ಚಡ್ಡಿ, ಬಿಕಿನಿ, ಚಪ್ಪಲಿ ಮೇಲೆ ಗಣೇಶನ ಚಿತ್ರ, ವಾಲ್‌ಮಾರ್ಟ್‌ಗೆ ಬುದ್ಧಿ ಕಲಿಸಿದ ಹಿಂದೂಗಳು
ಜಾಗತಿಕವಾಗಿ ಪ್ರಖ್ಯಾತಿ ಪಡೆದಿರುವ ರಿಟೇಲ್ ಮಾರುಕಟ್ಟೆಯ ದೈತ್ಯ ವಾಲ್‌ಮಾರ್ಟ್ (Wallmart) ಸಂಸ್ಥೆಯು ಇದೀಗ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದೂ ದೇವರಾದ ಗಣೇಶನ ಭಾವಚಿತ್ರವಿರುವ ಬಿಕಿನಿ, ಚಪ್ಪಲಿ, ಚಡ್ಡಿ ಸೇರಿದಂತೆ ತರಹೇವಾರಿ ಒಳಒಡುಪುಗಳು ಹಾಗೂ ಚಪ್ಪಲಿಗಳನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಟ್ಟಿತ್ತು. ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹಲವರು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂದು ವಾಲ್‌ಮಾರ್ಟ್ ವಿರುದ್ಧ ತಿರುಗಿಬಿದ್ದಿದ್ದಾರೆ. ಹಿಂದೂಗಳ ಪವಿತ್ರ ದೇವತೆ ಗಣೇಶನನ್ನು ಒಳಗೊಂಡ ಇಂತಹ ಉತ್ಪನ್ನಗಳನ್ನು ಮಾರಾಟ ಮಾಡುವ ವಾಲ್‌ಮಾರ್ಟ್‌ನ ಬಗ್ಗೆ ವಿಶ್ವದಾದ್ಯಂತ ಆಕ್ರೋಶ ಭುಗಿಲೆದ್ದಿದೆ.

ವಾಲ್‌ಮಾರ್ಟ್ ಮಾರಾಟ ಮಾಡುತ್ತಿರುವ ಚಪ್ಪಲಿಗಳು ಮತ್ತು ಒಳ ಉಡುಪುಗಳ ಮೇಲೆ ಪೂಜ್ಯ ಹಿಂದೂ ದೇವರಾದ ಗಣೇಶನನ್ನು ಚಿತ್ರಿಸಲಾಗಿದೆ. ಈ ಬಗ್ಗೆ ಹಿಂದೂ ಸಮುದಾಯ ತೀವ್ರ ಕಳವಳ ವ್ಯಕ್ತಪಡಿಸಿದೆ. ಇದು ವಾಲ್‌ಮಾರ್ಟ್‌ನ ಸಂಪೂರ್ಣ ನಿರ್ಲಕ್ಷ್ಯ ಹಾಗೂ ಹಿಂದೂ ದೇವರುಗಳು, ಹಿಂದೂ ಭಾವನೆಗಳ ಮೇಲಿನ ಅಗೌರವಕ್ಕೆ ಹಿಡಿದ ಕನ್ನಡಿ ಎಂದು ಕಿಡಿಕಾರಿದ್ದಾರೆ.
ಇನ್ನು ವಾಲ್‌ಮಾರ್ಟ್ ಗಣೇಶನ ಚಿತ್ರವನ್ನು ಹೊಂದಿರುವ ಬರೋಬ್ಬರಿ 74 ರೀತಿಯ ಒಳ ಉಡುಪುಗಳನ್ನು ಮಾರಾಟ ಮಾಡುತ್ತಿದ್ದು ಇದರ ವಿರುದ್ಧ ಅಮೇರಿಕಾದಲ್ಲಿ ಹಿಂದೂಗಳು ಆಕ್ರೋಶ ಹೊರಹಾಕಿ ಪ್ರತಿಭಟನೆ ಕೂಡ ನಡೆಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಲವರು ಬಾಯ್ಕಾಟ್ ವಾಲ್‌ಮಾರ್ಟ್ ಎನ್ನುವ ಅಭಿಯಾನವನ್ನೂ ಶುರು ಮಾಡಿದ್ದಾರೆ.

