ಕೊರೊನಾ ವೈರಸ್ ನಿಯಂತ್ರಣ ಯಾವಾಗ?: ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು ಹೀಗೆ...
ಜಿನೀವಾ, ಆಗಸ್ಟ್ 22: ಕೋವಿಡ್-19 ಸಂಕಷ್ಟವನ್ನು ಶತಮಾನಕ್ಕೆ ಒಮ್ಮೆ ಎದುರಾಗುವ ಆರೋಗ್ಯ ಬಿಕ್ಕಟ್ಟು ಎಂದು ವ್ಯಾಖ್ಯಾನಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಸ್ಪ್ಯಾನಿಶ್ ಫ್ಲೂ ಅನ್ನು ನಿಯಂತ್ರಿಸಿದ್ದಕ್ಕೂ ಹೆಚ್ಚು ವೇಗವಾಗಿ ಕೊರೊನಾ ವೈರಸ್ ಸೋಂಕನ್ನು ನಿಯಂತ್ರಿಸಲು ಸಾಧ್ಯವಿದೆ ಎಂದಿದೆ.
Recommended Video
ಕೊರೊನಾವೈರಸ್ ಪಿಡುಗನ್ನು ಜಗತ್ತು ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಅಂತ್ಯಗೊಳಿಸಲು ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧನೊಮ್ ಘೆಬ್ರೆಯಿಸಸ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1918ರಲ್ಲಿ ಕಾಣಿಸಿಕೊಂಡಿದ್ದ ಸ್ಪ್ಯಾನಿಶ್‌ನಿಂದಲೂ ವೇಗವಾಗಿ ಈ ವೈರಸ್ ಹರಡಲು ಜಾಗತೀಕರಣ ಅವಕಾಶ ನೀಡಿದೆ. ಆದರೆ ಶತಮಾನದ ಹಿಂದೆ ಇರದ ತಂತ್ರಜ್ಞಾನಗಳು ಈಗ ನಮ್ಮ ಬಳಿ ಇವೆ. ವೈರಸ್ ನಿಯಂತ್ರಣಕ್ಕೆ ಈ ತಂತ್ರಜ್ಞಾನಗಳು ಸಹಕಾರಿಯಾಗಲಿವೆ ಎಂದಿದ್ದಾರೆ.
ಮೊದಲನೆಯ ವಿಶ್ವಯುದ್ಧದಲ್ಲಿ ಸತ್ತಿದ್ದವರಿಗಿಂತಲೂ ಐದು ಪಟ್ಟು ಹೆಚ್ಚು ಜನರನ್ನು ಸ್ಪ್ಯಾನಿಶ್ ಫ್ಲೂ ಬಲಿತೆಗೆದುಕೊಂಡಿತ್ತು. ಮೊದಲ ಐದು ಮಂದಿ ಅಮೆರಿಕದಲ್ಲಿ ಮೃತಪಟ್ಟಿದ್ದರೆ, ಕ್ರಮೇಣ ಯುರೋಪ್‌ಗೆ ಹರಡಿ ಬಳಿಕ ಇಡೀ ಜಗತ್ತಿಗೆ ವ್ಯಾಪಿಸಿತ್ತು. ಮುಂದೆ ಓದಿ.

ಎರಡು ವರ್ಷದೊಳಗೆ ಅಂತ್ಯ
'ಈ ಪಿಡುಗನ್ನು ಎರಡು ವರ್ಷಗಳ ಒಳಗೆ ಅಂತ್ಯಗೊಳಿಸುವ ವಿಶ್ವಾಸವಿದೆ. ನಮ್ಮ ಪ್ರಯತ್ನಗಳನ್ನು ಒಗ್ಗೂಡಿಸಿದರೆ ಇದು ಸಾಧ್ಯವಿದೆ' ಎಂದು ಹೇಳಿದ್ದಾರೆ. 1918ರಲ್ಲಿ ವ್ಯಾಪಿಸಿದ್ದ ಮಾರಣಾಂತಿಕ ಫ್ಲೂಗಿಂತಲೂ ತ್ವರಿತವಾಗಿ ಲಭ್ಯವಿರುವ ಸಲಕರಣೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡು ನಾವಲ್ ಕೊರೊನಾ ವೈರಸ್ ಅನ್ನು ನಿಯಂತ್ರಿಸಬಹುದಾಗಿದೆ ಎಂದಿದ್ದಾರೆ.

