ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಯ 141 OMR ಶೀಟ್ ನಾಪತ್ತೆ: KEA ನೇಮಕಾತಿಯಲ್ಲಿ ಮುಗಿಯದ ಯಡವಟ್ಟು

ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಯಡವಟ್ಟೊಂದು ನಡೆದಿದ್ದು, ಈಗ ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿರುವ ಪರೀಕ್ಷಾ ಕೇಂದ್ರವೊಂದರಿಂದ ಬರೋಬ್ಬರಿ 141 ಒಎಂಆರ್ ಉತ್ತರ ಪತ್ರಿಕೆಗಳು ನಾಪತ್ತೆಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಅಭ್ಯರ್ಥಿಗಳು ಸೃಷ್ಟಿಸಿದ ಗೊಂದಲದ ನಡುವೆ ಈ ಘಟನೆ ನಡೆದಿದ್ದು, ಪರೀಕ್ಷಾ ಅಕ್ರಮದ ಹಾಗೂ ಒಎಂಆರ್ ದುರ್ಬಳಕೆಯ ಅನುಮಾನಗಳನ್ನ ಹುಟ್ಟುಹಾಕಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಆಗಸ್ಟ್ 2ರಂದು ರಾಜ್ಯ ಪೊಲೀಸ್ ಇಲಾಖೆಯ 3,395 ಉಳಿಕೆ ಮೂಲ ವೃಂದ (RPC) ಮತ್ತು 596 ಕಲ್ಯಾಣ ಕರ್ನಾಟಕ ವೃಂದದ (Local Cadre) ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯನ್ನು ನಡೆಸಿತ್ತು. ರಾಜ್ಯದಾದ್ಯಂತ ಬಹುತೇಕ ಕಡೆ ಸುಗಮವಾಗಿ ಪರೀಕ್ಷೆ ನಡೆದಿದ್ದರೂ, ತಿಕೋಟಾದಲ್ಲಿರುವ ಶ್ರೀ ಶಾರದಾಂಭಾ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಮಾತ್ರ ದೊಡ್ಡ ಮಟ್ಟದ ಗೊಂದಲ ಸೃಷ್ಟಿಯಾಗಿತ್ತು.

OMR

ನಾಪತ್ತೆಯಾದ 141 ಒಎಂಆರ್ ಉತ್ತರ ಪತ್ರಿಕೆಗಳು: ಅಸಲಿಗೆ ನಡೆದಿದ್ದೇನು?

ಪೊಲೀಸ್ ನೇಮಕಾತಿ ಪರೀಕ್ಷೆಗಾಗಿ ಕೆಇಎ ವತಿಯಿಂದ ತಿಕೋಟಾದ ಈ ಶ್ರೀ ಶಾರದಾಂಭಾ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಒಟ್ಟು 432 ಒಎಂಆರ್ ಶೀಟ್‌ಗಳು ಮತ್ತು ಪ್ರಶ್ನೆ ಪತ್ರಿಕೆಗಳನ್ನ ಕಳುಹಿಸಲಾಗಿತ್ತು. ಆದರೆ, ಪರೀಕ್ಷೆ ಮುಗಿದ ಬಳಿಕ ಆ ಕೇಂದ್ರದಿಂದ ಪರೀಕ್ಷಾ ಪ್ರಾಧಿಕಾರಕ್ಕೆ ಕೇವಲ 291 ಒಎಂಆರ್ ಶೀಟ್‌ಗಳು ಮಾತ್ರ ವಾಪಸ್ ಬಂದಿವೆ. ಉಳಿದ 141 ಒಎಂಆರ್ ಪತ್ರಿಕೆಗಳು ಎಲ್ಲಿ ಹೋದವು ಎಂಬ ಬಗ್ಗೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಬಳಿ ಯಾವುದೇ ಉತ್ತರವಿಲ್ಲ. ಪರೀಕ್ಷೆ ಬರೆದ ಅಭ್ಯರ್ಥಿಗಳೇ ಆ ಒಎಂಆರ್ ಶೀಟ್‌ಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರೇ ಎಂಬ ಬಗ್ಗೆಯೂ ನಿಖರ ಮಾಹಿತಿಯಿಲ್ಲದಿರುವುದು ಪ್ರಾಧಿಕಾರದ ಕಳವಳಕ್ಕೆ ಕಾರಣವಾಗಿದೆ.

