಬಾರಿಯ ಮುಂಗಾರು ಮಳೆ
ಬೆಂಗಳೂರು, ಮಾರ್ಚ್ 17: ಮಾರ್ಚ್ ಆರಂಭದಿಂದಲೇ ಬೇಸಿಗೆಯ ಧಗೆಗೆ ಜನರು ಬಸವಳಿದು ಹೋಗಿದ್ದಾರೆ. ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಟಿದೆ. ಸೂರ್ಯ ನೆತ್ತಿ ಸುಡುತ್ತಿದ್ದು, ಪೂರ್ವ ಮುಂಗಾರು ಮಳೆ ಬೇಗ ಆರಂಭವಾಗಲಿ ಎಂದು ಜನರು ಪ್ರಾರ್ಥಿಸುತ್ತಿದ್ದಾರೆ. ಬಿಸಿಲು, ಉಷ್ಣ ಅಲೆಗೆ ಜನರು ಕಂಗೆಟ್ಟು ಹೋಗಿದ್ದಾರೆ. ಮಧ್ಯಾಹ್ನ 12 ಗಂಟೆಯ ಬಳಿಕ ಜನರು ಬಿಸಿಲು, ಸೆಕೆ ತಡೆಯಲಾರದೆ ಎಳನೀರು, ಜ್ಯೂಸ್‌ಗಳ ಮೊರೆ ಹೋಗಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದ್ದು, ಬಿಸಿಲ ಧಗೆಯನ್ನು ಕಡಿಮೆ ಮಾಡಿಲ್ಲ.
ಸರ್ಕಾರದ ಲೆಕ್ಕಾಚಾರದಂತೆ ಜೂನ್ 1 ರಿಂದ ಸೆಪ್ಟೆಂಬರ್ 30 ಮುಂಗಾರು ಮಳೆಯ ಅವಧಿಯಾಗಿದೆ. 2025ರ ಮುಂಗಾರು ಉತ್ತಮವಾಗಿರಲಿದ್ದು, ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞರು ಈಗಾಗಲೇ ಅಂದಾಜಿಸಿದ್ದಾರೆ. ಆದರೆ ಏಪ್ರಿಲ್ ಅಂತ್ಯ ಅಥವ ಮೇ ತಿಂಗಳಿನಲ್ಲಿ ಸರಿಯಾದ ಮುಂಗಾರಿನ ಚಿತ್ರಣ ಸಿಗಲಿದೆ. ಜ್ಯೋತಿಷ್ಯಶಾಸ್ತ್ರವೂ ಈ ವರ್ಷ ಮಳೆ ಉತ್ತಮವಾಗಿರಲಿದೆ ಎಂದು ಅಂದಾಜಿಸಿದೆ.

ಯುಗಾದಿ ಹಬ್ಬಕ್ಕೆ ಹೊಸ ಪಂಚಾಂಗ ಬರುತ್ತದೆ. ಜನರು ಮುಂದಿನ ವರ್ಷ ಹೇಗೆ ಮಳೆಯಾಗಬಹುದು? ಎಂಬುದನ್ನು ಈ ಮೂಲಕ ತಿಳಿಯುತ್ತಾರೆ. ಜ್ಯೋತಿಷ್ಯಶಾಸ್ತ್ರ 27 ನಕ್ಷತ್ರಗಳನ್ನು ಗುರುತಿಸಿದೆ. ಇದರಲ್ಲಿ 11 ಮಳೆ ನಕ್ಷತ್ರಗಳು ಹೆಚ್ಚು ಮಳೆಯನ್ನು ಸುರಿಸುತ್ತವೆ ಎಂದು ಅಂದಾಜಿಸಲಾಗುತ್ತದೆ. ಆದರೆ ಚಂಡಮಾರುತ ಉಂಟಾದರೆ ನಕ್ಷತ್ರಗಳ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿ ಭಾರೀ ಮಳೆಯಾಗುತ್ತದೆ.
2025ರ ಮಳೆ ನಕ್ಷತ್ರಗಳು: 11 ಮಳೆ ನಕ್ಷತ್ರಗಳಾದ ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷ, ಮಘ, ಹುಬ್ಬಾ, ಉತ್ತರಾ, ಹಸ್ತ, ಚಿತ್ತ, ಸ್ವಾತಿ ಮತ್ತು ವಿಶಾಖ ಅವಧಿಯಲ್ಲಿ ಹೆಚ್ಚು ಮಳೆಯಾಗುತ್ತದೆ ಎಂದು ಪಂಚಾಂಗದ ಮೂಲಕ ಅಂದಾಜಿಸಲಾಗುತ್ತದೆ. ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷ ದೊಡ್ಡ ಮಳೆ ನಕ್ಷತ್ರಗಳು. ಇವು ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಮಳೆ ಸುರಿಸುತ್ತವೆ.
