ಸುಕನ್ಯಾ ಸಮೃದ್ಧಿ ಖಾತೆ ತೆರೆಯಲು ವಿಶೇಷ ಅಭಿಯಾನ
ಕಲಬುರಗಿ, ನವೆಂಬರ್ 03: ಕಲಬುರಗಿ ಜಿಲ್ಲೆಯಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಲು ವಿಶೇಷ ಅಭಿಯಾನವನ್ನು ಆಯೋಜನೆ ಮಾಡಲಾಗಿದೆ. ನವೆಂಬರ್ 1 ರಿಂದ 30ರ ತನಕ ಈ ಅಭಿಯಾನ ನಡೆಯಲಿದೆ.
"ಕಲಬುರಗಿ ಅಂಚೆ ವಿಭಾಗ ಸುಕನ್ಯಾ ಸಮೃದ್ಧಿ ಅಭಿಯಾನವನ್ನು ಹಮ್ಮಿಕೊಂಡಿದೆ. ಯೋಜನೆಯಡಿ 10 ವರ್ಷದೊಳಗಿನ ಹೆಣ್ಣು ಮಕ್ಕಳ ಪಾಲಕರು, ಪೋಷಕರು ಖಾತೆಯನ್ನು ತೆರೆಯಬಹುದಾಗಿದೆ" ಎಂದು ಕಲಬುರಗಿ ಅಂಚೆ ವಿಭಾಗದ ವರಿಷ್ಠ ಅಂಚೆ ಅಧೀಕ್ಷಕ ಬಿ. ಆರ್. ನನಜಗಿ ಹೇಳಿದ್ದಾರೆ.
ನವಜಾತ ಮಗುವಿನಿಂದ 10 ವರ್ಷದೊಳಗಿನ ಎಲ್ಲಾ ಹೆಣ್ಣು ಮಕ್ಕಳಿಗೆ ಈ ಯೋಜನೆ ಅನ್ವಯವಾಗಲಿದೆ. ಹೆಣ್ಣು ಮಕ್ಕಳ ಪಾಲಕರು ಆರಂಭಿಕ ಮೊತ್ತ 250 ರೂ. ಗಳಿಂದ ಖಾತೆ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದಾಗಿದೆ. ಈ ಖಾತೆಗೆ ಒಂದು ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂ. ಜಮೆ ಮಾಡಬಹುದಾಗಿದೆ.

ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯು ತೆರಿಗೆ ವಿನಾಯಿತಿಗೆ ಒಳಪಟ್ಟಿದೆ. ಈ ಖಾತೆಯ ಅವಧಿ 21 ವರ್ಷವಾಗಿರುತ್ತದೆ. ಹೆಣ್ಣು ಮಕ್ಕಳ ವಯಸ್ಸು 18 ದಾಟಿದ ಬಳಿಕ ಹಣವನ್ನು ಮರಳಿ ಪಡೆಯಬಹುದಾಗಿದೆ.
ಆಸಕ್ತ ಹೆಣ್ಣು ಮಕ್ಕಳ ಪಾಲಕರು, ಪೋಷಕರು ಸುಕನ್ಯಾ ಸಮೃದ್ಧಿ ಖಾತೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ 08472-263800ಗೂ ಕರೆ ಮಾಡಿ ಮಾಹಿತಿ ಪಡೆಯಬಹುದು.












Click it and Unblock the Notifications