ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ: ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ
ಕಲಬುರಗಿ, ಫೆಬ್ರವರಿ 19: ಕರ್ನಾಟಕದಲ್ಲಿ ಕೆಲವೇ ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಲಿವೆ. ಪರೀಕ್ಷೆಗಳ ಸಂದರ್ಭದಲ್ಲಿ ಸರ್ಕಾರಿ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. ಈ ಕುರಿತು ಸಾರಿಗೆ ನಿಗಮಗಳಿಗೆ ಮಾಹಿತಿ ನೀಡಲಾಗಿದ್ದು, ಚಾಲಕರು, ನಿರ್ವಾಹಕರಿಗೂ ಸೂಕ್ತ ನಿರ್ದೇಶನ ನೀಡುವಂತೆ ಸೂಚನೆ ನೀಡಲಾಗಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಈ ಕುರಿತು ಸುತ್ತೋಲೆಯನ್ನು ಹೊರಡಿಸಿದೆ. ಈ ಸುತ್ತೋಲೆ ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ನಿಗಮದ ಬಸ್‌ಗಳಲ್ಲಿ ಪರೀಕ್ಷಾ ದಿನಗಳಂದು ಉಚಿತವಾಗಿ ಪ್ರಯಾಣಿಸಲು ಅನುಮತಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದ್ದು, ಕರಾರಸಾ ನಿಗಮದ ಸುತ್ತೋಲೆ ದಿನಾಂಕ 14/02/2025 ಉಲ್ಲೇಖಿಸಲಾಗಿದೆ.

ಸುತ್ತೋಲೆಯ ವಿವರಗಳು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದಿನಾಂಕ 01.03.2025 ರಿಂದ ಕರ್ನಾಟಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ದಿನಾಂಕ 21.03.2025 ರಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ಪ್ರಾರಂಭವಾಗಲಿವೆ.
ಈ ಸಂಬಂಧ ವಿದ್ಯಾರ್ಥಿಗಳಿಗೆ ಅವರ ವಿದ್ಯಾಸಂಸ್ಥೆಯ ಹೊರತಾಗಿ ಇತರೆ ವಿದ್ಯಾಸಂಸ್ಥೆಗಳಗೆ ಪರೀಕ್ಷಾ ಕೇಂದ್ರಗಳ ನಿಯೋಜನೆಯಾಗಿರುವುದರಿಂದ, ಪರೀಕ್ಷಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಗಳವರೆಗೆ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿಸಿರುವ ಕುರಿತು ಮುಖ್ಯ ಸಂಚಾರ ವ್ಯವಸ್ಥಾಪಕರು (ವಾ), ಕರಾರಸಾ ನಿಗಮ ಬೆಂಗಳೂರು ಸುತ್ತೋಲೆಯನ್ನು ಹೊರಡಿಸಿರುತ್ತಾರೆ. ಅದರಂತೆ ಸೂಕ್ತಾಧಿಕಾರಿಗಳಾದ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಅನುಮೋದನೆ ನೀಡಿರುತ್ತಾರೆ.
ಅದರನ್ವಯ ಕ.ಕ.ರ.ಸಾ ನಿಗಮವು, ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುವ ದಿನಾಂಕಗಳಂದು ಅಂದರೆ, ದಿನಾಂಕ 01.03.2025 ರಿಂದ 20.03.2025 ರವರೆಗೆ ಹಾಗೂ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಯುವ ದಿನಾಂಕಗಳಂದು ಅಂದರೆ, ದಿನಾಂಕ 21.03.2025 ರಿಂದ 4.04.2025 ರವರೆಗೆ ಪರೀಕ್ಷೆಗೆ ಹಾಜರಾಗುವ ದ್ವಿತೀಯ ಪಿಯುಸಿ ಹಾಗೂ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಸಲಾಗಿದೆ.
ಈ ಸಂಬಂಧ ನಿಗಮದ ಎಲ್ಲಾ ಚಾಲಕರು ಹಾಗೂ ನಿರ್ವಾಹಕರುಗಳಿಗೆ ದ್ವಿತೀಯ ಪಿಯುಸಿ ಹಾಗೂ ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಅವಧಿಯಲ್ಲಿ ನಿಯೋಜಿತ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಹಗೂ ವಾಸಸ್ಥಳಕ್ಕೆ ಮರಳಲು ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಪ್ರಯಾಣಿಸಲು ಅನುಮತಿಸಲು ಸೂಕ್ತ ತಿಳುವಳಿಕೆ ನೀಡಲು ಸೂಚಿಸಲಾಗಿದೆ ಎಂದು ಹೇಳಿದೆ.
ಮುಂದುವರೆದು ಪ್ರವೇಶ ಪತ್ರದ ಆಧಾರದ ಮೇಲೆ ಬಸ್ಸುಗಳ ಕಾರ್ಯಾಚರಣಾ ಮಾರ್ಗದಲ್ಲಿ ಪರೀಕ್ಷಾ ಕೇಂದ್ರಗಳಿದ್ದಲ್ಲಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸದರಿ ಮಾರ್ಗಗಳಲ್ಲಿ ಕೋರಿಕೆ ನಿಲುಗಡೆ ನೀಡಲು ಕ್ರಮಕೈಗೊಳ್ಳುವುದು.
ಚಾಲನಾ ಸಿಬ್ಬಂದಿಗಳು ಮೇಲ್ಕಂಡ ನಿರ್ದೇಶನಗಳನ್ನು ತಪ್ಪದೇ ಪಾಲಿಸುವಂತೆ ತಿಳಿಸುವುದು. ಈ ವಿಷಯವನ್ನು ಎಲ್ಲಾ ಘಟಕ ಮತ್ತು ಬಸ್ ನಿಲ್ದಾಣಗಳ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಿ ಮೇಲ್ದಂಡ ನಿರ್ದೇಶನಗಳನ್ನು ಜಾರಿಗೊಳಿಸಲು ಕ್ರಮವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದೆ.












Click it and Unblock the Notifications