ಕರ್ನಾಟಕ SSLC ಫಲಿತಾಂಶದ ಪ್ರಮುಖ ಅಂಕಿ ಅಂಶಗಳು ಇಲ್ಲಿವೆ
Recommended Video

ಈ ಬಾರಿಯ (2017-18) ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಪರೀಕ್ಷೆ ಎದುರಿಸಿದ್ದ 8,38,088 ವಿದ್ಯಾರ್ಥಿಗಳಲ್ಲಿ 6,02,802 ವಿದ್ಯಾರ್ಥಿಗಳು ಪಾಸಾಗಿದ್ದು ರಾಜ್ಯದ ಒಟ್ಟು ಫಲಿತಾಂಶ 71.93 ಆಗಿದೆ.
ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕುಸಿತ ಕಂಡುಬಂದಿತ್ತು 2016-17ನೇ ಸಾಲಿನಲ್ಲಿ ಕೇವಲ 67.87% ಫಲಿತಾಂಶ ಬಂದಿತ್ತು. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ದಾಖಲೆಯ 4.06% ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗಿದ್ದಾರೆ
ಕಳೆದ ಬಾರಿ ಹೆಚ್ಚುವರಿ ಅಂಕಗಳನ್ನು ನೀಡಲು ಮಾನದಂಡಗಳು ಇಲ್ಲದಿದ್ದರೂ ಫಲಿತಾಂಶ ಕಡಿಮೆಯಾಗಿತ್ತು. ಆದರೆ ಈ ಬಾರಿ ಮಾನದಂಡಗಳನ್ನು ಅಳವಡಿಸಿಕೊಂಡಿದ್ದರೂ ಫಲಿತಾಂಶ ಹೆಚ್ಚಾಗಿದೆ. ಸ್ವತಃ ಎಸ್‌ಎಸ್‌ಎಲ್‌ಸಿ ಮಂಡಳಿ ಈ ಬಗ್ಗೆ ಆಶ್ಚರ್ಯಪಟ್ಟಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದ ಮುಖ್ಯಾಂಶಗಳು ಇಲ್ಲಿವೆ ನೋಡಿ....

ಸರ್ಕಾರಿ ಶಾಲೆಗಳ ಉತ್ತಮ ಸಾಧನೆ
ರಾಜ್ಯದ ಒಟ್ಟು 285594 ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಲ್ಲಿ 214545 ವಿದ್ಯಾರ್ಥಿಗಳು ಪಾಸಾಗಿದ್ದಾರೆ, ಸರ್ಕಾರಿ ಶಾಲೆಯ ಒಟ್ಟು ಫಲಿತಾಂಶ 75.12%. ಅನುದಾನ ರಹಿತ ಖಾಸಗಿ ಶಾಲೆಗಳ ಒಟ್ಟು ಫಲಿತಾಂಶ 83.05% ಆಗಿದ್ದರೆ ಅನುದಾನಿತ ಖಾಸಗಿ ಶಾಲೆಗಳ ಫಲಿತಾಂಶ 76.27%. ಫಲಿತಾಂಶದಲ್ಲಿ ಖಾಸಗಿ ಶಾಲೆಗಳೇ ಮುಂದೆ ಇದ್ದರೂ, ಸರ್ಕಾರಿ ಶಾಲೆ ಹಿಂದೆಯೇನೂ ಇಲ್ಲ ಎಂಬುದು ಸಮಾಧಾನಕರ.

ಈ ಬಾರಿಯೂ ಹೆಣ್ಣು ಮಕ್ಕಳೇ ಮುಂದೆ
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲೂ ಹೆಣ್ಣು ಮಕ್ಕಳದ್ದೇ ಮೇಲುಗೈ. 66.56 % ಗಂಡು ಮಕ್ಕಳು ಪಾಸಾಗಿದ್ದರೆ 78.01% ಹೆಣ್ಣು ಮಕ್ಕಳು ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಇಬ್ಬರ ನಡುವಿನ ಅಂತರ 12%ಗೂ ಅಧಿಕ.

