Karnataka CM: ಅಧಿಕಾರ ಹಂಚಿಕೆ ಫಾರ್ಮುಲಾಗೆ ಮಣಿದ ಸಿದ್ದು, ಡಿಕೆಶಿ: ಯಾವ ಬಣಕ್ಕೆ ಎಷ್ಟು ಸಚಿವ ಸ್ಥಾನ?
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಬಹುಮತ ಪಡೆದಿರುವ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದ್ದು, ಇದೇ ವೇಳೆ ಮುಖ್ಯಮಂತ್ರಿ ಸ್ಥಾನ ಬಿಕ್ಕಟ್ಟನ್ನು ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಬಗೆಹರಿಸಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಪಕ್ಷ ಸಂಘಟನೆ ಮಾಡಿದ್ದ ಡಿ.ಕೆ. ಶಿವಕುಮಾರ್ ಅವರು ತಮಗೇ ಈ ಬಾರಿ ಸಿಎಂ ಸ್ಥಾನ ನೀಡಬೇಕೆಂದು ಹಠಕ್ಕೆ ಬಿದ್ದಿದ್ದರು. ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಕಾರಣದಿಂದಾಗಿ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳು ಕಾಂಗ್ರೆಸ್‌ಗೆ ಬಂದಿದ್ದವು. ಈ ವಿಚಾರವನ್ನು ಹೈಕಮಾಂಡ್ ಮುಂದಿಟ್ಟಿದ್ದರು.

ಇನ್ನು ಸಿದ್ದರಾಮಯ್ಯ ಅವರು ಈ ಹಿಂದೆ ಕ್ಲೀನ್ ಇಮೇಜ್‌ನಲ್ಲಿ ಐದು ಅಧಿಕಾರ ನಡೆಸಿರುವ ತಮ್ಮನ್ನು ನೋಡಿ ಅಹಿಂದ ಮತಗಳು ಒಟ್ಟುಗೂಡಿ ಕಾಂಗ್ರೆಸ್‌ಗೆ ನೀಡಿದ್ದಾರೆ. ನನಗೆ ಸಿಎಂ ಹುದ್ದೆ ನೀಡಿ ಎಂದು ಬೇಡಿಕೆ ಇಟ್ಟಿದ್ದರು. ಇಬ್ಬರೂ ನಾಯಕರಿಗೂ ಸಮಾಧಾನವಾಗುವಂತಹ ನಿರ್ಧಾರ ತೆಗೆದುಕೊಳ್ಳುವುದು ಹೈಕಮಾಂಡ್‌ಗೆ ದೊಡ್ಡ ಹೊರೆಯಾಗಿತ್ತು.
ಅಂತಿಮವಾಗಿ ಸಿದ್ದರಾಮಯ್ಯ ಅವರನ್ನು ಕರ್ನಾಟಕದ ನೂತನ ಮುಖ್ಯಮಂತ್ರಿಯನ್ನಾಗಿ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರನ್ನು ನೇಮಕ ಮಾಡಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.

