ಕಲಬುರಗಿ ಟೆಕ್ಸ್‌ಟೈಲ್ ಪಾರ್ಕ್; ಜಮೀನು ಹಸ್ತಾಂತರಕ್ಕೆ ಸೂಚನೆ
ಕಲಬುರಗಿ, ಆಗಸ್ಟ್ 21: ಕಲಬುರಗಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗೆ ಆರಂಭಿಕವಾಗಿ 1,000 ಎಕರೆ ಜಮೀನು ಜವಳಿ ಇಲಾಖೆಗೆ ಒಂದು ತಿಂಗಳೊಳಗೆ ಹಸ್ತಾಂತರಿಸಬೇಕು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಚಿವರು ಭಾನುವಾರ ಕಲಬುರಗಿ ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜವಳಿ ಅಭಿವೃದ್ಧಿ ಆಯುಕ್ತರು ಮತ್ತು ಕೈಮಗ್ಗ ಮತ್ತು ಜವಳಿ ಇಲಾಖೆಯ ನಿರ್ದೇಶಕ ಟಿ. ಎಚ್. ಎಮ್. ಕುಮಾರ್ ಉದ್ದೇಶಿತ ಪಾರ್ಕ್ ಕುರಿತು ಯೋಜನೆ ನಕಾಶೆಯೊಂದಿಗೆ ಸಚಿವರಿಗೆ ವಿವರಣೆ ನೀಡಿದರು.

ಕಲಬುರಗಿ ಜಿಲ್ಲೆಯ ಜೇವರ್ಗಿ ರಸ್ತೆಯ ಫಿರೋಜಾಬಾದ ಬಳಿ ಕೇಂದ್ರ ಸರ್ಕಾರದ ಪಿ.ಎಂ.ಮಿತ್ರ ಯೋಜನೆಯಡಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಆರಂಭಿಸಲಾಗುತ್ತಿದೆ. 1,000 ಎಕರೆ ಜಮೀನು ಜವಳಿ ಇಲಾಖೆಗೆ ಒಂದು ತಿಂಗಳೊಳಗೆ ಹಸ್ತಾಂತರಿಸಿ ಆರ್‌ಟಿಸಿಯಲ್ಲಿ ಹೆಸರು ಸೇರಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.
10 ಸಾವಿರ ಕೋಟಿ ರೂ. ಹೂಡಿಕೆ; ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗೆ ಸುಮಾರು 10 ಸಾವಿರ ಕೋಟಿ ರೂ. ಹೂಡಿಕೆಯ ಯೋಜನೆಯಾಗಿದೆ. ಯೋಜನೆ ಅನುಷ್ಠಾನಕ್ಕಾಗಿ ಜಮೀನಿನ ಗಡಿ ರೇಖೆ ಗುರತಿಸುವ ಕೆಲಸ ಬೇಗ ಮುಗಿಸಬೇಕಿದೆ. ಇದರ ಜೊತೆಗೆ ಫೆನ್ಸಿಂಗ್ ಅಥವಾ ತಡೆಗೋಡೆ ನಿರ್ಮಿಸುವ ಮೂಲಕ ಜಮೀನು ಅತಿಕ್ರಮಣವಾಗದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.
ಕಲಬುರಗಿಯಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗೆ ಆರಂಭಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಕೇಂದ್ರ ಸರ್ಕಾರ ಕರ್ನಾಟಕದ ಕಲಬುರಗಿ ಸೇರಿದಂತೆ 7 ರಾಜ್ಯಗಳಿಗೆ ಪ್ರಧಾನಮಂತ್ರಿ ಮಿತ್ರ ಮೆಗಾ ಜವಳಿ ಪಾರ್ಕ್‌ಗಳನ್ನು 2023ರ ಮಾರ್ಚ್‌ನಲ್ಲಿ ಘೋಷಣೆ ಮಾಡಿತ್ತು. ಯೋಜನೆ ಇನ್ನೂ ಅನುಷ್ಠಾನಗೊಳ್ಳಬೇಕಿದೆ.
ಪ್ರಧಾನಿ ನರೇಂದ್ರ ಮೋದಿ ಜವಳಿ ಉದ್ಯಮಕ್ಕಾಗಿ 7 ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ಪ್ರದೇಶಗಳು ಮತ್ತು ಅಪಾರಲ್ (PM MITRA) ಪಾರ್ಕ್‌ಗಳನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದರು. ಯೋಜನೆ ಅನ್ವಯ ತಮಿಳುನಾಡು, ತೆಲಂಗಾಣ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ.
