ಸಾವಿನ ಸುಳಿವು ಮೊದಲೇ ಸಿಕ್ಕಿತ್ತಾ? ಸಾವಿಗೆ ಮೊದಲು ಆತ ಹೇಳಿದ್ದೇನು?
ರಷ್ಯಾ ಹೆಸರು ಕೇಳಿದರೆ ಸಾಕು ಶತ್ರುಗಳು ನಡುಗುತ್ತಾರೆ, ಅದರಲ್ಲೂ ಪುಟಿನ್ ಶತ್ರುಗಳಿಗೆ ಅಲ್ಲಿ ಉಳಿಗಾಲ ಇಲ್ಲ ಅನ್ನೋ ಆರೋಪ ಇದೆ. ಇಂತಹ ಆರೋಪಕ್ಕೆ ಬಲ ನೀಡುವಂತೆ ಕೆಲವು ದಿನಗಳ ಹಿಂದಷ್ಟೇ ವ್ಲಾದಿಮಿರ್ ಪುಟಿನ್ ಅವರ ವಿರೋಧಿ ಯೆವ್ಗೆನಿ ಪ್ರಿಗೊಝಿನ್ ಮೃತಪಟ್ಟಿದ್ದ. ಆಗಸ್ಟ್ 23 ರಂದು ವಿಮಾನ ಅಪಘಾತದಲ್ಲಿ ಯೆವ್ಗೆನಿ ಪ್ರಿಗೊಝಿನ್ ಜೀವ ಕಳೆದುಕೊಂಡಿದ್ದ. ಆದರೆ ತನ್ನ ಸಾವಿನ ಬಗ್ಗೆ ಪ್ರಿಗೊಝಿನ್‌ಗೆ ಮೊದಲೇ ಸುಳಿವು ಸಿಕ್ಕಿತ್ತಾ?
ಇಂತಹ ಅನುಮಾನ ಶುರುವಾಗಿದ್ದು ಅದೊಂದು ವಿಡಿಯೋ ಮೂಲಕ. ಯಾಕಂದ್ರೆ ಇದೇ ಯೆವ್ಗೆನಿ ಪ್ರಿಗೊಝಿನ್ ಮಾಡಿರುವ ವಿಡಿಯೋ ಈಗ ಅನುಮಾನ ಹುಟ್ಟುಹಾಕಿದೆ. ಯಾಕೆ ಅಂದ್ರೆ ತನ್ನ ಸಾವಿಗೆ ಮೊದಲು ಯೆವ್ಗೆನಿ ಪ್ರಿಗೊಝಿನ್ ಶತ್ರುಗಳ ಕುರಿತು ಮಾತನಾಡಿದ್ದ. ಅಲ್ಲದೆ ತನ್ನ ಜೀವಕ್ಕೆ ಅಪಾಯ ಇದೆ ಅನ್ನೋ ಕುರಿತು ಪ್ರಸ್ತಾಪ ಮಾಡಿದ್ದ ಎನ್ನಲಾಗಿದೆ. ಆಫ್ರಿಕಾದಲ್ಲಿ ಚಿತ್ರೀಕರಿಸಿದ ವಿಡಿಯೋ ಇದಾಗಿದ್ದು, ಜಗತ್ತಿನಾದ್ಯಂತ ವಿಡಿಯೋ ಸಂಚಲನ ಸೃಷ್ಟಿಸಿದೆ. ಹಾಗಾದರೆ ವಿಡಿಯೋದಲ್ಲಿ ಪ್ರಿಗೊಝಿನ್ ಹೇಳಿದ್ದೇನು? ಮುಂದೆ ಓದಿ.