2025ರ ಪ್ರಕಾರ ಏಪ್ರಿಲ್ 13 ರಿಂದ 26 ಅಶ್ವಿನಿ ಮಳೆ ನಕ್ಷತ್ರವಿದೆ. ಏಪ್ರಿಲ್ 27 ರಿಂದ ಮೇ 10ರ ತನಕ ಭರಣಿ ಮತ್ತು ಮೇ 11 ರಿಂದ 23ರ ತನಕ ಕೃತಿಕಾ ಮಳೆ ನಕ್ಷತ್ರ ಬರುತ್ತದೆ. ಈ ಅವಧಿಯಲ್ಲಿ ಪೂರ್ವ ಮುಂಗಾರು ಮಳೆ ಇರುತ್ತದೆ. ಆದರೆ ಚಂಡಮಾರುತ ಉಂಟಾದರೆ ಕೆಲವು ಪ್ರದೇಶಗಳಲ್ಲಿ ಸಾಧಾರಣೆ, ಹೆಚ್ಚು ಮಳೆಯಾಗುವ ಸಾಧ್ಯತೆಯೂ ಇರುತ್ತದೆ.
ಮೇ 24 ರಿಂದ ಜೂನ್ 6 ರೋಹಿಣಿ, ಜೂನ್ 7 ರಿಂದ 20 ಮೃಗಶಿರ, ಜೂನ್ 21 ರಿಂದ ಜುಲೈ 4 ಆರಿದ್ರ, ಜುಲೈ 5 ರಿಂದ 19 ಪುನರ್ವಸು, ಜುಲೈ 20 ರಿಂದ ಆಗಸ್ಟ್ 2 ಪುಷ್ಯ ಮಳೆ ನಕ್ಷತ್ರಗಳಿವೆ. ಈ ಅವಧಿಯಲ್ಲಿ ಹೆಚ್ಚು ಮಳೆಯಾಗುತ್ತದೆ ಎಂಬುದು ನಂಬಿಕೆಯಾಗಿದೆ. ಆದರೆ 2023ರಲ್ಲಿ ಮುಂಗಾರು ಮಳೆ ಸಹ ಕೈಕೊಟ್ಟಿತ್ತು.
ಆಗಸ್ಟ್ 3 ರಿಂದ 16 ಆಶ್ಲೇಷಾ, ಆಗಸ್ಟ್ 17 ರಿಂದ 29 ಮಘೆ, ಆಗಸ್ಟ್ 30 ರಿಂದ ಸೆಪ್ಟೆಂಬರ್ 12 ಹುಬ್ಬಾ, ಸೆಪ್ಟೆಂಬರ್ 13 ರಿಂದ 26 ಉತ್ತರಾ, ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 9 ಹಸ್ತ, ಅಕ್ಟೋಬರ್ 10 ರಿಂದ 24 ಚಿತ್ತಾ ಮಳೆ ನಕ್ಷತ್ರವಿದೆ. ಆಶ್ಲೇಷಾ ಮಳೆ ಆರ್ಭಟಿಸುವುದನ್ನು ನಾವು ನೋಡಿದ್ದೇವೆ. ಉಳಿದ ಮಳೆಗಳು ಬಂದರೂ ಎಲ್ಲಾ ಕಡೆಯೂ ಹೆಚ್ಚಾಗಿ ಸುರಿಯುವುದಿಲ್ಲ.
ಅಕ್ಟೋಬರ್ 25 ರಿಂದ ನವೆಂಬರ್ 6 ಸ್ವಾತಿ, ನವೆಂಬರ್ 7 ರಿಂದ 18 ವಿಶಾಖ ಮಳೆ ನಕ್ಷತ್ರವಿದೆ. ಪಂಚಾಂಗದ ಪ್ರಕಾರ ಮಳೆ ಆರಂಭವಾಗುವುದು ಜೂನ್‌ನಲ್ಲಿ. ಹವಾಮಾನ ಇಲಾಖೆ ಪ್ರಕಾರವೂ ಪೂರ್ವ ಮುಂಗಾರು ಮಳೆ ಬಳಿಕ ಮುಂಗಾರು ಮಳೆ ಆರಂಭವಾಗುತ್ತದೆ.
ಜ್ಯೋತಿಷ್ಯದ ಪ್ರಕಾರ ಬುಧ ಮತ್ತು ಶುಕ್ರ ಒಂದು ರಾಶಿಯಲ್ಲಿ ನಿಕಟವರ್ತಿಗಳಾಗಿದ್ದರೆ ಉತ್ತಮ ಮಳೆಯನ್ನು ಆ ವರ್ಷ ನಿರೀಕ್ಷೆ ಮಾಡಬಹುದು. ಯುಗಾದಿ ಹಬ್ಬದಂದು ಪಂಚಾಂಗ ಓದುವ ಕ್ರಮವಿದೆ. ಆಗ ಮಳೆಯ ಕುರಿತು ಸ್ಪಷ್ಟವಾದ ಮಾಹಿತಿ ಸಿಗುತ್ತದೆ.












Click it and Unblock the Notifications