2.6 ಬಿಲಿಯನ್ ಡಾಲರ್ ಸಂಪತ್ತಿದ್ದರೂ ದಿನಕ್ಕೆ 14 ಗಂಟೆ ದುಡಿತಾರಂತೆ ಈ ವಿಶ್ವದ ಅತಿ ಕಿರಿಯ ಮಹಿಳಾ ಬಿಲಿಯನೇರ್

ಒಬ್ಬ ವ್ಯಕ್ತಿ ದಿಢೀರ್ ಆಗಿ ಕೋಟ್ಯಾಧಿಪತಿಯಾದರೆ ಅವರ ಜೀವನಶೈಲಿ ಸಂಪೂರ್ಣವಾಗಿ ಬದಲಾಗಿ ಹೋಗುತತದೆ. ಐಷಾರಾಮಿ ಕಾರುಗಳು, ವಿದೇಶಿ ಪ್ರವಾಸಗಳು, ದೊಡ್ಡ ಬಂಗಲೆ ಹೀಗೆ ಅವರ ಆಸೆಗಳಿಗೆ ಮಿತಿಯೇ ಇರುವುದಿಲ್ಲ. ಆದರೆ, ಇಲ್ಲೊಬ್ಬ ಯುವತಿ ತಮ್ಮ 30ನೇ ವಯಸ್ಸಿನಲ್ಲೇ ಬರೋಬ್ಬರಿ 2.6 ಬಿಲಿಯನ್ ಡಾಲರ್ ಅಂದರೆ ಅಂದಾಜು 21 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯ ಒಡತಿಯಾಗಿದ್ದರೂ, ತಮ್ಮ ಹಳೆಯ ಜೀವನಶೈಲಿಯನ್ನೇ ಮುಂದುವರಿಸಿದ್ದಾರೆ.

ಅವರೇ ಅಮೆರಿಕದ ಪ್ರಖ್ಯಾತ ಪ್ರಿಡಿಕ್ಷನ್ ಮಾರುಕಟ್ಟೆ ವೇದಿಕೆಯಾದ ಕಲ್ಶಿ (Kalshi) ಯ ಸಹಸಂಸ್ಥಾಪಕಿ ಮತ್ತು ಮುಖ್ಯ ನಿರ್ವಹಣಾಧಿಕಾರಿ (COO) ಲುವಾನಾ ಲೋಪೆಸ್ ಲಾರಾ.

Worlds Youngest Self Made Female Billionaire Luana Lara Still Works 14 Hours A Day and remains unchanged

ಬ್ರೆಜಿಲ್ ಮೂಲದ ಈ ಯುವ ಉದ್ಯಮಿ, ಇದೀಗ ಅಧಿಕೃತವಾಗಿ ವಿಶ್ವದ ಅತಿ ಕಿರಿಯ ಮಹಿಳಾ ಬಿಲಿಯನೇರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಷ್ಟೊಂದು ಅಪಾರ ಪ್ರಮಾಣದ ಸಂಪತ್ತು ಗಳಿಸಿದರೂ ಲುವಾನಾ ಅವರ ಪ್ರತಿನಿತ್ಯದ ದಿನಚರಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಹೌದು, ಈಗಲೂ ಅವರು ಪ್ರತಿದಿನ 12 ರಿಂದ 14 ಗಂಟೆಗಳ ಕಾಲ ಆಫೀಸ್‌ನಲ್ಲಿ ಕೆಲಸ ಮಾಡುತ್ತಾರೆ ಮತ್ತು ರಜೆಗಳನ್ನ ತೆಗೆದುಕೊಳ್ಳುವುದು ಕೂಡ ತೀರಾ ವಿರಳ ಎಂದು ತಾವೇ ಖುದ್ದು ಹೇಳಿಕೊಂಡಿದ್ದಾರೆ.