ವೈರಲ್ ಆಗಿರುವ ವಿಡಿಯೋದಲ್ಲಿ 'ನಾನು ಜೀವಂತವಾಗಿ ಇದ್ದೇನೆಯೇ ಅಥವಾ ಇಲ್ಲವೇ, ನಾನು ಹೇಗಿದ್ದೇನೆ ಎಂದು ಚರ್ಚೆ ಮಾಡುತ್ತಿರುವ ಎಲ್ಲರಿಗೂ ಹೇಳುವುದು ಏನೆಂದರೆ, ನಾನು 2023ರ ಆಗಸ್ಟ್ ದ್ವಿತೀಯಾರ್ಧದ ವಾರಾಂತ್ಯದಲ್ಲಿ ಆಫ್ರಿಕಾದಲ್ಲಿ ಇದ್ದೇನೆ' ಎಂದಿದ್ದಾನೆ ಮೃತ ಪ್ರಿಗೊಝಿನ್. ವ್ಯಾಗ್ನರ್ ಗುಂಪಿನೊಂದಿಗೆ ನಂಟಿರುವ ಟೆಲಿಗ್ರಾಮ್ ಚಾನೆಲ್‌ನಲ್ಲಿ ವಿಡಿಯೋ ಶೇರ್ ಮಾಡಲಾಗಿದೆ. ಹಾಗೇ 'ನನ್ನ ಸಾವು ಬಯಸುವವರಿಗೆ ಅಥವಾ ನನ್ನ ಖಾಸಗಿ ಜೀವನ, ನಾನು ಎಷ್ಟು ಸಂಪಾದಿಸುತ್ತೇನೆ ಅಥವಾ ಬೇರೆ ವಿಷಯಗಳನ್ನು ಚರ್ಚಿಸಲು ಬಯಸುವವರಿಗೆ, ಎಲ್ಲವೂ ಸರಿಯಾಗಿದೆ' ಎಂದು ಉತ್ತರಿಸಿದ್ದ.
ಸಾವಿಗೆ ಮೊದಲು ಮಹತ್ವದ ವಿಡಿಯೋ?
ಇನ್ನು ಈ ವಿಡಿಯೋ ಚಲಿಸುವ ವಾಹನದಲ್ಲಿ ಚಿತ್ರೀಕರಣ ಮಾಡಲಾಗಿದೆ ಎನ್ನಲಾಗಿದ್ದು, ಸಮಯ ಹಾಗೂ ದಿನಾಂಕ ಜೊತೆಗೆ ಸ್ಥಳವು ಸ್ಪಷ್ಟವಾಗಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿ ನೋಡಿದರೆ, ವಿಡಿಯೋದಲ್ಲಿ ಗುರುತು ಮರೆ ಮಾಚುವ ಬಟ್ಟೆ & ಟೋಪಿ ಸೇರಿದಂತೆ ಬಲಗೈ ಗಡಿಯಾರವು ಆಗಸ್ಟ್ 21 ರಂದು ರಿಲೀಸ್ ಆಗಿದ್ದ ವಿಡಿಯೋಗೆ ಹೊಂದಿಕೆ ಆಗುತ್ತಿದೆ. ಈ ಮೂಲಕ ವಿಡಿಯೋ ರಿಲೀಸ್ ಮಾಡಿದ ಎರಡು ದಿನದ ಒಳಗೆ ಪುಟಿನ್ ಶತ್ರು ಪ್ರಿಗೊಝಿನ್ ಪ್ರಾಣಪಕ್ಷಿ ಹಾರಿಹೋಗಿದೆ. ಆದರೆ ಪ್ರಿಗೊಝಿನ್ ಸಾವು ಕೊಲೆಯಾ? ಇಲ್ಲ ಅಪಘಾತವಾ? ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿಯುತ್ತಿಲ್ಲ.
ಖಾಸಗಿ ಸೇನೆ ಸರ್ಕಾರದ ವಶಕ್ಕೆ?
ರಷ್ಯಾ ಖಾಸಗಿ ಸೇನೆ ಮುಖ್ಯಸ್ಥ ಪ್ರಿಗೊಝಿನ್ ಸಾವಿನ ವಿಚಾರವಾಗಿ ರಷ್ಯಾ ವಿರುದ್ಧ ಅಮೆರಿಕ ಮತ್ತೆ ಮತ್ತೆ ಆಕ್ರೋಶ ಹೊರಹಾಕುತ್ತಿದೆ. ಹೀಗಾಗಿ ವ್ಲಾದಿಮಿರ್ ಪುಟಿನ್ ರಷ್ಯಾದಲ್ಲಿ ಹಿಂದಿನ ತಪ್ಪು ಮರುಕಳಿಸದಂತೆ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಿದ್ರು. ರಾಜ್ಯಕ್ಕೆ ನಿಷ್ಠೆ ತೊರುವ ಬಗ್ಗೆ ರಷ್ಯಾ ಖಾಸಗಿ ಸೈನಿಕರು ಪ್ರಮಾಣವಚನ ಸ್ವೀಕರಿಸಲು ಆದೇಶ ನೀಡಿದ್ರು. ಜೊತೆಯಲ್ಲಿ ರಷ್ಯಾಗೆ & ರಷ್ಯಾ ಸೇನೆಗೆ ಕೆಲಸ ಮಾಡುವ ಪ್ರತಿ ಸೈನಿಕನು ಈ ಪ್ರತಿಜ್ಞೆ ಸ್ವೀಕರಿಸಬೇಕಿದೆ ಎಂದು ಆದೇಶ ಹೊರಡಿಸಿದ್ದರು ಪುಟಿನ್. ಇದೆಲ್ಲ ನೋಡುತ್ತಿದ್ದರೆ ರಷ್ಯಾ ಖಾಸಗಿ ಸೇನೆ ಸರ್ಕಾರದ ವಶಕ್ಕೆ ಬಂದಿದೆ ಎನ್ನಲಾಗುತ್ತಿದೆ.

ಹೀಗೆ ರಷ್ಯಾ ಖಾಸಗಿ ಸೇನೆ ಮುಖ್ಯಸ್ಥರ ಸಾವು ಸಾಕಷ್ಟು ಗೊಂದಲ ಸೃಷ್ಟಿಮಾಡಿದೆ. ಈಗ ಇದೇ ವಿಚಾರವಾಗಿ ದಿನಕ್ಕೊಂದು ಆರೋಪ ಹೊರಬೀಳುತ್ತಿದೆ. ಆದರೆ ರಷ್ಯಾ ಅಥವಾ ಆ ದೇಶದ ಅಧ್ಯಕ್ಷರು ಆರೋಪಗಳಿಗೆ ಉತ್ತರ ನೀಡುತ್ತಿಲ್ಲ. ಅಮೆರಿಕ ಮತ್ತು ನ್ಯಾಟೋ ಈಗ ಮಾಡುತ್ತಿರುವ ಆರೋಪ ಸುಳ್ಳು ಅಂತಾ ಮಾತ್ರ ಹೇಳುತ್ತಿದೆ. ಇಷ್ಟೆಲ್ಲಾ ಗೊಂದಲಗಳ ನಡುವೆ ರಷ್ಯಾ ಖಾಸಗಿ ಸೇನೆಯ ಬುಡ ಬಿಸಿಯಾಗುತ್ತಿದೆ. ಶೀಘ್ರದಲ್ಲೇ ರಷ್ಯಾ ಖಾಸಗಿ ಸೇನೆ ಮತ್ತೊಮ್ಮೆ ಉಕ್ರೇನ್ ನೆಲಕ್ಕೆ ಎಂಟ್ರಿ ಕೊಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.












Click it and Unblock the Notifications