ಕಲಬುರಗಿ ವಿಮಾನ ನಿಲ್ದಾಣ ಎಎಐಗೆ ಹಸ್ತಾಂತರ, ಶೀಘ್ರದಲ್ಲೇ ಸಂಚಾರ
ಕಲಬುರಗಿ, ಸೆಪ್ಟೆಂಬರ್ 15 : ಕಲಬುರಗಿ ವಿಮಾನ ನಿಲ್ದಾಣ ಮತ್ತು ವಿಮಾನ ನಿಲ್ದಾಣಕ್ಕೆ ಸೇರಿದ 742.23 ಎಕರೆ ಪ್ರದೇಶವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಲಾಗಿದೆ. ಶೀಘ್ರದಲ್ಲಿಯೇ ವಿಮಾನ ಹಾರಾಟ ಆರಂಭಗೊಳ್ಳುವ ನಿರೀಕ್ಷೆ ಇದೆ.
ಕರ್ನಾಟಕ ಸರ್ಕಾರವೇ ಸಂಪೂರ್ಣವಾಗಿ 175.57 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಿದೆ. ವಿಮಾನ ನಿಲ್ದಾಣದಿಂದ ವಾಣಿಜ್ಯ ಹಾರಾಟ ಪ್ರಾರಂಭಿಸಲು ಅನುಕೂಲವಾಗುವಂತೆ ಹಸ್ತಾಂತರ ಮಾಡಲಾಗಿದೆ.
ವಿಮಾನ ನಿಲ್ದಾಣಕ್ಕೆ ಸೇರಿದ ಒಟ್ಟು 742.23 ಎಕರೆ ಪ್ರದೇಶವನ್ನು ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್ ವಿಮಾನ ನಿಲ್ದಾಣ ಪ್ರಾಧಿಕಾರದ ಕಲಬುರಗಿಯ ನಿರ್ದೇಶಕ ಎಸ್. ಜ್ಞಾನೇಶ್ವರ ರಾವ್ ಮತ್ತು ಜಂಟಿ ಜನರಲ್ ಮ್ಯಾನೇಜರ್ ಎಂ. ಯಾದಯ್ಯಗೆ ಅಧಿಕೃತವಾಗಿ ಹಸ್ತಾಂತರಿಸಿದರು.

ಕಲಬುರಗಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಕೆಐಎಡಿಬಿ ಧಾರವಾಡ 567.10 ಎಕರೆ, ಸಹಾಯಕ ಆಯುಕ್ತರು ಕಲಬುರಗಿ ಇವರು 127.30 ಎಕರೆ ಹಾಗೂ ತಹಶೀಲ್ದಾರರು ಕಲಬುರಗಿ ಇವರು 48.23 ಎಕರೆ ಸೇರಿದಂತೆ ಒಟ್ಟಾರೆ 742.23 ಎಕರೆ ಪ್ರದೇಶವನ್ನು ಭೂಸ್ವಾಧೀನ ಮಾಡಿಕೊಂಡಿದ್ದರು.
ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ನಡುವೆ ಒಪ್ಪಂದ ನಡೆದಿದೆ. ಪರಸ್ಪರ ಒಪ್ಪಂದದಂತೆ ವಿಮಾನ ನಿಲ್ದಾಣದ ಅಷ್ಟು ಪ್ರದೇಶದ ಭೌತಿಕ ಹಂಚಿಕೆ ಪ್ರಕ್ರಿಯೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಬಿ.ಶರತ್ ಮಾಧ್ಯಮಗಳ ಜೊತೆ ಮಾತನಾಡಿ, "ಭೂಮಿ ಹಸ್ತಾಂತರ ಪ್ರಕ್ರಿಯೆ ಮುಗಿದಿರುವುದರಿಂದ ವಾಣಿಜ್ಯ ಹಾರಾಟ ಪ್ರಾರಂಭಕ್ಕೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಜಿಲ್ಲಾಡಳಿತ ಇದಕ್ಕೆ ಸಹಕಾರ ನೀಡಲಿದೆ" ಎಂದು ಹೇಳಿದರು.












Click it and Unblock the Notifications