ಬದಲಾಗದ ಜೀವನಶೈಲಿ ಮತ್ತು ಕಲ್ಶಿ ವೇದಿಕೆಯ ಮೇಲಿನ ಶ್ರದ್ಧೆ

ತಮ್ಮ ಈ ಯಶಸ್ಸಿನ ಕುರಿತು ಫಾರ್ಚೂನ್ ಮ್ಯಾಗಜಿನ್‌ಗೆ ನೀಡಿರುವ ಸಂದರ್ಶನದಲ್ಲಿ ಲುವಾನಾ ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಬ್ರೆಜಿಲ್‌ನ ಮಧ್ಯಮ ವರ್ಗದ ಕುಟುಂಬವೊಂದರಿಂದ ಬಂದ ಲುವಾನಾ, ತಂತ್ರಜ್ಞಾನ ಕ್ಷೇತ್ರಕ್ಕೆ ಕಾಲಿಡುವ ಮುನ್ನ ವೃತ್ತಿಪರ ಬ್ಯಾಲೆರಿನಾ ನೃತ್ಯಗಾರ್ತಿಯಾಗಲು ತರಬೇತಿ ಪಡೆಯುತ್ತಿದ್ದರು.

"ನಾನು ಬಿಲಿಯನೇರ್ ಆದ ನಂತರ ನನ್ನ ಜೀವನಶೈಲಿ ಬದಲಾಗಿಲ್ಲ ಎಂದು ಹೇಳಲು ಮುಖ್ಯ ಕಾರಣ, ನನ್ನ ಸಂಪೂರ್ಣ ಗಮನ ಕಲ್ಶಿ ಸಂಸ್ಥೆಯನ್ನ ಕಟ್ಟುವುದರ ಮೇಲಿದೆ. ಕೆಲವೊಮ್ಮೆ ಸ್ನೇಹಿತರೊಂದಿಗೆ ಊಟಕ್ಕಾಗಿ ಕೊಂಚ ಹೆಚ್ಚು ಹಣ ಖರ್ಚು ಮಾಡಬಹುದು ಅಥವಾ ಇತ್ತೀಚೆಗೆ ಕುಟುಂಬವನ್ನ ವ್ಯಾಟಿಕನ್ ಸಿಟಿಗೆ ಕ್ರಿಸ್‌ಮಸ್ ಆಚರಣೆಗೆ ಕರೆದೊಯ್ದಿದ್ದೆ. ಅದನ್ನ ಬಿಟ್ಟರೆ ಐಷಾರಾಮಿ ವಸ್ತುಗಳ ಬಗ್ಗೆ ನನಗೆ ವ್ಯಾಮೋಹವಿಲ್ಲ," ಎಂದು ಲುವಾನಾ ಹೇಳುತ್ತಾರೆ.

ಅವರ ಪ್ರಕಾರ, ಸಂಪತ್ತು ಎಂಬುದು ಯಶಸ್ಸಿನ ಅಳತೆಗೋಲೇ ಹೊರತು, ಅದು ವ್ಯಕ್ತಿಯ ಜೀವನವನ್ನ ನಿರ್ಧರಿಸುವುದಿಲ್ಲ.

ಕಲ್ಶಿ ವೇದಿಕೆಯ ಭಾರಿ ಮೌಲ್ಯವರ್ಧನೆ

ಕಲ್ಶಿ ಎನ್ನುವುದು ಒಂದು ಭವಿಷ್ಯವಾಣಿ ಅಥವಾ ಪ್ರಿಡಿಕ್ಷನ್ ಆಧಾರಿತ ಮಾರುಕಟ್ಟೆ ವೇದಿಕೆಯಾಗಿದೆ. ಇಲ್ಲಿ ಬಳಕೆದಾರರು ಚುನಾವಣೆಗಳು, ಕ್ರೀಡಾ ಸ್ಪರ್ಧೆಗಳು ಮತ್ತು ಆರ್ಥಿಕ ನಿರ್ಧಾರಗಳಂತಹ ನಿಜವಾದ ಪ್ರಪಂಚದ ಘಟನೆಗಳ ಫಲಿತಾಂಶಗಳನ್ನ ಊಹಿಸಿ ಹಣ ಹೂಡಿಕೆ ಮಾಡಬಹುದು.

ಈ ಸಂಸ್ಥೆಯ ಬೆಳವಣಿಗೆಯ ಗ್ರಾಫ್ ನಿಜಕ್ಕೂ ಬೆರಗುಗೊಳಿಸುವಂತಿದೆ. ಜೂನ್ 2025ರಲ್ಲಿ 2 ಬಿಲಿಯನ್ ಡಾಲರ್ ಇದ್ದ ಕಂಪನಿಯ ಮೌಲ್ಯ, ಡಿಸೆಂಬರ್ ವೇಳೆಗೆ 11 ಬಿಲಿಯನ್ ಡಾಲರ್‌ಗೆ ಜಿಗಿದು, ಮೇ 2026ರ ಹೊತ್ತಿಗೆ ಬರೋಬ್ಬರಿ 22 ಬಿಲಿಯನ್ ಡಾಲರ್ ತಲುಪಿತ್ತು.

