ಮತ್ತೆ ಕೇಳಿ ಬರುತ್ತಿದೆ ಕಲಬುರಗಿ ರೈಲ್ವೆ ವಿಭಾಗೀಯ ಕಛೇರಿ ಕೂಗು
ಕಲಬುರಗಿ, ಜುಲೈ 15: ಕಲಬುರಗಿ ರೈಲ್ವೆ ವಿಭಾಗದ ಕೂಗು ಮತ್ತೆ ಎದ್ದಿದೆ. ಬಹಳ ವರ್ಷಗಳಿಂದ ಕಲಬುರಗಿ ರೈಲ್ವೆ ವಿಭಾಗ ಕಛೇರಿ ಸ್ಥಾಪನೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ.
ಕೆಲವು ದಿನಗಳ ಹಿಂದೆ ಕಲಬುರಗಿ ಸಂಸದ, ಕಾಂಗ್ರೆಸ್ ನಾಯಕ ರಾಧಾಕೃಷ್ಣ ದೊಡ್ಡಮನಿ ನವ ದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾಗಿ ಈ ಕುರಿತು ಮನವಿಯನ್ನು ಸಲ್ಲಿಕೆ ಮಾಡಿದ್ದಾರೆ.

2014-15ನೇ ಸಾಲಿನಲ್ಲಿ ಕಲಬುರಗಿ ರೈಲ್ವೆ ವಿಭಾಗ ಮಂಜೂರಾಗಿತ್ತು. 5 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿತ್ತು. ಆದರೆ ಇದುವರೆಗೂ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಗಮನ ಹರಿಸಬೇಕು, ಕಲಬುರಗಿ ಲೋಕಸಭಾ ಕ್ಷೇತ್ರದ ರೈಲು ಯೋಜನೆಗಳಿಗೂ ಅನುದಾನ ನೀಡಬೇಕು ಎಂದು ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಜಮೀನು ನೀಡಿದೆ: ಕಲಬುರಗಿ ರೈಲ್ವೆ ವಿಭಾಗದ ಕಛೇರಿಗಾಗಿ ಕರ್ನಾಟಕ ಸರ್ಕಾರ ಉಚಿತವಗಿ ಭೂಮಿ ನೀಡಿದೆ. ಆದ್ದರಿಂದ ವಿಭಾಗ ಕಛೇರಿ ಸ್ಥಾಪನೆಗೆ ಕೂಡಲೇ ರೈಲು ಪ್ರಾಧಿಕಾರ ಅಥವ ಸಂಬಂಧಿಸಿದ ಪ್ರಾಧಿಕಾರ ಒಪ್ಪಿಗೆ ನೀಡಿ, ಕಾಮಗಾರಿ ಪೂರ್ಣಗೊಳಿಸಬೇಕು ಎಂದು ರೈಲ್ವೆ ಸಚಿವರಿಗೆ ಸಲ್ಲಿಕೆ ಮಾಡಿರುವ ಮನವಿಯಲ್ಲಿ ತಿಳಿಸಲಾಗಿದೆ.
ಈ ವರ್ಷದ ಜನವರಿಯಲ್ಲಿ ಕಲಬುರಗಿ ರೈಲ್ವೆ ವಿಭಾಗದ ಕಛೇರಿ ಆರಂಭಿಸಬೇಕು ಎಂದು ಆಗ್ರಹಿಸಿ ಕಲಬುರಗಿಯಲ್ಲಿ ಸಾಂಕೇತಿಕ ಧರಣಿಯನ್ನು ನಡೆಸಲಾಗಿತ್ತು. ಕೇಂಧ್ರ ಮತ್ತು ರಾಜ್ಯ ಸರ್ಕಾರಗಳು ಕಲ್ಯಾಣ ಕರ್ನಾಟಕ ಭಾಗದ ರೈಲು ಯೋಜನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿವೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಇದ್ದಾಗ ಕಲಬುರಗಿ ರೈಲ್ವೆ ವಿಭಾಗದ ಸ್ಥಾಪನೆ ತೀರ್ಮಾನವನ್ನು ಕೊನೆ ಕ್ಷಣದಲ್ಲಿ ಕೈ ಬಿಡಲಾಗಿತ್ತು. ಬಳಿಕ 2014ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದಾಗ ವಿಭಾಗ ಮಂಜೂರು ಮಾಡಿದರು. ರೈಲ್ವೆ ಮಂಡಳಿ ಅನುಮೋದನೆ ದೊರೆಯಿತು. ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ.
ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳು ಒಟ್ಟು 5 ರೈಲ್ವೆ ವಿಭಾಗ ಹಾಗೂ 3 ವಲಯಗಳಾಗಿ ವಿಭಜನೆಗೊಂಡಿವೆ. ಕಲಬುರಗಿ ವಿಭಾಗವನ್ನು ಹುಬ್ಬಳ್ಳಿಯಲ್ಲಿ ಪ್ರಧಾನ ಕಛೇರಿ ಹೊಂದಿರುವ ನೈಋತ್ಯ ರೈಲ್ವೆ ವಿಭಾಗದ ಅಡಿ ತರಬೇಕು. ವಿಭಾಗೀಯ ಕಛೇರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಕಲಬುರಗಿ ರೈಲ್ವೆ ವಿಭಾಗ ಘೋಷಣೆ ಮಾಡಿದ ಬಳಿಕ 2014ರ ಮಾರ್ಚ್ ತಿಂಗಳಿನಲ್ಲಿ ಅಗತ್ಯ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ರೈಲ್ವೆ ಇಲಾಖೆಗೆ ಭೂಮಿ ವರ್ಗಾವಣೆ ಮಾಡಲಾಗಿತ್ತು. ಈ ಎಲ್ಲಾ ಕೆಲಸಗಳ ಮೇಲುಸ್ತುವಾರಿಗಾಗಿ ಓರ್ವ ವಿಶೇಷ ಅಧಿಕಾರಿಯನ್ನು ನೇಮಿಸಲಾಗಿತ್ತು. ಈ ಅಧಿಕಾರಿ ಕಲಬುರಗಿ ರೈಲು ವಿಭಾಗವವನ್ನು ನೈಋತ್ಯ ರೈಲ್ವೆ ವಿಭಾಗಕ್ಕೆ ಸೇರಿಸಬಹುದು ಎಂದು ಶಿಫಾರಸು ಮಾಡಿದ್ದರು.
ಏಪ್ರಿಲ್ 10, 2014ರಂದು ರೈಲ್ವೆ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿತ್ತು. ರೈಲ್ವೆ ಮಂಡಳಿ ವರದಿಯ ಅಂಶಗಳನ್ನು ಒಪ್ಪಿ, ರೈಲ್ವೆ ವ್ಯಾಪ್ತಿಯ ಕುರಿತು ಅಂಗೀಕಾರ ನೀಡಿತ್ತು. ಮಾರ್ಚ್ 4, 2016ರಲ್ಲಿ ಕಲಬುರಗಿ ರೈಲ್ವೆ ವಿಭಾಗ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಸಚಿವಾಲಯ ಒಪ್ಪಿಕೊಂಡಿತ್ತು.












Click it and Unblock the Notifications