ಜಾಗತಿಕವಾಗಿ ಈ ವಸ್ತುಗಳ ವಿರುದ್ಧ ಖಂಡನೆ ವ್ಯಕ್ತವಾದ ಬೆನ್ನಲ್ಲೇ ವಾಲ್‌ಮಾರ್ಟ್ ಯೂಟರ್ನ್ ಹೊಡೆದಿದೆ. ತನ್ನ ವೆಬ್‌ಸೈಟ್‌ನಿಂದ ಗಣೇಶನ ಚಿತ್ರವಿದ್ದ ಈ ಚಪ್ಪಲಿ, ಬಿಕಿನಿ, ಚಡ್ಡಿ ಸೇರಿದಂತೆ ಇನ್ನಿತರ ವಸ್ತುಗಳನ್ನು ತೆಗೆದುಹಾಕಿರುವುದಾಗಿ ತಿಳಿಸಿದೆ. ಈ ಅಚಾತುರ್ಯಕ್ಕೆ ಕ್ಷಮೆಯನ್ನೂ ಕೇಳಿದೆ ಎಂದು ವರದಿಯಾಗಿದೆ.
ವಾಲ್‌ಮಾರ್ಟ್ ಶುಕ್ರವಾರದಂದು ಗಣೇಶನ ಚಿತ್ರವಿರುವ ಪಾದರಕ್ಷೆಗಳು ಮತ್ತು ಒಳ ಉಡುಪುಗಳನ್ನು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದ ನಂತರ ಭಾರಿ ವಿವಾದ ಸೃಷ್ಟಿಯಾಯಿತು. ಪಾದರಕ್ಷೆಗಳು ಮತ್ತು ಒಳ ಉಡುಪುಗಳ ಮೇಲೆ ಹಿಂದೂ ದೇವರ ಚಿತ್ರಣವನ್ನು ಅಸಹ್ಯಕರವಾಗಿ ಬಳಸಿರುವುದು ಹಿಂದೂ ಸಮುದಾಯದ ಕೋಪಕ್ಕೆ ಕಾರಣವಾಯಿತು. ಹಿಂದೂ ಭಾವನೆಗಳನ್ನು ಅಪಹಾಸ್ಯ ಮಾಡಿದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಾಲ್‌ಮಾರ್ಟ್ ವಿರುದ್ಧ ಖಂಡನೆ ವ್ಯಕ್ತಪಡಿಸಿದರು.
Hindus worldwide are outraged at Walmart's negligence on selling products featuring Hindu sacred deity Ganesha.
— INSIGHT UK (@INSIGHTUK2) December 6, 2024
Lord Ganesha, a highly revered Hindu god, is featured on products like slippers and knickers that @Walmart is selling.
Hindu community is extremely concerned about… pic.twitter.com/m6JEZfbp9Q
ಹಿಂದೂ ಕಾರ್ಯಕರ್ತ ರಾಜಮ್ ಝೆಡ್ ಕೂಡ ಹಿಂದೂ ದೇವತೆಯ ಅವಹೇಳನಕಾರಿ ಚಿತ್ರಣವನ್ನು ತೆಗೆದುಹಾಕುವಂತೆ ಕೋರಿ ಅಮೆರಿಕದ ರಿಟೇಲ್ ಕಾರ್ಪೊರೇಷನ್‌ಗೆ ತೆರಳಿ ತಾಕೀತು ಮಾಡಿದ್ದರು. ವಾಲ್‌ಮಾರ್ಟ್ ಯಾವುದೇ ಧಾರ್ಮಿಕ ನಂಬಿಕೆಯ ಚಿಹ್ನೆಗಳು, ದೊಡ್ಡ ಅಥವಾ ಚಿಕ್ಕದಾಗಿ ಆದರೂ ಸರಿ ಇಂತಹ ಕೆಲಸ ಮಾಡಕೂಡದು ಎಂದು ಎಚ್ಚರಿಕೆ ನೀಡಿದ್ದರು.
ಹಿಂದೂ ಜಾಗೃತಿ ಸಂಘಟನೆಯು ಅತ್ಯಂತ ಪೂಜ್ಯ ಹಿಂದೂ ದೇವರಾದ ಶ್ರೀ ಗಣೇಶನನ್ನು ಒಳ ಉಡುಪುಗಳು, ಬಾಕ್ಸರ್‌ಗಳು, ಸಾಕ್ಸ್, ಚಪ್ಪಲಿಗಳು ಇತ್ಯಾದಿಗಳ ಮೇಲೆ ಚಿತ್ರಿಸುವುದು ಪ್ರಪಂಚದಾದ್ಯಂತದ ಹಿಂದೂಗಳಿಗೆ ತೋರಿರುವ ಅಗೌರವ ಎಂದು ಖಂಡಿಸಿತ್ತು. ಇನ್ನು ಈ ಬಗ್ಗೆ ವ್ಯಾಪಕ ಆಕ್ರೋಶ ಕೇಳಿಬಂದ ಹಿನ್ನೆಲೆ ವಾಲ್‌ಮಾರ್ಟ್ ಕ್ಷಮೆಯಾಚಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.












Click it and Unblock the Notifications