ರಾಯಿಟರ್ಸ್ ವರದಿಯ ಪ್ರಕಾರ, ಸದ್ಯ ಕಲ್ಶಿ ಸಂಸ್ಥೆಯು ಸುಮಾರು 40 ಬಿಲಿಯನ್ ಡಾಲರ್ ಮೌಲ್ಯಮಾಪನದಲ್ಲಿ ಹೊಸ ಹೂಡಿಕೆಗಳನ್ನ ಆಕರ್ಷಿಸಲು ಮಾತುಕತೆ ನಡೆಸುತ್ತಿದೆ.

ಕಾನೂನು ಸವಾಲುಗಳು ಮತ್ತು ಭವಿಷ್ಯದ ಹೋರಾಟ

ಕಂಪನಿಯ ತ್ವರಿತಗತಿಯ ಬೆಳವಣಿಗೆಯ ಜೊತೆಜೊತೆಗೆ ಕಾನೂನು ಸವಾಲುಗಳು ಕೂಡ ಎದುರಾಗಿವೆ. ಅಮೆರಿಕದ ಕೆಲವು ರಾಜ್ಯಗಳು ಕಲ್ಶಿಯ ಕ್ರೀಡಾ-ಸಂಬಂಧಿತ ಒಪ್ಪಂದಗಳನ್ನ ಪ್ರಶ್ನಿಸಿದ್ದು, ಇವು ಅಕ್ರಮ ಜೂಜಾಟಕ್ಕೆ ಸಮಾನವಾಗಿವೆ ಎಂದು ಆರೋಪಿಸಿವೆ.

ಆದರೆ, ಲುವಾನಾ ಲಾರಾ ಈ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. "ನಾವು ಸಾಂಪ್ರದಾಯಿಕ ಬೆಟ್ಟಿಂಗ್ ಆ್ಯಪ್‌ಗಳಂತೆ ಹಣ ಸಂಪಾದಿಸುತ್ತಿಲ್ಲ. ಕಲ್ಶಿ ಒಂದು ಫೆಡರಲ್ ನಿಯಂತ್ರಿತ ಆರ್ಥಿಕ ವಿನಿಮಯ ವೇದಿಕೆಯಾಗಿದೆ," ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಮ್ಮ ವೇದಿಕೆಯನ್ನ ಸಮರ್ಥಿಸಿಕೊಂಡಿರುವ ಅವರು, ಪ್ರಿಡಿಕ್ಷನ್ ಮಾರುಕಟ್ಟೆಗಳು ಕೇವಲ ಬೆಟ್ಟಿಂಗ್ ಅಲ್ಲ, ಬದಲಾಗಿ ಆರ್ಥಿಕವಾಗಿ ಬೆಂಬಲ ನೀಡುವ ಜನರ ಮಾಹಿತಿಯನ್ನ ಒಟ್ಟುಗೂಡಿಸಿ, ನಿಜವಾದ ಮತ್ತು ಮೌಲ್ಯಯುತವಾದ ಮುನ್ಸೂಚನೆಗಳನ್ನ ನೀಡುವ ಅತ್ಯುತ್ತಮ ಸಾಧನವಾಗಿವೆ ಎಂದಿದ್ದಾರೆ.

ಈ ಕಾನೂನು ವಿವಾದವು ಅಂತಿಮವಾಗಿ ಅಮೆರಿಕದ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ ಎಂದು ಕಲ್ಶಿಯ ಸಹ ಸಂಸ್ಥಾಪಕ ಮತ್ತು ಸಿಇಒ ತಾರೆಕ್ ಮನ್ಸೂರ್ ಅಭಿಪ್ರಾಯಪಟ್ಟಿದ್ದಾರೆ. ಏನೇ ಅಡೆತಡೆಗಳಿದ್ದರೂ, 14 ಗಂಟೆಗಳ ಕಾಲ ಕಠಿಣ ಶ್ರಮ ಹಾಕುತ್ತಿರುವ ಲುವಾನಾ ಲಾರಾ ಅವರ ಸಾಧನೆ ಇಂದಿನ ಯುವ ಉದ್ಯಮಿಗಳಿಗೆ ಒಂದು ದೊಡ್ಡ ಸ್ಫೂರ್ತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+