ಕಲಬುರಗಿ ದೆಹಲಿ ನಡುವೆ ವಿಮಾನ ಯಾನ ಆರಂಭ
ಕಲಬುರಗಿ, ನವೆಂಬರ್ 18: ಕಲಬುರಗಿ-ದೆಹಲಿ ವಿಮಾನ ಯಾನ ಬುಧವಾರದಿಂದ ಆರಂಭಗೊಂಡಿದ್ದು, ಸಂಸದ ಡಾ.ಉಮೇಶ ಜಾಧವ್ ವಿಮಾನ ಸಂಚಾರಕ್ಕೆ ಚಾಲನೆ ನೀಡಿದರು.
ವಾರದಲ್ಲಿ ಮೂರು ದಿನ ಕಲಬುರಗಿ- ದೆಹಲಿ (ಹಿಂಡನ್) ವಿಮಾನ ಸಂಚಾರವನ್ನು ಸ್ಟಾರ್ ಏರ್ ವಿಮಾನ ಯಾನ ಸಂಸ್ಥೆ ಆರಂಭಿಸಿದೆ. ಪ್ರತಿ ಮಂಗಳವಾರ, ಬುಧವಾರ ಹಾಗೂ ಶನಿವಾರ, ಈ ಮೂರು ದಿನ ಬೆಳಿಗ್ಗೆ 10.20ಕ್ಕೆ ಕಲಬುರಗಿ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನ 12.40ಕ್ಕೆ ದೆಹಲಿ ತಲುಪಲಿದೆ. ವಾರದ ಅದೇ ಮೂರು ದಿನ ದೆಹಲಿಯಿಂದ ಮಧ್ಯಾಹ್ನ 1.10ಕ್ಕೆ ಹೊರಡುವ ವಿಮಾನ, 3.30ಕ್ಕೆ ಕಲಬುರಗಿ ವಿಮಾನ ನಿಲ್ದಾಣ ತಲುಪಲಿದೆ. ನಾನ್ ಸ್ಟಾಪ್ ವಿಮಾನ ಇದಾಗಿದ್ದು, ಕೇವಲ 2 ಗಂಟೆ 20 ನಿಮಿಷದಲ್ಲಿ ಕಲಬುರಗಿಯಿಂದ ದೆಹಲಿ ತಲುಪಬಹುದಾಗಿದೆ.
ವಿಮಾನ ಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಉಮೇಶ ಜಾಧವ್, "ಉದ್ಘಾಟನೆಯಾದ ಒಂದು ವರ್ಷದಲ್ಲೇ ಕಲಬುರಗಿ ವಿಮಾನ ನಿಲ್ದಾಣ ದೇಶದಲ್ಲೇ ಅತ್ಯಂತ ಹೆಚ್ಚು ಸಕ್ರಿಯ ನಿಲ್ದಾಣ ಎಂದು ಕರೆಸಿಕೊಂಡಿದೆ. ಇಲ್ಲಿಂದ ಬೆಂಗಳೂರು, ದೆಹಲಿಗೆ ವಿಮಾನ ಸಂಚಾರ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹುಬ್ಬಳ್ಳಿ-ಕಲಬುರಗಿ-ಹೈದರಾಬಾದ್, ಮುಂಬೈ, ತಿರುಪತಿಗೂ ಸಂಚಾರ ಆರಂಭಿಸಲಾಗುವುದು" ಎಂದು ಮಾಹಿತಿ ನೀಡಿದರು.

ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ವಿಮಾನ ನಿಲ್ದಾಣ ನಿರ್ದೇಶಕ ಎಸ್. ಜ್ಞಾನೇಶ್ವರರಾವ್, ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮಹಾನಗರ ಅಧ್ಯಕ್ಷ ಸಿದ್ದಾಜಿ ಪಾಟೀಲ ಉಪಸ್ಥಿತರಿದ್ದರು.











Click it and Unblock the Notifications