ನಗರದವರು ಹಿಂದೆ
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರದ ವಿದ್ಯಾರ್ಥಿಗಳಿಗಿಂತಲೂ ಮುಂದಿದ್ದಾರೆ. ಗ್ರಾಮೀಣ ಭಾಗದ 74% ವಿದ್ಯಾರ್ಥಿಗಳು ಪಾಸಾಗಿದ್ದರೆ, ನಗರ ಪ್ರದೇಶದ 69.38 % ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಳೆದ ವರ್ಷವೂ ಗ್ರಾಮೀಣ ವಿದ್ಯಾರ್ಥಿಗಳು ಮುಂದಿದ್ದರು.

ಎರಡರಲ್ಲೂ ಅನುದಾನ ರಹಿತ ಮುಂದೆ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೂನ್ಯ ಸಾಧನೆ ಮಾಡಿರುವ ಶಾಲೆಗಳ ಸಂಖ್ಯೆ ಕಡಿಮೆ ಆಗಿದೆ. ಶೇ ನೂರು ಫಲಿತಾಂಶವನ್ನು ಒಟ್ಟು 1342 ಶಾಲೆಗಳು ಪಡೆದಿದ್ದಾರೆ. 43 ಶಾಲೆಗಳು ಶೂನ್ಯ ಫಲಿತಾಂಶ ನೀಡಿವೆ. ಎರಡರಲ್ಲೂ ಅನುದಾನರಹಿತ ಶಾಲೆಗಳೇ ಮುಂದಿದ್ದು ಕೇವಲ ಎರಡು ಸರ್ಕಾರಿ ಶಾಲೆಗಳಲ್ಲಷ್ಟೆ ಶೂನ್ಯ ಫಲಿತಾಂಶ ಬಂದಿರುವುದು ಸಮಾಧಾನಕರ.

ಫಸ್ಟ್ ರ್ಯಾಂಕ್ ರಾಜುಗಳಿವರು
625 ಕ್ಕೆ 625 ಅಂಕಗಳನ್ನು ಇಬ್ಬರು ವಿದ್ಯಾರ್ಥಿಗಳು ಪಡೆದಿದ್ದಾರೆ. 624 ಅಂಕಗಳನ್ನು 8 ವಿದ್ಯಾರ್ಥಿಗಳು ಪಡೆದಿದ್ದಾರೆ. 623 ಅಂಕಗಳನ್ನು 12 ಜನ, 622 ಅಂಕಗಳನ್ನು 22 ಜನ ವಿದ್ಯಾರ್ಥಿಗಳು, 221 ಅಂಕಗಳನ್ನು 35 ವಿದ್ಯಾರ್ಥಿಗಳು, 620 ಅಂಕಗಳನ್ನು 39 ವಿದ್ಯಾರ್ಥಿಗಳು ಗಳಿಸಿದ್ದಾರೆ.

ಕನ್ನಡಕ್ಕಿಂತ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳ ಮೇಲುಗೈ
ಭಾಷಾವಾರು ಫಲಿತಾಂಶದಲ್ಲಿ ಅಚ್ಚರಿಯ ಅಂಕಿ ಅಂಶಗಳು ಮುಂದೆ ಬಂದಿವೆ. ಕನ್ನಡ ಮಾಧ್ಯಮದ 67.33% ಪಾಸಾಗಿದ್ದರೆ, ಇಂಗ್ಲಿಷ್ ಮಾಧ್ಯಮದ 82.23% ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅತಿ ಕಡಿಮೆ ಫಲಿತಾಂಶ ತಮಿಳು ವಿಷಯಕ್ಕೆ ಬಂದಿದ್ದು ತಮಿಳಿನಲ್ಲಿ 49.71% ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಉರ್ದುವಿನಲ್ಲಿ 57.29% ಪಾಸಾಗಿದ್ದಾರೆ.












Click it and Unblock the Notifications