OMR ಮತ್ತು ಪ್ರಶ್ನೆಪತ್ರಿಕೆ ಕ್ರಮ ಸಂಖ್ಯೆಗಳ ಗೊಂದಲ

ತಿಕೋಟಾದ ಇದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ದಿನದಂದು ಅಭ್ಯರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಒಎಂಆರ್ ಶೀಟ್ ಮೇಲಿರುವ ಕ್ರಮ ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆಯ ಮೇಲಿರುವ ಕ್ರಮ ಸಂಖ್ಯೆಗಳು ಹೊಂದಾಣಿಕೆಯಾಗುತ್ತಿಲ್ಲ ಎಂದು ಆರೋಪಿಸಿ ಕೆಲ ವಿದ್ಯಾರ್ಥಿಗಳು ಪರೀಕ್ಷೆಯನ್ನ ಬಹಿಷ್ಕರಿಸಿದ್ದರು. ತಾವು ಬರೆಯುತ್ತಿದ್ದ ಒಎಂಆರ್ ಶೀಟ್ ಹಾಗೂ ಪ್ರಶ್ನೆ ಪತ್ರಿಕೆಯೊಂದಿಗೆ ಪರೀಕ್ಷಾ ಕೇಂದ್ರದ ಕಾಂಪೌಂಡ್ ಹಾರಿ ಹೊರನಡೆದಿದ್ದರು.

ಆದರೆ, ಒಎಂಆರ್ ಮತ್ತು ಪ್ರಶ್ನೆಪತ್ರಿಕೆ ಕ್ರಮ ಸಂಖ್ಯೆ ಹೊಂದಾಣಿಕೆ ಆಗಬೇಕೆಂಬ ಯಾವುದೇ ನಿಯಮವಿಲ್ಲ ಎಂದು ಕೆಇಎ ಆಗಲೇ ಸ್ಪಷ್ಟಪಡಿಸಿತ್ತು. ಆದರೂ, ಇದೀಗ ಆ ಕೇಂದ್ರದಿಂದ ಇಷ್ಟೊಂದು ಪ್ರಮಾಣದ ಒಎಂಆರ್ ಶೀಟ್‌ಗಳು ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

OMR ದುರ್ಬಳಕೆ ಆತಂಕ: ಕಠಿಣ ಕ್ರಮಕ್ಕೆ ಮುಂದಾದ ಕೆಇಎ

ನಾಪತ್ತೆಯಾದ ಒಎಂಆರ್ ಪತ್ರಿಕೆಗಳು ಬಳಕೆಯಾದವುಗಳೇ ಅಥವಾ ಖಾಲಿ ಇರುವಂತಹವುಗಳೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. "ಬಳಕೆಯಾದ ಅಥವಾ ಖಾಲಿಯಿರುವ ಎಲ್ಲಾ ಒಎಂಆರ್ ಶೀಟ್‌ಗಳನ್ನ ನಾವು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುತ್ತೇವೆ. ಆದರೆ, ಅವು ಕಾಣೆಯಾಗಿದ್ದರೆ, ಬೇರೆ ರೀತಿಯಲ್ಲಿ ದುರ್ಬಳಕೆಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹೀಗಾಗಿ ಕಾಣೆಯಾದ ಎಲ್ಲಾ ಒಎಂಆರ್ ಶೀಟ್‌ಗಳನ್ನ ಕೂಡಲೇ ಪತ್ತೆಹಚ್ಚಬೇಕಿದೆ" ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಕಳವಳ ವ್ಯಕ್ತಪಡಿಸಿದ್ದಾರೆ.

ಪರೀಕ್ಷಾ ಕೇಂದ್ರದಲ್ಲಿ ಗೊಂದಲ ಸೃಷ್ಟಿಸಿದ ಹಾಗೂ ಒಎಂಆರ್ ಶೀಟ್ ಕದ್ದೊಯ್ದವರು ಮುಂದಿನ ದಿನಗಳಲ್ಲಿ ಯಾವುದೇ ಪರೀಕ್ಷೆ ಬರೆಯದಂತೆ ನಿಷೇಧ ಹೇರಲು ಪ್ರಾಧಿಕಾರ ಚಿಂತನೆ ನಡೆಸಿದೆ. ಈ ಸಂಪೂರ್ಣ ಘಟನೆ ಕುರಿತು ಸಮಗ್ರ ವರದಿ ನೀಡುವಂತೆ ವಿಜಯಪುರ ಜಿಲ್ಲಾಧಿಕಾರಿಗಳು ಹಾಗೂ ಕಾಲೇಜಿನ ಪ್ರಾಂಶುಪಾಲರಿಗೆ ಕೆಇಎ ಪತ್ರ ಬರೆದಿದ್ದು, ವರದಿ ಬಂದ ಕೂಡಲೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+