ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ಕಾಳಗ; 500 ಜನರ ಸಾವು
ಜೆರುಸಲೇಂ, ಅಕ್ಟೋಬರ್ 08; ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಕಾಳಗದಲ್ಲಿ ಎರಡು ಕಡೆಯ ಸುಮಾರು 500 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಬಂಡುಕೋರರು 200 ರಾಕೆಟ್‌ಗಳನ್ನು ಹಾರಿಸಿದ್ದಾರೆ ಎಂದು ಇಸ್ರೇಲ್ ಹೇಳಿದೆ.
ಹಮಾಸ್ ಬಂಡುಕೋರರು ಶನಿವಾರ ಮುಂಜಾನೆಯಿಂದ ಇಸ್ರೇಲ್ ಗಡಿಯ ಗಾಜಾಪಟ್ಟಿಯಿಂದ ಇಸ್ರೇಲ್ ಮೇಲೆ ದಾಳಿಗಳನ್ನು ನಡೆಸುತ್ತಿದ್ದಾರೆ. ಗಡಿಯಲ್ಲಿ ಹಲವಾರು ಇಸ್ರೇಲ್ ಯೋಧರನ್ನು ಅಪಹರಣ ಮಾಡಲಾಗಿದೆ ಎಂದು ಇಸ್ರೇಲ್ ತಿಳಿಸಿದೆ.

ಇಸ್ರೇಲ್ ನಡೆಸಿರುವ ಪ್ರತಿದಾಳಿಯಲ್ಲಿ ಸುಮಾರು 250 ಜನರು ಸಾವನ್ನಪ್ಪಿದ್ದು, 1,500 ಜನರು ಗಾಯಗೊಂಡಿದ್ದಾರೆ. ಗಾಜಾಪಟ್ಟಿ ಸಮೀಪ 232 ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲಿಸ್ಟೇನ್ ಆರೋಗ್ಯ ಸಚಿವಾಲಯ ಮಾಧ್ಯಮಗಳಿಗೆ ಹೇಳಿದೆ.
ಗಾಜಾಪಟ್ಟಿಯಿಂದ ಹಮಾಸ್ ಬಂಡುಕೋರರು ಶನಿವಾರ ಮುಂಜಾನೆ ಇಸ್ರೇಲ್ ಮೇಲೆ ದಿಢೀರ್ ದಾಳಿಯನ್ನು ಆರಂಭಿಸಿದರು. ರಾಕೆಟ್‌ಗಳನ್ನು ಹಾರಿಸಿ ಬಿಟ್ಟರು. ಗಾಜಾಪಟ್ಟಿ ಮತ್ತು ಇಸ್ರೇಲ್ ನಡುವಿನ ಗಡಿಯ ಬೇಲಿಯನ್ನು ಮುರಿದು ಒಳ ನುಗ್ಗಿದರು. ನಾಗರಿಕರ ಮೇಲೆ ಗುಂಡಿನ ದಾಳಿಯನ್ನು ನಡೆಸಿದರು.
ವಿಡಿಯೋಗಳು ವೈರಲ್; ಹಮಾಸ್ ಬಂಡುಕೋರರು ದಾಳಿ ನಡೆಸುತ್ತಿರುವ, ಜನರನ್ನು ಅಪಹರಣ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬಂಡುಕೋರರ ದಾಳಿಯ ಬಳಿಕ ಇಸ್ರೇಲ್ ಸಹ ಪ್ರತಿದಾಳಿ ಆರಂಭಿಸಿತು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಮಾಸ್ ಬಂಡುಕೋರರು ಇಸ್ರೇಲ್ ತೊರೆಯಬೇಕು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ಹಮಾಸ್ ನಿಯೋಜಿಸಿರುವ, ಅಡಗಿಕೊಂಡು ಕಾರ್ಯ ನಿರ್ವಹಣೆ ಮಾಡುತ್ತಿರುವ ಎಲ್ಲಾ ಸ್ಥಳಗಳನ್ನು ನಾವ ಅವಶೇಷಗಳಾಗಿ ಮಾಡುತ್ತೇವೆ" ಎಂದು ಹೇಳಿದ್ದಾರೆ.
