US Elections 2024: ವೀಸಾ ಅನಿಶ್ಚಿತತೆ: ಜಾಗತಿಕ ಪ್ರತಿಭೆಗಳ ಮೇಲೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಪರಿಣಾಮ
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಇನ್ನೇನು ಕೆಲ ಸಮಯದಲ್ಲಿ ಪ್ರಕಟವಾಗಲಿದೆ. ಆದರೆ, ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಉದ್ಯೋಗ ಆಧಾರದಲ್ಲಿ ಅಮೆರಿಕಾಗೆ ತೆರಳುವುದರ ಮೇಲೆ, ಅದರಲ್ಲೂ ಎಚ್-1ಬಿ ವೀಸಾ ಮೇಲೆ ಗಂಭೀರವಾದ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಒಂದು ವೇಳೆ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏನಾದರೂ ಈ ಬಾರಿ ಮರಳಿ ಅಧ್ಯಕ್ಷರಾಗಿ ಚುನಾಯಿತರಾದರೆ, ಅವರು ತನ್ನ ಹಿಂದಿನ ಅವಧಿಯಲ್ಲಿ ಇದ್ದ ಕಟ್ಟುನಿಟ್ಟಿನ ನಿಯಮಗಳನ್ನು ಮರಳಿ ಜಾರಿಗೆ ತರುವ ಸಾಧ್ಯತೆಗಳು ದಟ್ಟವಾಗಿವೆ ಎಂದು ವರದಿಗಳು ಹೇಳಿವೆ. ಅಂದರೆ, ಟ್ರಂಪ್ ಶ್ವೇತ ಭವನಕ್ಕೆ ಮರಳಿದರೆ, ಎಚ್-1ಬಿ ಮತ್ತು ಎಲ್-1 ವೀಸಾಗಳ ನಿರಾಕರಣೆಯ ದರ ಹೆಚ್ಚಾಗುವ ಸಾಧ್ಯತೆಗಳಿವೆ.

ಎಚ್-1ಬಿ ಮತ್ತು ಎಲ್-1 ವೀಸಾಗಳು ವಿದೇಶೀ ವೃತ್ತಿಪರರಿಗೆ ಅಮೆರಿಕಾದಲ್ಲಿ ಉದ್ಯೋಗಕ್ಕೆ ನೀಡುವ ವೀಸಾಗಳಾಗಿವೆ.
ಎಚ್-1ಬಿ ವೀಸಾ: ಎಚ್-1ಬಿ ವೀಸಾ ಎನ್ನುವುದು ವಿಶೇಷ ಕ್ಷೇತ್ರಗಳಾದ ಐಟಿ, ಇಂಜಿನಿಯರಿಂಗ್ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಕೌಶಲಭರಿತ ವಿದೇಶೀ ಉದ್ಯೋಗಿಗಳಿಗೆ ನೀಡುವ ವೀಸಾ ಆಗಿದೆ. ಇದರ ಮೂಲಕ ಅಮೆರಿಕಾದಲ್ಲಿರುವ ಕಂಪನಿಗಳು ನಿರ್ದಿಷ್ಟ ಪ್ರಮಾಣದ ಪ್ರಾವೀಣ್ಯತೆ ಅಗತ್ಯವಿರುವ ಉದ್ಯೋಗಗಳಿಗೆ ವಿದೇಶೀ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಸಾಧ್ಯವಾಗುತ್ತದೆ.
ಎಲ್-1 ವೀಸಾ: ಅಂತಾರಾಷ್ಟ್ರೀಯ ಸಂಸ್ಥೆಗಳ ಉದ್ಯೋಗಿಗಳು ಅಮೆರಿಕಾದಲ್ಲಿನ ಕಚೇರಿಗೆ ವರ್ಗಾವಣೆಯಾದಾಗ ಎಲ್-1 ವೀಸಾವನ್ನು ಒದಗಿಸಲಾಗುತ್ತದೆ. ವ್ಯವಸ್ಥಾಪಕರು ಮತ್ತು ಕಾರ್ಯನಿರ್ವಾಹಕರ ಹಂತದವರಿಗೆ ಎಲ್-1ಎ ವೀಸಾ ನೀಡಿದರೆ, ವಿಶೇಷ ಜ್ಞಾನ ಹೊಂದಿರುವ ಉದ್ಯೋಗಿಗಳಿಗೆ ಎಲ್-1ಬಿ ವೀಸಾ ನೀಡಲಾಗುತ್ತದೆ.