ಕಳೆದ ಮೂರು ದಿನಗಳಿಂದ ಸಿಎಂ ಸ್ಥಾನಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ತೀವ್ರ ಪೈಪೋಟಿ ನಡೆಸುತ್ತಿದ್ದರು. ಆದರೆ, ಹೈಕಮಾಂಡ್‌ನ ಮಧ್ಯಸ್ಥಿಕೆಯಲ್ಲಿ ಎಲ್ಲವೂ ಸುಗಮವಾಗಿ ಬಗೆಹರಿದಿದ್ದು, ಅಧಿಕಾರ ಹಂಚಿಕೆ ಫಾರ್ಮುಲಾಗೆ ಉಭಯ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ.
ಹೈಕಮಾಂಡ್‌ನ 2:3 ಫಾರ್ಮುಲಾ ಎನಿದು?
ಕರ್ನಾಟಕ ನೂತನ ಮುಖ್ಯಮಂತ್ರಿಯಾಗಲು ಬಿಗಿಪಟ್ಟು ಹಿಡಿದಿದ್ದ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯರನ್ನು ಸಂಧಾನಗೊಳಿಸುವುದು ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ಸವಾಲಾಗಿತ್ತು. ಆದರೆ, ಇಬ್ಬರೂ ನಾಯಕರೂ ಪೂರ್ಣಾವಧಿಗೆ ತಮ್ಮನ್ನೇ ಸಿಎಂ ಆಗಿ ನೇಮಕ ಮಾಡಬೇಕೆಂದು ಹಠ ಹಿಡಿದಿದ್ದರು.
ಆದರೆ, ಈ ಬಿಕ್ಕಟ್ಟಿಗೆ ಸಂಧಾನ ಸೂತ್ರ ಹೆಣೆದ ಕಾಂಗ್ರೆಸ್ಹೈಕಮಾಂಡ್, ಇಬ್ಬರ ಜೊತೆ ಪ್ರತ್ಯೇಕ ಸಭೆ ನಡೆಸಿ, ಅಭಿಪ್ರಾಯ ಪಡೆದ ನಂತರ ಅಧಿಕಾರ ಹಂಚಿಕೆಯ ಫಾರ್ಮುಲಾವನ್ನು ಮುಂದಿಟ್ಟರು.

ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾದವರಿಗೆ 2 ವರ್ಷ ಮತ್ತು ಎರಡನೇ ಅವಧಿಯಲ್ಲಿ ಮುಖ್ಯಮಂತ್ರಿಯಾದವರಿಗೆ 3 ವರ್ಷಗಳ ಅಧಿಕಾರ ಹಂಚಿಕೆ ಫಾರ್ಮುಲಾಗೆ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ.
2013ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಮತ್ತೆ ಸಿಎಂ ಆಗಿ ನೇಮಿಸಲಾಗಿದೆ. ಇನ್ನು ಸಿದ್ದರಾಮಯ್ಯ ಬಣದ 13 ಶಾಸಕರು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ.
ಇದೇ ವೇಳೆ ಸಿಎಂ ಸ್ಥಾನದ ಆಸೆಯಲ್ಲಿದ್ದ ಡಿ.ಕೆ. ಶಿವಕುಮಾರ್ ಅವರನ್ನು ಡಿಸಿಎಂ ಆಗಿ ನೇಮಕ ಮಾಡಲಾಗಿದೆ. ಅಲ್ಲದೇ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯುವುದು ಮತ್ತು ತಮ್ಮ 20 ಆಪ್ತ ಶಾಸಕರಿಗೆ ಸಚಿವ ಸ್ಥಾನದ ಭರವಸೆಯನ್ನು ಕಾಂಗ್ರೆಸ್ ಹೈಕಮಾಂಡ್ ನೀಡಿದೆ.
ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುವುದಾಗಿ ಈಗಾಗಲೇ ಹೇಳಿದ್ದಾರೆ. ವಯಸ್ಸಿನ ಕಾರಣ ಮೊದಲಿಗೆ ತಮ್ಮನ್ನು ಸಿಎಂ ಸ್ಥಾನಕ್ಕೆ ಪರಿಗಣಿಸಬೇಕೆಂದು ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದರು. ಅಲ್ಲದೇ 50:50 ಫಾರ್ಮುಲಾವನ್ನು ಮುಂದಿಟ್ಟಿದ್ದರು. ಆದರೆ ಹೈಕಮಾಂಡ್ ಅಳೆದು ತೂಗಿ 2:3 ಗೆ ಮನವೊಲಿಸಿದ್ದಾರೆ.
ಸರ್ಕಾರ ರಚನೆಯ ಬಳಿಕ ಬಹಿರಂಗ ಕಿತ್ತಾಟ ಬೇಡ, ಅಧಿಕಾರ ಹಂಚಿಕೆಯ ಸಮತೋಲನ ಕಾಪಾಡಿ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿ ಎಂದು ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೂಚಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications