Jayadeva Hospital: ಭಾನುವಾರ ಉದ್ಘಾಟನೆಗೊಳ್ಳುವ ಕಲಬುರಗಿ ಜಯದೇವ ಆಸ್ಪತ್ರೆ ವಿಶೇಷತೆಗಳು
ಕಲಬುರಗಿ, ಡಿಸೆಂಬರ್ 21: ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಿಹಿಸುದ್ದಿ. ಇನ್ನು ಮುಂದೆ ಹೃದ್ರೋಗ ಚಿಕಿತ್ಸೆಗಾಗಿ ಬೆಂಗಳೂರು ನಗರ ಅಥವ ಹೈದರಾಬಾದ್‌ಗೆ ತೆರಳಬೇಕಾದ ಅಗತ್ಯವಿಲ್ಲ. ಕಲಬುರಗಿಯಲ್ಲಿಯೇ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸುಸಜ್ಜಿತ ಆಸ್ಪತ್ರೆ ನಿರ್ಮಾಣಗೊಂಡಿದೆ. ಡಿಸೆಂಬರ್ 22ರ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಸುಮಾರು 262 ಕೋಟಿ ರೂ. ವೆಚ್ಚದಲ್ಲಿ ಈ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ.
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಕಲಬುರಗಿ ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಭಾನುವಾರ ನಡೆಯುವ ಉದ್ಘಾಟನಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಹಕಾರದೊಂದಿಗೆ ಕಲಬುರಗಿ ನಗರದಲ್ಲಿ ಸುಮಾರು 262 ಕೋಟಿ ರೂ. ವೆಚ್ಚದಲ್ಲಿ 371 ಹಾಸಿಗೆಗಳ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನೂತನ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ. ಇಷ್ಟು ದಿನ ಜಯದೇವ ಆಸ್ಪತ್ರೆ ಘಟಕ ಕಲಬುರಗಿಯಲ್ಲಿತ್ತು. ಆದರೆ ಈಗ ಸ್ವಂತ ಕಟ್ಟಡ ನಿರ್ಮಾಣ ಮಾಡಿ ಆಸ್ಪತ್ರೆಯನ್ನು ಅಲ್ಲಿಗೆ ಸ್ಥಳಾಂತರ ಮಾಡಲಾಗುತ್ತಿದೆ.
ಆಸ್ಪತ್ರೆ ವಿಶೇಷತೆಗಳು: ಡಾ. ಸಿ. ಎನ್. ಮಂಜುನಾಥ್ ಅವರು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದಾಗ ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ವಿವಿಧ ಕಾರಣಕ್ಕೆ ಕಾಮಗಾರಿ ವಿಳಂಬವಾಗಿದ್ದು, ಈಗ ಡಿಸೆಂಬರ್ 22ಕ್ಕೆ ಲೋಕಾರ್ಪಣೆಗೆ ಸಿದ್ಧಗೊಂಡಿದೆ.
ಜಯದೇವ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದ ಹಿನ್ನಲೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಂ, ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್. ಡಿ. ಇತರ ಅಧಿಕಾರಿಗಳ ಜೊತೆ ಕಾರ್ಯಕ್ರಮದ ಬಂದೋಬಸ್ತ್ ಕುರಿತು ಪರಿಶೀಲನೆಯನ್ನು ನಡೆಸಿದರು.
ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಹೃದಯ ಸಂಬಂಧಿ ಕಾಯಿಲೆಗೆ ಸುಮಾರು 7-8 ವರ್ಷಗಳಿಂದ ಉತ್ತಮವಾದ ಚಿಕಿತ್ಸೆ ನೀಡುತ್ತಿರುವ ಜಯದೇವ ಸಂಸ್ಥೆಯ ಕಲಬುರಗಿ ಶಾಖೆಯ ನೂತನ ಕಟ್ಟಡದ ಲೋಕಾರ್ಪಣೆ ಭಾನುವಾರ ನಡೆಯಲಿದೆ. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿವಿಧ ಸಚಿವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ 371 (ಜೆ) ಅಡಿ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. ಆದ್ದರಿಂದ ಈ ಭಾಗದ ಪ್ರಮುಖ ನಗರವಾದ ಕಲಬುರಗಿಯಲ್ಲಿ ನಿರ್ಮಾಣಗೊಂಡಿರುವ ಜಯದೇವ ಆಸ್ಪತ್ರೆಯಲ್ಲಿ 371 ಹಾಸಿಗೆಗಳ ಸೌಲಭ್ಯವನ್ನು ನೀಡಲಾಗಿದೆ.
2024ರ ಆಗಸ್ಟ್‌ನಲ್ಲಿ ಈ ಆಸ್ಪತ್ರೆಯಲ್ಲಿ ಉದ್ಘಾಟನೆಗೊಳಿಸುವ ಗುರಿ ಹೊಂದಲಾಗಿತ್ತು. ಕಲಬುರಗಿ ನಗರದ ಹೃದಯ ಭಾಗದಲ್ಲಿ ಸುಮಾರು 6.8 ಎಕರೆ ಪ್ರದೇಶದಲ್ಲಿ ನೂತನ ಆಸ್ಪತ್ರೆಯ ಸುಸಜ್ಜಿತ ಕಟ್ಟಡವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದ ಸಹಕಾರದಲ್ಲಿ ನಿರ್ಮಾಣ ಮಾಡಲಾಗಿದೆ.
ಕಲಬುರಗಿಯಲ್ಲಿದ್ದ ಜಯದೇವ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿತ್ತು. ಆದ್ದರಿಂದ ಸ್ಥಳಾವಕಾಶದ ಸಮಸ್ಯೆ ಎದುರಾಗಿತ್ತು. ಆದ್ದರಿಂದ ನಗರದ ಹೃದಯ ಭಾಗದಲ್ಲಿರುವ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಆತ್ಯಾಧುನಿಕ ಸೌಲಭ್ಯಗಳು ಇಲ್ಲಿದ್ದು, ಜನರು ಹೃದಯ ಸಮಸ್ಯೆಯ ಚಿಕಿತ್ಸೆಗೆ ಬೆಂಗಳೂರು ಅಥವ ಹೈದರಾಬಾದ್‌ಗೆ ತೆರಳುವ ಅಗತ್ಯವಿಲ್ಲ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಸುಮಾರು 150 ಕೋಟಿ ರೂ. ಅನುದಾನವು ಸೇರಿ ಒಟ್ಟು 262 ಕೋಟಿ ರೂ. ವೆಚ್ಚದಲ್ಲಿ ಹೊಸ ಆಸ್ಪತ್ರೆಯ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಈ ಕಟ್ಟಡ ಉದ್ಘಾಟನೆ ನಂತರ ಸದ್ಯ ಇರುವ ಆಸ್ಪತ್ರೆಯನ್ನು ಅಲ್ಲಿಗೆ ಸ್ಥಳಾಂತರಿಸಲಾಗುತ್ತದೆ.
ಕರ್ನಾಟಕ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಈ ಹೊಸ ಆಸ್ಪತ್ರೆಗೆ ಬೇಕಾಗುವ ಉಪಕರಣಗಳ ಖರೀದಿ, ಸಿಬ್ಬಂದಿಗಳ ನೇಮಕಾತಿಗೆ ಸಹ ಈಗಾಗಲೇ ಒಪ್ಪಿಗೆ ನೀಡಿದೆ. ಅತ್ಯಾಧುನಿಕ ಸೌಲಭ್ಯಗಳ ಜೊತೆ ಕಲಬುರಗಿಯ ಜಯದೇವ ಆಸ್ಪತ್ರೆ ಜನರ ಸೇವೆಗೆ ಸಿದ್ಧವಾಗಿದೆ.
ಈ ಆಸ್ಪತ್ರೆಯಲ್ಲಿ 121 ಐಸಿಯು ಹಾಸಿಗೆಗಳು, 200 ಸಾಮಾನ್ಯ ವಾರ್ಡ್ ಹಾಸಿಗೆಗಳು ಮತ್ತು 50 ವಿಶೇಷ ವಾರ್ಡ್‌ಗಳಿವೆ. ಈ ಆಸ್ಪತ್ರೆ ಮೂರು ಆಪರೇಷನ್ ಥಿಯೇಟರ್, ಮೂರು ಕಾರ್ಡಿಯಾಕ್ ಕ್ಯಾಥ್ ಲ್ಯಾಬ್ ಜೊತೆಗೆ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನ್ ಘಟಕಗಳನ್ನು ಹೊಂದಿದೆ.
ಕಲ್ಯಾಣ-ಕರ್ನಾಟಕ ಪ್ರದೇಶದ ವ್ಯಾಪ್ತಿಯ ಜಿಲ್ಲೆಗಳ ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳು ಉಚಿತವಾಗಿ ಹೃದಯ ಶಸ್ತ್ರಚಿಕಿತ್ಸೆಯನ್ನು ಪಡೆಯಬಹುದು. ಸದ್ಯ ಕಲಬುರಗಿಯಲ್ಲಿರುವ ಜಯದೇವ ಆಸ್ಪತ್ರೆ 150 ಹಾಸಿಗೆಗಳನ್ನು ಒಳಗೊಂಡಿತ್ತು.












Click it and Unblock the Notifications