ಇವೆರಡೂ ವೀಸಾಗಳು ವಿದೇಶೀ ವೃತ್ತಿಪರರಿಗೆ ನಿರ್ದಿಷ್ಟ ಕಾಲಾವಧಿಯ ತನಕ ಅಮೆರಿಕಾಗೆ ತೆರಳಿ, ಅಲ್ಲಿ ವಾಸಿಸುತ್ತಾ ಉದ್ಯೋಗ ನಡೆಸಲು ಅವಕಾಶ ಕಲ್ಪಿಸುತ್ತವೆ.
ಟ್ರಂಪ್ ಅವರ ಮೊದಲನೇ ಅವಧಿಯಲ್ಲಿ, ಎಚ್-1ಬಿ ವೀಸಾದ ನಿರಾಕರಣೆಯ ದರ 4%ದಿಂದ 17%ಗೆ ಹೆಚ್ಚಳ ಕಂಡಿತ್ತು. ಎಲ್-1 ವೀಸಾಗಳ ನಿರಾಕರಣಾ ದರ 12%ದಿಂದ 28%ಗೆ ಏರಿತ್ತು. ಟ್ರಂಪ್ ಅಧಿಕಾರಕ್ಕೆ ಮರಳಿದರೆ, ಈ ಸನ್ನಿವೇಶ ಮತ್ತೊಮ್ಮೆ ತಲೆದೋರಿ, ಕೌಶಲಯುತ ಉದ್ಯೋಗಿಗಳನ್ನು ಅಮೆರಿಕಾಗೆ ತರಲು ಈ ವೀಸಾಗಳ ಮೇಲೆ ಬಹುತೇಕ ಅವಲಂಬನೆ ಹೊಂದಿರುವ ಐಟಿ ಕಂಪನಿಗಳ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ.
ತನ್ನ ಮೊದಲನೇ ಅವಧಿಯಲ್ಲಿ, ಡೊನಾಲ್ಡ್ ಟ್ರಂಪ್ ಅವರು 'ಬೈ ಅಮೆರಿಕನ್, ಹೈರ್ ಅಮೆರಿಕನ್' (ಅಮೆರಿಕಾದ ವಸ್ತುಗಳನ್ನು ಖರೀದಿಸಿ, ಅಮೆರಿಕನ್ನರನ್ನು ಉದ್ಯೋಗಕ್ಕೆ ನೇಮಿಸಿ) ಎಂಬ ಆದೇಶವನ್ನು ನೀಡಿದ್ದರು. ಇದರ ಪರಿಣಾಮವಾಗಿ, ಎಚ್-1ಬಿ ವೀಸಾ ಮೇಲೆ ಇನ್ನೂ ಹೆಚ್ಚಿನ ನಿರ್ಬಂಧಗಳು ಹೇರಲ್ಪಟ್ಟವು.
ಟ್ರಂಪ್ ಅವರ ಮೊದಲ ಅಧ್ಯಕ್ಷೀಯ ಅವಧಿಯ ಬಳಿಕ, ಈಗ ಅಮೆರಿಕಾದಲ್ಲಿ ಹಲವಾರು ಬದಲಾವಣೆಗಳು ಉಂಟಾಗಿವೆ. ಬಹಳಷ್ಟು ಐಟಿ ಕಂಪನಿಗಳು ಈಗ ಎಚ್-1ಬಿ ವೀಸಾ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿವೆ. ಮೊದಲು ಉದ್ಯೋಗಿಗಳಿಗೆ ಎಚ್-1ಬಿ ವೀಸಾ ಅವಶ್ಯಕತೆ 65% ಇದ್ದರೆ, ಇತ್ತೀಚಿನ ವರ್ಷಗಳಲ್ಲಿ ಅದು 50%ಗೂ ಕಡಿಮೆಯಾಗಿದೆ.
ಈ ಬದಲಾವಣೆಗಳು ಐಟಿ ಕಂಪನಿಗಳನ್ನು ಹೆಚ್ಚಿನ ವೀಸಾ ನಿರಾಕರಣೆಯಿಂದ ರಕ್ಷಿಸುತ್ತವೆ. ಇದಕ್ಕಾಗಿ ಕಂಪನಿಗಳು ಹೆಚ್ಚು ಅಮೆರಿಕನ್ ಉದ್ಯೋಗಿಗಳನ್ನು ನೇಮಿಸಿಕೊಂಡಿವೆ.