'ಇಂತಹ ಕಠಿಣ ಪರಿಸ್ಥಿತಿಯಲ್ಲಿ ಇಸ್ರೇನ್‌ನ ನಾಗರಿಕರ ಜೊತೆ ನಾವು ನಿಲ್ಲುತ್ತೇವೆ. ಈ ಯುದ್ಧ ಬಹಳಷ್ಟು ಸಮಯ ತೆಗೆದುಕೊಳ್ಳಲಿದೆ. ಸವಾಲಿನ ದಿನಗಳು ನಮ್ಮ ಮುಂದಿವೆ. ಗಾಜಾ ನಿವಾಸಿಗಳಿಗೆ ನಾನು ಈಗಲೇ ಹೊರಟು ಬಿಡಿ ಎಂದು ಹೇಳುತ್ತೇನೆ. ಇಲ್ಲವಾದಲ್ಲಿ ನಾವು ಬಲವಂತವಾಗಿ ಕಾರ್ಯ ನಿರ್ವಹಣೆ ಮಾಡುತ್ತೇವೆ' ಎಂದು ಪ್ರಧಾನಿ ತಿಳಿಸಿದ್ದಾರೆ.
ಎರಡು ಕಡೆಯ ದಾಳಿಗಳ ಬಳಿಕ ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ಸಂಘರ್ಷ ಯುದ್ಧದ ಸ್ವರೂಪ ಪಡೆದಿದೆ. ಇದು ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಇಸ್ರೇಲ್‌ನ ಹಲವು ಸೈನಿಕರು, ನಾಗರಿಕರನ್ನು ಹಮಾಸ್ ಬಂಡುಕೋರರು ಗಾಜಾದಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ.
ಇಸ್ರೇಲ್‌ನಲ್ಲಿ ಶನಿವಾರ ಯೆಹೂದಿಗಳ ಯಾಮ್ ಕಿಪ್ಪುರ್ ಹಬ್ಬಕ್ಕೆ ರಜೆ ಇತ್ತು. ಆದರೆ ನಸುಕಿನ ಜಾವ ಗಾಜಾದಿಂದ ಬಂಡುಕೋರರು ದಾಳಿಯನ್ನು ಆರಂಭಿಸಿದರು. ಇಸ್ರೇನ್‌ನ ದಕ್ಷಿಣ ಭಾಗದ ಮೂಲಕ ಹಮಾಸ್ ಬಂಡುಕೋರರು ಒಳ ನುಸುಳಿದ್ದಾರೆ. ವಾಯು, ಭೂ ಮಾರ್ಗದ ಮೂಲಕ ದಾಳಿಗಳನ್ನು ನಡೆಸುತ್ತಿದ್ದಾರೆ.
ಹಮಾಸ್ ಬಂಡುಕೋರರ ಉಪ ಮುಖ್ಯಸ್ಥ ಸಲೇಹ್ ಅಲ್ ಅರೌರಿ 'ಅಲ್ ಜಝೀರಾ' ಸುದ್ದಿ ವಾಹಿನಿ ಜೊತೆ ಮಾತನಾಡಿದ್ದು, "ಪ್ಯಾಲೆಸ್ಟೀನಿಯರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಇಸ್ರೇಲ್ ಅನ್ನು ಒತ್ತಾಯಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳು ಸೇರಿ ಇಸ್ರೇಲ್‌ನ ಹಲವರನ್ನು ಒತ್ತೆಯಾಗಿ ಇರಿಸಿಕೊಂಡಿದ್ದೇವೆ" ಎಂದು ಹೇಳಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವೆ ಹಲವಾರು ವರ್ಷಗಳಿಂದ ಸಂಘರ್ಷ ನಡೆಯುತ್ತಲೇ ಇದೆ. 2007ರ ಗಾಜಾ ಕದನ ಬಳಿಕ ಹಮಾಸ್ ಪಡೆಗಳು ಗಾಜಾದಲ್ಲಿ ಅಧಿಕಾರ ಸ್ಥಾಪನೆ ಮಾಡಿವೆ.
ಪ್ಯಾಲೆಸ್ಟೀನಿ ಸುನ್ನಿ ಇಸ್ಲಾಮಿಕ್ ಮೂಲಭೂತವಾದಿ ಬಂಡುಕೋರರ ಸಂಘಟನೆಯಾದ ಹಮಾಸ್ 1987ರಲ್ಲಿ ನಡೆದ ಪ್ರಥಮ ಪ್ಯಾಲೆಸ್ಟೀನಿಯನ್ನರ ದಂಗೆಯ ಸಮಯದಲ್ಲಿ ಸ್ಥಾಪನೆಯಾಯಿತು. ಈಜಿಪ್ಟ್‌ನ ಸುನ್ನಿ ಇಸ್ಲಾಂ ಸಂಘಟನೆ ಮುಸ್ಲಿಂ ಬ್ರದರ್ ವುಡ್ ಸಿದ್ಧಾಂತಗಳನ್ನು ಹಮಾಸ್ ಬಂಡುಕೋರರು ಅಳವಡಿಕೆ ಮಾಡಿಕೊಂಡಿದ್ದಾರೆ.












Click it and Unblock the Notifications