ಕಲಬುರಗಿಗೆ ಕೊರೊನಾ ವೈರಸ್ ಕಾಟ; ಮತ್ತೊಬ್ಬರಲ್ಲಿ ಮಾರಕ ಸೋಂಕು!
ಕಲಬುರಗಿ, ಮಾರ್ಚ್.15: ಜಾಗತಿಕ ಮಟ್ಟದಲ್ಲಿ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ಗೆ ರಾಜ್ಯದಲ್ಲಿ ಮೊದಲ ವ್ಯಕ್ತಿ ಬಲಿಯಾಗಿದ್ದು, ದೇಶಾದ್ಯಂತ ಸುದ್ದಿಯಾಗಿತ್ತು. ಅದೇ ಕಲಬುರಗಿ ನೆಲದಲ್ಲಿ 45 ವರ್ಷದ ಮಹಿಳೆಗೆ ಸೋಂಕು ಇರಿವುದು ದೃಢಪಟ್ಟಿದೆ.
ಸೌದಿ ಅರೇಬಿಯಾದ ಮೆಕ್ಕಾ ಯಾತ್ರೆ ಮುಗಿಸಿಕೊಂಡು ಬಂದ ವ್ಯಕ್ತಿ ಕೊರೊನಾ ವೈರಸ್ ನಿಂದ ಮೃತಪಟ್ಟು ಇನ್ನು ನಾಲ್ಕು ದಿನ ಕಳೆದಿಲ್ಲ. ಅದಾಗಲೇ ಮೃತರ ಸಂಬಂಧಿಕರೊಬ್ಬರಿಗೆ ಕೊರೊನಾ ವೈರಸ್ ಸೋಂಕು ಇರgವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ.
ಕಲಬುರಗಿಯಲ್ಲಿ ಮೃತ ಮಹ್ಮದ್ ಹುಸೇನ್ ಸಿದ್ದಿಕಿಯ ನಾಲ್ವರು ಸಂಬಂಧಿಕರ ಪೈಕಿ ಮೂವರ ವೈದ್ಯಕೀಯ ತಪಾಸಣಾ ವರದಿಯು ಶನಿವಾರ ಬಂದಿದ್ದು, ಯಾರಿಗೂ ಸೋಂಕು ತಗಲಿಲ್ಲ ಎಂದು ತಿಳಿದು ಬಂದಿತ್ತು. ಇದರ ಬೆನ್ನಲ್ಲೇ ಭಾನುವಾರ ಮತ್ತೊಬ್ಬರ ವೈದ್ಯಕೀಯ ತಪಾಸಣಾ ವರದಿ ಹೊರ ಬಿದ್ದಿದ್ದು, ಈ ಮಹಿಳೆಯಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.

ಕಲಬುರಗಿಯಲ್ಲಿ ಮತ್ತೊಂದು ಸೋಂಕಿತ ಪ್ರಕರಣ:
"ಕಲಬುರಗಿಯ 4 #COVID19 ಶಂಕಿತರಲ್ಲಿ, 3 ವ್ಯಕ್ತಿಗಳ ವರದಿ ಈ ಮೊದಲೇ ಬಂದಿದ್ದು, ಇದೀಗ ನಾಲ್ಕನೇ ವ್ಯಕ್ತಿಯ #COVID19 ಪರೀಕ್ಷೆಯ ವರದಿ ಪಾಸಿಟಿವ್ ಎಂದು ಬಂದಿದೆ. ಇವರನ್ನು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ನಿಗಾವಹಿಸಿರುವುದರಿಂದ, ಸೋಂಕಿತರು ಆದಷ್ಟು ಬೇಗ ಗುಣಮುಖರಾಗುತ್ತಾರೆ ಎಂಬ ವಿಶ್ವಾಸವಿದೆ. ನಾಗರಿಕರು ಆತಂಕ ಪಡಬೇಕಾಗಿಲ್ಲ" ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.
ಭಾನುವಾರ ಬೆಳಗ್ಗೆಯಷ್ಟೇ ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ ಶ್ರೀರಾಮುಲು ಅವರು, ಆಸ್ಪತ್ರೆಯಲ್ಲಿ ಸೋಂಕಿತರನ್ನು ಚಿಕಿತ್ಸೆಗೆ ಒಳಪಡಿಸುವ ಐಸೋಲೇಟೆಡ್ ವಾರ್ಡ್ ಗಳನ್ನು ಪರಿಶೀಲನೆ ನಡೆಸಿದ್ದರು. 80 ಪರ್ಸನಲ್ ಪ್ರಿವೆಂನ್ಷನ್ ಕಿಟ್ ಗಳಿವೆ. ಭಾನುವಾರ 500 ಹೊಸ ಕಿಟ್ ಗಳು ಬರಲಿವೆ. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಸದಾ ಅಲರ್ಟ್ ಆಗಿ ಇರುವಂತೆ ವೈದ್ಯರಿಗೆ ಸಚಿವರು ಸೂಚನೆ ನೀಡಿದ್ದರು.












Click it and Unblock the Notifications