ಇವರೇ.. ಮೊದಲ ಏಳು ಕೊರೊನಾ ವೈರಸ್ ಪೀಡಿತರಿಗೆ ಚಿಕಿತ್ಸೆ ನೀಡಿದ್ದು
ಬೀಜಿಂಗ್, ಫೆಬ್ರವರಿ.03: ಚೀನಾದಲ್ಲಿ ಮೊದಲು 7 ಮಂದಿ ಕೊರೊನಾ ವೈರಸ್ ಗೆ ಚಿಕಿತ್ಸೆ ನೀಡಿದ ಉಸಿರಾಟ ತಜ್ಞವೈದ್ಯೆ ಹೆಸರು ಸಖತ್ ಸದ್ದು ಮಾಡುತ್ತಿದೆ. ವುಹಾನ್ ಮೂಲದ ವೈದ್ಯಯನ್ನು ಚೀನಾದಲ್ಲಿ ಇದೀಗ ಹೀರೋನಂತೆ ಬಿಂಬಿಸಲಾಗುತ್ತಿದೆ.
ಕಳೆದ ಡಿಸೆಂಬರ್.26ರಂದು ವುಹಾನ್ ನಲ್ಲಿ ಮೊದಲ ಬಾರಿಗೆ ಜ್ವರದಿಂದ ಬಳಲುತ್ತಿದ್ದ ನಾಲ್ವರು ರೋಗಿಗಳು ಚಿಕಿತ್ಸೆಗೆ ತೆರಳಿದ್ದರು. ಈ ಪೈಕಿ ಮೂವರು ಒಂದೇ ಕುಟುಂಬದವರು ಎನ್ನಲಾಗಿದೆ. ಎಲ್ಲ ರೋಗಿಗಳನ್ನು ಚಿಕಿತ್ಸೆಗೆ ಒಳಪಡಿಸಿದಾಗ ಒಂದೇ ರೀತಿಯ ಲಕ್ಷಣಗಳು ಕಂಡು ಬಂದಿವೆ.
ರೋಗಿಗಳ ಎಕ್ಸ್ ರೇ ಪರಿಶೀಲನೆ ನಡೆಸಿದಾಗ ಶ್ವಾಸಕೋಶದಲ್ಲಿ ನಿಮೋನಿಯಾ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಮರುದಿನ ಆಸ್ಪತ್ರೆಗೆ ಆಗಮಿಸಿದ ರೋಗಿಗಳಲ್ಲೂ ಒಂದೇ ರೀತಿಯ ಲಕ್ಷಣಗಳು ಕಂಡು ಬಂದಿದ್ದವು ಎನ್ನುತ್ತಾರೆ ವುಹಾನ್ ಮೂಲದ ಉಸಿರಾಟ ತಜ್ಞವೈದ್ಯೆ ಝಂಗ್ ಜಿಕ್ಸಿಯಾನ್.

ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕು ತಗಲುವ ಬಗ್ಗೆ ಸ್ಪಷ್ಟತೆ
ತೀವ್ರ ಜ್ವರ ಮತ್ತು ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ಆಗಮಿಸಿದ ರೋಗಿಗಳ ಸಂಬಂಧಿಕರೇ ಮರುದಿನ ಅಂಥದ್ದೇ ರೋಗಕ್ಕೆ ತುತ್ತಾಗಿದ್ದರು. ಏಳು ರೋಗಿಗಳ ಪೈಕಿ ಒಂದೇ ಕುಟುಂಬದ ನಾಲ್ವರಲ್ಲಿ ರೋಗಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಿತ್ತು. ಸಮುದ್ರದ ಆಹಾರ ಸೇವನೆಯಿಂದ ಸೋಂಕು ತಗಲಿರುವ ಅನುಮಾನ ವ್ಯಕ್ತವಾಗಿತ್ತು ಎಂದು ವೈದ್ಯೆ ಸ್ಪಷ್ಟಪಡಿಸಿದ್ದಾರೆ.

ಮರುದಿನವೇ ಮನೆ ಮಂದಿಗೆಲ್ಲ ತಗಲಿದ ಸೋಂಕು
ಜ್ವರ ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ರೋಗಿಯ ಮನೆಗೆ ತೆರಳಿ ಚಿಕಿತ್ಸೆ ನೀಡಿದ್ದೆನು. ಮರುದಿನ ಅದೇ ಕುಟುಂಬದ ಮೂವರಲ್ಲಿ ಒಂದೇ ರೀತಿಯ ರೋಗಕ್ಕೆ ತುತ್ತಾಗಿದ್ದು ಕಂಡು ಬಂತು. ಇದರಿಂದ ವ್ಯಕ್ತಿಯಿಂದ ವ್ಯಕ್ತಿಗೆ ಈ ಸೋಂಕು ತಗಲುತ್ತಿರುವ ಬಗ್ಗೆ ಸ್ಪಷ್ಟವಾಯಿತು ಎಂದು ವೈದ್ಯೆ ಝಂಗ್ ಜಿಕ್ಸಿಯಾನ್ ತಿಳಿಸಿದ್ದಾರೆ.

ಕೊರೊನಾ ವೈರಸ್ ಗೆ 5 ವಾರದಲ್ಲಿ 300 ಬಲಿ
ಡಿಸೆಂಬರ್ ಕೊನೆಯ ವಾರದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ಬಗ್ಗೆ ಆರಂಭದಲ್ಲಿ ಯಾರಿಗೂ ಸ್ಪಷ್ಟತೆ ಇರಲಿಲ್ಲ. ಇದಾಗಿ ಐದು ವಾರಗಳಲ್ಲಿ ಚೀನಾ ಮಾರಕ ರೋಗಕ್ಕೆ ತತ್ತರಿಸಿ ಹೋಗಿದ್ದು, ಇದುವರೆಗೂ 361ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ. ನುವಾರ 2,103 ಜನರಿಗೆ ಸೋಂಕು ತಗಲಿರುವ ಬಗ್ಗೆ ಸ್ಪಷ್ಟವಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ ಚೀನಾ ಒಂದರಲ್ಲೇ 16,600ಕ್ಕೆ ಏರಿಕೆಯಾಗಿದೆ.

ರೋಗದಿಂದ ರಕ್ಷಿಸಿಕೊಳ್ಳಲು ಎನ್-95 ಮಾಸ್ಕ್
ಇನ್ನು, ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ರೋಗದಿಂದ ರಕ್ಷಿಸಿಕೊಳ್ಳಲು ಎನ್-95 ಮಾಸ್ಕ್ ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಎನ್-95 ಮಾಸ್ಕ್ ಇತರೆ ಮಾಸ್ಕ್ ಗಳಿಗಿಂತ ವಿಭಿನ್ನ ಮತ್ತು ವಿಶೇಷ ಎನಿಸಿದೆ. ಸಾಮಾನ್ಯವಾಗಿ ಮಾಸ್ಕ್ ಗಳು 3 ಪದರಗಳನ್ನು ಹೊಂದಿರುತ್ತದೆ. ಆದರೆ, ಎನ್-95 ಮಾಸ್ಕ್ ಆರು ಪದರಗಳನ್ನು ಹೊಂದಿದ್ದು, ಸೋಂಕು ತಗಲದಂತೆ ತಡೆಗಟ್ಟುತ್ತದೆ ಎಂದು ವೈದ್ಯರು ಸೂಚನೆ ನೀಡಿದ್ದಾರೆ.












Click it and Unblock the Notifications