BIG NEWS : ʼರಾಜ್ಯ ಸರ್ಕಾರದಿಂದ ಶೀಘ್ರವೇ 14 ಲಕ್ಷ BPL ಕಾರ್ಡ್ ಗಳು ರದ್ದುʼ
ಬೆಂಗಳೂರು, ನವೆಂಬರ್ 19: ಕರುನಾಡ ಜನತೆಗೆ ಬಿಗ್ ಶಾಕಿಂಗ್ ನ್ಯೂಸ್ ಎದುರಾಗಿದ್ದು. ರಾಜ್ಯದಲ್ಲಿ ಶೀಘ್ರವೇ 14 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲು ಉದ್ದೇಶಿಸಲಾಗಿದೆ. ಇದುವರೆಗೆ 3.63 ಲಕ್ಷ ಕಾರ್ಡ್ ರದ್ದಾಗಿದೆ ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಅವರು, ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅನರ್ಹರ ಕಾರ್ಡ್ ಗಳನ್ನು ರದ್ದು ಮಾಡಿ ಎಪಿಎಲ್ ಕಾರ್ಡ್ ಆಗಿ ಪರಿವರ್ತನೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇನ್ನೂ ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಣೆಗೆ ಯಾವುದೇ ತೊಂದರೆ ಇಲ್ಲ. ಒಂದು ವೇಳೆ ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗಿದ್ದಲ್ಲಿ 24 ಗಂಟೆಯೊಳಗೆ ವಾಪಸ್ ಬಿಪಿಎಲ್ ಕಾರ್ಡ್ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಅನರ್ಹರ ಬಿಪಿಎಲ್ ಕಾರ್ಡ್‌ಗಳನ್ನು ಮಾತ್ರ ರದ್ದು ಮಾಡಲಾಗುವುದು. ಅರ್ಹರ ಯಾವ ಕಾರ್ಡ್‌ಗಳೂ ರದ್ದಾಗುವುದಿಲ್ಲ, ಬಿಪಿಎಲ್ ಕಾರ್ಡ್ ಪಡೆಯಲು ಯಾರು ಅರ್ಹರು ಎನ್ನುವ ಬಗ್ಗೆ ಮಾನದಂಡಗಳಿದ್ದು, ಅದನ್ನು ಆಧರಿಸಿ ಬಿಪಿಎಲ್ ಕಾರ್ಡ್ ಗಳ ಪರಿಶೀಲನೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಿಳಿಸಿದ್ದಾರೆ ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಹೇಳಿದರು.
ಇನ್ನೂ ಬಿಪಿಎಲ್ ಕಾರ್ಡ್ ರದ್ದಾಗಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಅನರ್ಹರ ಬಿಪಿಎಲ್ ಕಾರ್ಡ್ ಗಳನ್ನು ಮಾತ್ರ ರದ್ದು ಮಾಡಲಾಗುವುದು. ಅರ್ಹ ಬಡವರಿಗೆ ಕಾರ್ಡು ತಪ್ಪಿಸುವುದಿಲ್ಲ. ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಿದ್ದು ನಾವೇ ಹೊರತು, ಬಿಜೆಪಿಯಾಗಲಿ ಜೆಡಿಎಸ್ ಆಗಲಿ ನೀಡಿಲ್ಲ. ಕಾರ್ಯಕ್ರಮ ಜಾರಿ ಮಾಡಿದ್ದು ಈ ಸಿದ್ದರಾಮಯ್ಯ.
2017ರಲ್ಲಿ ಒಂದು ರೂಪಾಯಿಗೆ ನೀಡುತ್ತಿದ್ದ ಅಕ್ಕಿಯನ್ನು ಉಚಿತವಾಗಿ ನೀಡಲಾಯಿತು. ಇದನ್ನು ಬಿಜೆಪಿ ಮಾಡಿಲ್ಲ. ಸುಮ್ಮನೆ ಮಾತನಾಡುತ್ತಾರೆ. ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲಿ ಇಂಥ ಯೋಜನೆಯನ್ನು ಜಾರಿ ಮಾಡಿದ್ದಾರೆ. ಗುಜರಾತ್, ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ, ಹರಿಯಾಣ ಎಲ್ಲಿ ಮಾಡಿದ್ದಾರೆ ಹೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.
ಇನ್ನೂ ಈ ಕುರಿತು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಬಿಪಿಎಲ್ ಕಾರ್ಡ್ ಪರಿಷ್ಕರಣೆ ಸಂಬಂಧ ಸರ್ಕಾರ ಬಡವರ ಅನ್ನ ಕಸಿಯುತ್ತಿಲ್ಲ. ಬಿಜೆಪಿಯವರಿಗೆ ಬೇರೇನು ಕೆಲಸವಿದೆ. ನಮ್ಮ ಕ್ಷೇತ್ರದಲ್ಲೂ ಶೇ 90 ರಷ್ಟು ಹಾಗೂ ಹೊಳೆನರಸೀಪುರದಲ್ಲಿ ಶೇ 92 ಬಿಪಿಎಲ್ ಕಾರ್ಡುದಾರರಿದ್ದಾರೆ. ಹೀಗಾಗಿ ಇವುಗಳನ್ನು ಪರಿಶೀಲನೆ ಮಾಡಬೇಕಲ್ಲವೇ. ನಿಜವಾದ ಅರ್ಹರಿಗೆ ಬಿಪಿಎಲ್ ಕಾರ್ಡ್ ಸಿಕ್ಕಿದೆಯೇ ಇಲ್ಲವೇ ಎಂದು ನೋಡಬೇಕಾಗಿದೆ. ಕೆಲವು ಮಾನದಂಡಗಳ ಆಧಾರದ ಮೇಲೆ ಕೆಲವು ಬಿಪಿಎಲ್ ಕಾರ್ಡು ರದ್ದಾಗಿವೆ ಎಂದು ಹೇಳಿದರು.












Click it and Unblock the Notifications