ಜುಲೈ ಅಥವ ಆಗಸ್ಟ್‌ನಲ್ಲಿ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ
ಕಲಬುರಗಿ, ಜೂನ್ 24; ಕರ್ನಾಟಕ ಸರ್ಕಾರ ಕಲಬುರಗಿ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ನಡೆಸಲು ಚಿಂತನೆ ನಡೆಸಿದೆ. ಕಲ್ಯಾಣ ಕರ್ನಾಟಕ ಭಾಗದ ವಿಷಯಗಳ ಕುರಿತು ಚರ್ಚಿಸಲು ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ.
ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಈ ಕುರಿತು ಮಾತನಾಡಿದ್ದಾರೆ. "ಕಲಬುರಗಿ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಕಲ್ಯಾಣ ಕರ್ನಾಟಕದ ವಿಷಯಗಳ ಕುರಿತು ಚರ್ಚಿಸಲು ಜುಲೈ ಕೊನೆವಾರ ಅಥವಾ ಆಗಸ್ಟ್ ತಿಂಗಳಲ್ಲಿ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಉದ್ದೇಶಿಸಲಾಗಿದೆ" ಎಂದು ಹೇಳಿದ್ದಾರೆ.
"ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸುವಂತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಮನವಿ ಮಾಡಲಾಗುತ್ತದೆ. ಜಿಲ್ಲೆಯ ಕುಡಿಯುವ ನೀರಿನ ವಿವಿಧ ಹಂತದ ಯೋಜನೆಗಳು, ನೀರಾವರಿ ಯೋಜನೆಗಳು, ರಸ್ತೆ ಮುಂತಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು" ಎಂದರು.

"ಅಭಿವೃದ್ಧಿ ಯೋಜನೆಗಳಿಗೆ ಶೇ 100 ರಷ್ಟು ಸಂಪುಟ ಸಭೆಯಲ್ಲೇ ಪರಿಹಾರ ನೀಡಲು ಪ್ರಯತ್ನಿಸಲಾಗುವುದು. ವಿವಿಧ ಇಲಾಖೆಗಳ ಇಂತಹ ಯೋಜನೆಗಳ ಡಿಪಿಆರ್ ಸಿದ್ಧಪಡಿಸಿಟ್ಟುಕೊಳ್ಳಬೇಕು" ಎಂದು ಸಚಿವರು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
8 ವರ್ಷದಿಂದ ಸಭೆ ನಡೆದಿಲ್ಲ; ಈ ಹಿಂದೆಯೂ ಹಲವು ಬಾರಿ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆಯನ್ನು ಮಾಡಲಾಗಿದೆ. 2008 ರಿಂದ 2013ರ ತನಕ 5 ಬಾರಿ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿತ್ತು.
2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಒಮ್ಮೆ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆಯನ್ನು ಮಾಡಿದ್ದರು. ಕಳೆದ 8 ವರ್ಷಗಳಿಂದ ಕಲಬುರಗಿಯಲ್ಲಿ ಸಂಪುಟ ಸಭೆ ನಡೆದಿಲ್ಲ.
2014ರ ನವೆಂಬರ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಸತಿ ಸಚಿವರಾಗಿದ್ದ ಅಂಬರೀಶ್ ಹೊರತುಪಡಿಸಿ ಉಳಿದ ಎಲ್ಲಾ ಸಚಿವರು ಪಾಲ್ಗೊಂಡಿದ್ದರು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈದರಾಬಾದ್-ಕರ್ನಾಟಕದ ಅಭಿವೃದ್ಧಿಗೆ 1 ಸಾವಿರ ಕೋಟಿ ರೂ.ಗಳ ಅನುದಾನವನ್ನು ಘೋಷಣೆ ಮಾಡಿದ್ದರು.












Click it and Unblock the Notifications