ಟ್ರಂಪ್ ಆಡಳಿತ ಎಚ್-1ಬಿ ವೀಸಾ ಆಧಾರಿತ ಉದ್ಯೋಗಿಗಳಿಗೆ ಕನಿಷ್ಠ ವೇತನವನ್ನು ಬಹಳಷ್ಟು ಹೆಚ್ಚಿಸಿದ್ದು, ಇದರ ಪರಿಣಾಮವಾಗಿ ಕಂಪನಿಗಳಿಗೆ ಎಚ್-1ಬಿ ವೀಸಾ ಹೊಂದಿರುವವರಿಗೆ ಉದ್ಯೋಗ ನೀಡುವುದು ಹೆಚ್ಚು ವೆಚ್ಚದಾಯಕವಾಗಿದೆ.
ನ್ಯಾಯಾಲಯಗಳು ಈ ನೀತಿಗಳನ್ನು ತಡೆದಿವೆಯಾದರೂ, ಒಂದು ವೇಳೆ ಟ್ರಂಪ್ ಅಧಿಕಾರಕ್ಕೆ ಮರಳಿದರೆ ಈ ಕಾನೂನುಗಳು ಮರಳಿ ಬರುವ ಸಾಧ್ಯತೆಗಳಿವೆ. ಪ್ರಸ್ತುತ ಎಚ್-1ಬಿ ವೀಸಾ ಸಂಬಳಗಳು ಸರಾಸರಿ ವೇತನಕ್ಕೆ ಹೋಲಿಸಿದರೆ 25-35% ಹೆಚ್ಚಾಗಿವೆ. ಆದ್ದರಿಂದ ಈ ಉದ್ಯೋಗಿಗಳು ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಾರೆ ಎಂದು ವಾದಿಸಲು ಸಾಧ್ಯವಿಲ್ಲ.
ವರದಿಗಳ ಪ್ರಕಾರ, ಒಂದು ವೇಳೆ ಟ್ರಂಪ್ ಮತ್ತೊಮ್ಮೆ ಅಮೆರಿಕಾ ಅಧ್ಯಕ್ಷರಾಗಿ ಚುನಾಯಿತರಾದರೆ, ಆರಂಭದಲ್ಲಿ ಅದು ಋಣಾತ್ಮಕವಾಗಿ ಕಂಡುಬಂದರೂ, ಭಾರತೀಯ ಐಟಿ ಕಂಪನಿಗಳ ಮೇಲೆ ಅದರಿಂದ ಅಂತಹ ಪರಿಣಾಮ ಉಂಟಾಗುವ ಸಾಧ್ಯತೆಗಳಿಲ್ಲ. ಒಂದು ವೇಳೆ ಕಮಲಾ ಹ್ಯಾರಿಸ್ ಅವರು ಅಧ್ಯಕ್ಷರಾದರೆ, ಅಮೆರಿಕಾದ ಪರಿಸ್ಥಿತಿ ಈಗಿರುವ ರೀತಿಯಲ್ಲೇ ಮುಂದುವರಿಯಲಿದೆ.
ಎರಡೂ ಪಕ್ಷಗಳು ಬೆಂಬಲಿಸಿರುವ ಮಸೂದೆಗಳ ಆಧಾರದಲ್ಲಿ ಹೊಸ ಕಾನೂನುಗಳು ಚರ್ಚಿಸಲ್ಪಡುತ್ತಿದ್ದು, ಕೌಶಲಯುತ ಉದ್ಯೋಗಿಗಳು ಭವಿಷ್ಯದಲ್ಲಿ ಹೇಗೆ ಅಮೆರಿಕಾಗೆ ಬರಬಹುದು ಎನ್ನುವುದರ ಮೇಲೆ ಪರಿಣಾಮ ಬೀರಲಿವೆ.
2024 ಚುನಾವಣೆ ಮತ್ತು ಎಸ್‌ಟಿಇಎಂ: ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಸಂಶೋಧನಾ ಹೂಡಿಕೆಯಲ್ಲಿ ಬದಲಾವಣೆ
ಅಮೆರಿಕಾದ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಹೂಡಿಕೆ, ಅದರಲ್ಲೂ ಎಸ್‌ಟಿಇಎಂ (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ) ಕ್ಷೇತ್ರಗಳಲ್ಲಿನ ಹೂಡಿಕೆ ಪ್ರಮುಖ ಚರ್ಚಾ ವಿಚಾರವಾಗಿದೆ. ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರು ಈ ವಿಚಾರದಲ್ಲಿ ವಿಭಿನ್ನ ಧೋರಣೆಗಳನ್ನು ಹೊಂದಿದ್ದು, ಉನ್ನತ ಶಿಕ್ಷಣ ಮತ್ತು ಎಸ್‌ಟಿಇಎಂ ಕಾರ್ಯಕ್ರಮಗಳ ಭವಿಷ್ಯ ಈಗ ಅನಿಶ್ಚಿತವಾಗಿದೆ.
