ಪತಿ ಹತ್ಯೆಯಾಗುತ್ತಿದ್ದಂತೆಯೇ ಸೆರೆಸಿಕ್ಕ ಮೋಸ್ಟ್ ವಾಂಟೆಡ್ ಬಗ್ದಾದಿ ಪತ್ನಿ
ಮೋಸ್ಟ್ ವಾಂಟೆಡ್ ಉಗ್ರ ಅಬು ಬಕರ್ ಅಲ್- ಬಗ್ದಾದಿ, ಅಮೆರಿಕ ಸೇನಾ ಕಾರ್ಯಾಚರಣೆಯ ವೇಳೆ ಸಾವಿಗೀಡಾಗಿ ವಾರ ಕಳೆದ ನಂತರ ಆತನ ಪತ್ನಿಯನ್ನು ಟರ್ಕಿ ಸೇನೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಈ ಕುರಿತು ಮಾತನಾಡಿದ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್, ನಾವು ಬಗ್ದಾದಿಯ ಪತ್ನಿ, ಆತನ ತಂಗಿ ಮತ್ತು ಭಾವನನ್ನು ಸೆರೆ ಹಿಡಿದಿದ್ದೇವೆ. ಆದರೆ ಅಮೆರಿಕದಂತೆ ಅದನ್ನು ಎಲ್ಲೆಡೆಯೂ ಡಂಗುರ ಸಾರಿಲ್ಲ ಎಮದು ವ್ಯಂಗ್ಯವಾಗಿ ಹೇಳಿದರು.
"ಅಮೆರಿಕ ಬಗ್ದಾದಿಯನ್ನು ಕೊಲ್ಲಲು ತನ್ನ ನಾಯಿಗಳನ್ನು ಕಳಿಸಿತ್ತು. ಆತ ಹೆದರಿ ಸುರಂಗದಲ್ಲಿ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದ ಎಂದು ಅದು ಎಲ್ಲೆಡೆ ಹೇಳಿಕೊಂದು ಬಂದಿದೆ. ಅಮೆರಿಕಕ್ಕೆ ಅದೊಂದು ಪ್ರಚಾರದ ವಿಷಯವಾಗಿದೆ. ಆದರೆ ನಾವು ಪ್ರಚಾರ ಬಯಸುವುದಿಲ್ಲ" ಎಂದು ಅವರು ಹೇಳಿದರು.

ಸಿರಿಯಾದ ವಾಯವ್ಯಕ್ಕೆ ಇರುವ ಇದ್ಲಿಬ್ ಪ್ರಾಂತ್ಯದಲ್ಲಿ ಅಮೆರಿಕದ ಸೇನಾ ಕಾರ್ಯಾಚರಣೆ ವೇಳೆ ಬಗ್ದಾದಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಿಗೆ ಆತನಿಗೆ ಭಯ ಹುಟ್ಟಿಸಿದ್ದು, ಅಮೆರಿಕ ಸೇನೆಯ ಒಂದು ನಾಯಿ ಎಂಬುದು ನಂತರ ತಿಳಿದುಬಂದಿತ್ತು.
ಸುರಂಗದೊಳಗೆ ಅಡಗಿದ್ದ ಬಾಗ್ದಾದಿಯನ್ನು ಸುರಂಗದೊಳಗೇ ಬಹುದೂರ ಅಟ್ಟಿಸಿಕೊಂಡು ಹೋಗಿ, ಮುಂದೆ ಹೋಗಲು ದಾರಿಯೇ ಇಲ್ಲದಂತೆ ಮಾಡಿ ಅಮೆರಿಕ ಸೇನೆಯ ನಾಯಿಗಳು ಸುತ್ತಿವರಿದಿದ್ದವು. ಇನ್ನು ತಾನು ಬಚಾವಾಗುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ಅರಿತ ಬಾಗ್ದಾದಿ ತನ್ನ ದೇಹಕ್ಕೆ ಸುತ್ತಿಕೊಂಡಿದ್ದ ಆತ್ಮಾಹುತಿ ಬಾಂಬ್ ಅನ್ನು ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಅಮೆರಿಕ ಹೇಳಿತ್ತು.












Click it and Unblock the Notifications