ಹೆಚ್ಚು ಆದಾಯದ ದೇಶಗಳಲ್ಲಿ ಬೂಸ್ಟರ್ ಡೋಸ್ ಲಸಿಕೆ; WHO ಎಚ್ಚರಿಕೆ
ಬಡದೇಶಗಳಿಗೆ ಕೊರೊನಾ ಲಸಿಕೆ ಲಭ್ಯವಾಗದ ಇಂಥ ಸಂದರ್ಭದಲ್ಲಿ ಹೆಚ್ಚು ಆದಾಯದ ದೇಶಗಳು ಬೂಸ್ಟರ್ ಡೋಸ್ ಲಸಿಕೆ ನೀಡಲು ಮುಂದಾದರೆ ಕೊರೊನಾ ಸಾಂಕ್ರಾಮಿಕ ವಿಶ್ವದಾದ್ಯಂತ ಇನ್ನಷ್ಟು ಭೀಕರ ಸನ್ನಿವೇಶ ಸೃಷ್ಟಿಗೆ ಕಾರಣವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದಲ್ಲಿ ಈಗಾಗಲೇ ಲಸಿಕೆ ಪಡೆದ ಮಂದಿಗೆ ಬೂಸ್ಟರ್, ಅಂದರೆ ಮೂರನೇ ಡೋಸ್ ಕೊರೊನಾ ಲಸಿಕೆ ನೀಡಲು ಆರೋಗ್ಯಾಧಿಕಾರಿಗಳು ಶಿಫಾರಸು ಮಾಡಿದ್ದಾರೆ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಎಚ್ಚರಿಕೆ ನೀಡಿದ್ದಾರೆ. 'ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಕೋಟ್ಯಂತರ ಜನರಿಗೆ ಕೊರೊನಾ ಲಸಿಕೆ ಹಾಕದೇ ಬಿಡುವುದು, ಅಮೆರಿಕ ಇನ್ನಿತರ ದೇಶಗಳನ್ನು ಆವರಿಸಿರುವ ಡೆಲ್ಟಾ ರೂಪಾಂತರದಂಥ ಹೊಸ ರೂಪಾಂತರದ ಸೃಷ್ಟಿಯನ್ನು ಉತ್ತೇಜಿಸಲಿದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
'ಪ್ರಸ್ತುತ ಬೂಸ್ಟರ್ ಡೋಸ್‌ಗಳ ಅಗತ್ಯವಿದೆ ಎನ್ನುವುದನ್ನು ದತ್ತಾಂಶಗಳು ಸೂಚಿಸುತ್ತಿಲ್ಲ ಎಂಬುದರ ಬಗ್ಗೆ ನಮಗೆ ಸ್ಪಷ್ಟತೆಯಿದೆ' ಎಂದು ಜಿನೆವಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸೌಮ್ಯಾ ಹೇಳಿದ್ದಾರೆ. ಇದರೊಂದಿಗೆ ದುರ್ಬಲ ರೋಗನಿರೋಧಕ ಶಕ್ತಿಯಿರುವ ಜನರಿಗೆ ಬೂಸ್ಟರ್ ಡೋಸ್ ನೀಡುವ ಈಚಿನ ಅಮೆರಿಕ ಸರ್ಕಾರದ ನಿರ್ಧಾರವನ್ನು ಪರಿಗಣಿಸಿದ್ದಾರೆ.

ಪರಿಶೀಲನೆಗೊಳಪಡದ ಕಡೆಗಳಲ್ಲಿ ಕೊರೊನಾ ರೂಪಾಂತರಗಳು ನಿರಂತರವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಪದೇ ಪದೇ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಕೊರೊನಾ ಲಸಿಕೆ ಸಮಾನ ವಿತರಣೆ ಕುರಿತು ಮಾತನಾಡಿದ್ದು, ಲಸಿಕೆ ಪೂರೈಕೆ ವಿಷಯದಲ್ಲಿ ದೇಶಗಳು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕರೆ ನೀಡಿದ್ದಾರೆ.
'ಒಂದು ಸಾದೃಶ್ಯವನ್ನು ಮುಂದಿಟ್ಟುಕೊಂಡು ಯೋಚಿಸೋಣ. ಈಗಾಗಲೇ ಜೀವರಕ್ಷಕ ಇರುವವರಿಗೆ ಮತ್ತೆ ಜೀವರಕ್ಷಕ ನೀಡುವುದೋ ಅಥವಾ ಏನೂ ರಕ್ಷಣೆ ಇಲ್ಲದವರಿಗೆ ಜೀವರಕ್ಷಕ ನೀಡದೇ ಅವರನ್ನು ಹಾಗೇ ಬಿಡುವುದೋ? ಇವೆರಡರಲ್ಲಿ ಯಾವುದು ಸೂಕ್ತ ಎಂಬುದನ್ನು ಸರಳವಾಗಿ ಯೋಚಿಸಬೇಕಿದೆ' ಎಂದು ಲಸಿಕೆ ವಿತರಣೆ ಕುರಿತು ವಿವರಿಸಿದರು ವಿಶ್ವ ಆರೋಗ್ಯ ಸಂಸ್ಥೆ ತುರ್ತು ವಿಭಾಗದ ಮುಖ್ಯಸ್ಥ ಡಾ. ಮೈಕಲ್ ರಾನ್.
'ಹತ್ತು ದೇಶಗಳು ತಮ್ಮ 75% ಜನಸಂಖ್ಯೆಗೆ ಲಸಿಕೆ ವಿತರಣೆ ಮಾಡಿವೆ. ಆದರೆ ಕಡಿಮೆ ಆದಾಯದ ದೇಶಗಳು ಕೇವಲ 2%ರಷ್ಟು ಜನರಿಗೆ ಲಸಿಕೆ ನೀಡಿವೆ' ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕ ಟೆಡ್ರೋಸ್ ಅದನಾಮ್ ವಿವರಿಸಿದ್ದಾರೆ. 'ಈ ಲಸಿಕೆ ಅಸಮಾನತೆ ಮಾನವೀಯತೆಗೇ ಅವಮಾನಕರ' ಎಂದು ಖಾರವಾಗಿ ನುಡಿದಿದ್ದಾರೆ.

ಕೊರೊನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಅಭಿವೃದ್ಧಿಗೊಂಡಿರುವ ಕೊರೊನಾ ಲಸಿಕೆಗಳ ಸಮಾನ ವಿತರಣೆಗೆ ಆದ್ಯತೆ ನೀಡಲು ಇನ್ನಷ್ಟು ದಿನ ಬೂಸ್ಟರ್ ಡೋಸ್‌ಗಳಿಗೆ ತಡೆ ನೀಡುವಂತೆ ಈಚೆಗೆ ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ. ಶ್ರೀಮಂತ ಹಾಗೂ ಬಡ ರಾಷ್ಟ್ರಗಳ ನಡುವೆ ಕೊರೊನಾ ಲಸಿಕೆ ವಿತರಣೆಯಲ್ಲಿನ ತೀವ್ರ ಅಸಮಾನತೆಯನ್ನು ಪರಿಹರಿಸಲು ಕನಿಷ್ಠ ಸೆಪ್ಟೆಂಬರ್ ಅಂತ್ಯದವರೆಗೆ ಕೊರೊನಾ ಬೂಸ್ಟರ್ ಲಸಿಕೆಗಳಿಗೆ ತಡೆ ನೀಡುವಂತೆ ದೇಶಗಳಿಗೆ ಮನವಿ ಮಾಡಿದೆ.
"ಡೆಲ್ಟಾ ರೂಪಾಂತರದಿಂದ ತಮ್ಮ ಜನರನ್ನು ರಕ್ಷಿಸಲು ಎಲ್ಲಾ ಸರ್ಕಾರಗಳ ಕಾಳಜಿ ನಮಗೆ ಅರ್ಥವಾಗುತ್ತದೆ. ಆದರೆ ಈಗಾಗಲೇ ಅಧಿಕ ಮಟ್ಟದಲ್ಲಿ ಜಾಗತಿಕ ಲಸಿಕೆಗಳನ್ನು ಬಳಸಿದ ದೇಶಗಳು ಇನ್ನಷ್ಟು ಲಸಿಕೆಗಳನ್ನು ಹೆಚ್ಚಾಗಿ ಬಳಸುವುದು ಸದ್ಯಕ್ಕೆ ಸಾಧ್ಯವಿಲ್ಲ. ವಿಶ್ವದಲ್ಲಿ ಅತ್ಯಂತ ದುರ್ಬಲ ರಾಷ್ಟ್ರಗಳ ಜನರು ಅಸುರಕ್ಷಿತವಾಗಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ" ಎಂದು ಟೆಡ್ರೋಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
"ಶ್ರೀಮಂತ ಹಾಗೂ ಹೆಚ್ಚಿನ ಆದಾಯದ ದೇಶಗಳಿಗೆ ಹೆಚ್ಚಿನ ಕೊರೊನಾ ಲಸಿಕೆ ಪೂರೈಸುವ ಬದಲು ಸದ್ಯಕ್ಕೆ ಕಡಿಮೆ ಆದಾಯದ ಬಡ ರಾಷ್ಟ್ರಗಳಿಗೆ ಹೆಚ್ಚಿನ ಲಸಿಕೆಗಳನ್ನು ಪೂರೈಸಬೇಕಾದ ಅಗತ್ಯವಿದೆ. ತುರ್ತಾಗಿ ಈ ಕಾರ್ಯ ನಡೆಸಬೇಕಿದೆ" ಎಂದಿದ್ದರು.
ಆದರೆ ಕೊರೊನಾ ಬೂಸ್ಟರ್ ಶಾಟ್‌ಗಳಿಗೆ ತಡೆ ನೀಡುವ ಯುಎನ್ ಆರೋಗ್ಯ ಏಜನ್ಸಿ ಮನವಿಯನ್ನು ಅಮೆರಿಕ ತಿರಸ್ಕರಿಸಿತ್ತು. ಈ ಆಯ್ಕೆಯನ್ನು ನಾವು ಅನುಸರಿಸುವುದಿಲ್ಲ. ನಾವು ಬೂಸ್ಟರ್ ಡೋಸ್‌ಗಳನ್ನೂ ನೀಡುತ್ತೇವೆ. ಬಡ ರಾಷ್ಟ್ರಗಳಿಗೆ ಲಸಿಕೆಯನ್ನೂ ಪೂರೈಸುತ್ತೇವೆ. ಈ ಎರಡೂ ಆಯ್ಕೆಗಳನ್ನು ಪೂರೈಸುತ್ತೇವೆ ಎಂದಿದ್ದು, ಬೇರೆ ಶ್ರೀಮಂತ ರಾಷ್ಟ್ರಗಳು ಕೂಡ ಬಡ ರಾಷ್ಟ್ರಗಳಿಗೆ ಲಸಿಕೆ ಪೂರೈಸುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿತ್ತು.












Click it and Unblock the Notifications