ಮೆಗಾ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣಕ್ಕಾಗಿ 13 ರಾಜ್ಯಗಳಿಂದ ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ ಕರ್ನಾಟಕದ ಕಲಬುರಗಿ ಸೇರಿದಂತೆ 7 ಪ್ರದೇಶಗಳನ್ನು ಆಯ್ಕೆ ಮಾಡಲಾಗಿತ್ತು. ಸಂಪರ್ಕ, ಅಸ್ತಿತ್ವದಲ್ಲಿರುವ ಪರಿಸರ ವ್ಯವಸ್ಥೆ, ಜವಳಿ/ ಉದ್ಯಮ ನೀತಿ, ಮೂಲಸೌಕರ್ಯ, ಉಪಯುಕ್ತ ಸೇವೆಗಳು ಇತ್ಯಾದಿ ಅಂಶಗಳ ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಿ ಪದೇಶ ಆಯ್ಕೆ ಮಾಡಲಾಗಿದೆ.
ಕಲಬುರಗಿಯಲ್ಲಿ ಸ್ಥಾಪನೆಯಾಗಲಿರುವ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ನಿಂದಾಗಿ ಸುಮಾರು 1 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಈ ಪಾರ್ಕ್‌ಗಳು ವಿಶ್ವದರ್ಜೆಯ ಕೈಗಾರಿಕಾ ಮೂಲಸೌಕರ್ಯವನ್ನು ರಚಿಸಲು ಸಹಾಯ ಮಾಡುತ್ತದೆ, ವಿದೇಶಿ ನೇರ ಹೂಡಿಕೆ ಸೇರಿದಂತೆ ದೊಡ್ಡ ಪ್ರಮಾಣದ ಹೂಡಿಕೆಯನ್ನು ಆಕರ್ಷಿಸುತ್ತದೆ.
ಕೇಂದ್ರ ಜವಳಿ ಸಚಿವಾಲಯ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಯೋಜನೆಗಳ ಮೇಲ್ವಿಚಾರಣೆ ಮಾಡುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತವೆ. ಸಚಿವಾಲಯವು ಅಭಿವೃದ್ಧಿ ಬಂಡವಾಳ ಬೆಂಬಲದ ರೂಪದಲ್ಲಿ ಹಣಕಾಸಿನ ನೆರವು ನೀಡುತ್ತದೆ.
ರಾಜ್ಯ ಸರ್ಕಾರಗಳು ಕನಿಷ್ಠ 1000 ಎಕರೆ ಭೂಮಿಯನ್ನು ಈ ಯೋಜನೆಗಾಗಿ ನೀಡುತ್ತವೆ. ಜೊತೆಗೆ ವಿಶ್ವಾಸಾರ್ಹ ವಿದ್ಯುತ್ ಸರಬರಾಜು ಮತ್ತು ನೀರಿನ ಲಭ್ಯತೆ ಮತ್ತು ತ್ಯಾಜ್ಯ ನೀರು ವಿಲೇವಾರಿ ವ್ಯವಸ್ಥೆ, ಸ್ಥಿರ ಕೈಗಾರಿಕಾ/ ಜವಳಿ ನೀತಿಯನ್ನು ರೂಪಿಸುತ್ತವೆ.
ಈ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೂಡಿಕೆಯನ್ನು ಹೆಚ್ಚಿಸಲು, ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಪ್ರಯತ್ನ ನಡೆಸುತ್ತವೆ. ಭಾರತವನ್ನು ಜವಳಿ ಉತ್ಪಾದನೆ ಮತ್ತು ರಫ್ತಿಗೆ ಜಾಗತಿಕ ಕೇಂದ್ರವನ್ನಾಗಿ ಮಾಡುವುದು ಯೋಜನೆಯ ಗುರಿಯಾಗಿದೆ. ಒಟ್ಟು 7 ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಯೋಜನೆಯ ಮೂಲಕ ಸುಮಾರು 70,000 ಕೋಟಿ ಹೂಡಿಕೆ ಮತ್ತು 20 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ ಮಾಡಲಾಗಿದೆ.












Click it and Unblock the Notifications