ಸೋಂಕು ಹರಡಲು ಅವಕಾಶ
ಆ ಕಾಲಘಟ್ಟಕ್ಕೆ ಹೋಲಿಸಿದರೆ ಕೊರೊನಾ ವೈರಸ್‌ನ ಈ ಸಮಯದಲ್ಲಿ ಅನೇಕ ಅನನುಕೂಲತೆಗಳಿವೆ. ಜಾಗತೀಕರಣ, ಜನಸಂಖ್ಯೆ, ಸಂಪರ್ಕ ಮುಂತಾದವು ನಾವಲ್ ಕೊರೊನಾ ವೈರಸ್ ಜಗತ್ತಿನಾದ್ಯಂತ ಮಿಂಚಿನ ವೇಗದಲ್ಲಿ ಪಸರಿಸಲು ಅವಕಾಶ ನೀಡಿವೆ ಎಂದು ಹೇಳಿದ್ದಾರೆ.

ಈಗ ಹೆಚ್ಚು ತಂತ್ರಜ್ಞಾನವಿದೆ
ಆದರೆ ಜಗತ್ತು ಆಗಿನ ಸಂದರ್ಭಕ್ಕಿಂತಲೂ ಉತ್ತಮ ತಂತ್ರಜ್ಞಾನದ ಸೌಲಭ್ಯ ಕೂಡ ಹೊಂದಿದೆ. ಆರೋಗ್ಯ ಕ್ಷೇತ್ರದಲ್ಲಿ ಲಭ್ಯವಿರುವ ತಂತ್ರಜ್ಞಾನಗಳು, ಲಸಿಕೆಯಂತಹ ಹೆಚ್ಚುವರಿ ಸವಲತ್ತುಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವ ಮೂಲಕ ನಾವು 1918ರ ಫ್ಲೂಗಿಂತಲೂ ಬೇಗನೆ ಕೊರೊನಾ ವೈರಸ್‌ಅನ್ನು ಅಂತ್ಯಗೊಳಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

50 ಮಿಲಿಯನ್ ಜನರು ಬಲಿ
ಕೊರೊನಾ ವೈರಸ್ ಸೋಂಕು ಇದುವರೆಗೂ ಜಾಗತಿಕ ಮಟ್ಟದಲ್ಲಿ ಸುಮಾರು 8,00,000 ಜನರನ್ನು ಬಲಿ ತೆಗೆದುಕೊಂಡಿದೆ. 23 ಮಿಲಿಯನ್ ಜನರು ಸೋಂಕಿಗೆ ಒಳಗಾಗಿದ್ದಾರೆ. ಆದರೆ ಆಧುನಿಕ ಜಗತ್ತಿನಲ್ಲಿ ಅತ್ಯಂತ ಮಾರಣಾಂತಿಕ ಸೋಂಕಿನ ಪಿಡುಗು ಎಂದು 1918ರ ಸ್ಪ್ಯಾನಿಶ್ ಫ್ಲೂ ಅನ್ನು ಪರಿಗಣಿಸಲಾಗಿದೆ. 1918ರ ಫೆಬ್ರವರಿಯಿಂದ 2020ರ ಏಪ್ರಿಲ್‌ವರೆಗೆ ಜಗತ್ತಿನ 500 ಮಿಲಿಯನ್‌ಗೂ ಹೆಚ್ಚು ಮಂದಿ ಇದಕ್ಕೆ ತುತ್ತಾಗಿದ್ದು, ಸುಮಾರು 50 ಮಿಲಿಯನ್ ಮಂದಿ ಜೀವ ಕಳೆದುಕೊಂಡಿದ್ದಾರೆ.












Click it and Unblock the Notifications