ಅಮೆರಿಕಾದ ವಿಶ್ವವಿದ್ಯಾಲಯಗಳು ತಮ್ಮ ಸಂಶೋಧನೆ, ನಾವೀನ್ಯತೆ, ಮತ್ತು ತರಬೇತಿಗಾಗಿ ಪ್ರಪಂಚದಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ತಮ್ಮತ್ತ ಸೆಳೆಯುತ್ತಿದ್ದು, ಇದಕ್ಕಾಗಿ ಫೆಡರಲ್ ಹೂಡಿಕೆಯ ಮೇಲೆ ಅವಲಂಬಿತವಾಗಿವೆ. ಆದರೆ, 2024ರ ಚುನಾವಣೆ ಈ ಶೈಕ್ಷಣಿಕ ಬೆಂಬಲ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತರುವ ಸಾಧ್ಯತೆಗಳಿವೆ.
ಫೆಡರಲ್ ಫಂಡಿಂಗ್ ಎಂದರೆ ಅಮೆರಿಕಾ ಸರ್ಕಾರ ವಿಶ್ವವಿದ್ಯಾಲಯಗಳು, ನಿರ್ದಿಷ್ಟ ಯೋಜನೆಗಳು ಮತ್ತು ಕಾರ್ಯಕ್ರಮಗಳು, ಸಂಶೋಧನೆಗಳು, ಶಿಕ್ಷಣ, ಮತ್ತು ಸಾರ್ವಜನಿಕ ಸೇವೆಗಳಿಗೆ ಒದಗಿಸುವ ಹಣವಾಗಿದೆ.
ಟ್ರಂಪ್ ಅಥವಾ ಕಮಲಾ ಹ್ಯಾರಿಸ್ ಆಡಳಿತ ಜಾರಿಗೆ ತರುವ ನೀತಿಗಳು ಫೆಡರಲ್ ಅನುದಾನಗಳು, ವಿದ್ಯಾರ್ಥಿ ವೇತನಗಳು, ಸಂಶೋಧನಾ ಅನುದಾನಗಳು, ಮತ್ತು ಅಂತಾರಾಷ್ಟ್ರೀಯ ಎಸ್‌ಟಿಇಎಂ ವಿದ್ಯಾರ್ಥಿಗಳ ವೀಸಾ ನಿಯಮಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಗಳಿವೆ.
ಎಸ್‌ಟಿಇಎಂ ಶಿಕ್ಷಣ ಮತ್ತು ಸಂಶೋಧನೆಗಳು ಅಮೆರಿಕಾದ ಆರ್ಥಿಕತೆ ಮತ್ತು ಭದ್ರತೆಗೆ ಮುಖ್ಯವಾಗಿರುವುದರಿಂದ, ಸಾಂಪ್ರದಾಯಿಕವಾಗಿ ಎರಡೂ ರಾಜಕೀಯ ಪಕ್ಷಗಳು ಅದಕ್ಕೆ ಬೆಂಬಲ ನೀಡುತ್ತಾ ಬಂದಿದ್ದವು.
ಎಸ್‌ಟಿಇಎಂ ವಲಯ ತಂತ್ರಜ್ಞಾನ, ಆರೋಗ್ಯ, ಮೂಲಸೌಕರ್ಯ, ಮತ್ತು ರಕ್ಷಣಾ ಕ್ಷೇತ್ರಗಳಲ್ಲಿನ ಪ್ರಗತಿಗೆ ಪೂರಕವಾಗಿದ್ದು, ಈ ಕ್ಷೇತ್ರಗಳು ಪ್ರಪಂಚದೊಡನೆ ಅಮೆರಿಕಾ ಸ್ಪರ್ಧಿಸಲು ನೆರವಾಗುತ್ತವೆ.
ಸಾಮಾನ್ಯವಾಗಿ ಎಸ್‌ಟಿಇಎಂ ಕಾರ್ಯಕ್ರಮಗಳಿಗೆ ಅನುದಾನ ನ್ಯಾಷನಲ್ ಸೈನ್ಸ್ ಫೌಂಡೇಷನ್ (ಎನ್ಎಸ್ಎಫ್), ರಕ್ಷಣಾ ಇಲಾಖೆ (ಡಿಒಡಿ), ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್ಐಎಚ್) ಹಾಗೂ ಅಂತಹ ಇತರ ಏಜೆನ್ಸಿಗಳಿಂದ ಲಭಿಸುತ್ತದೆ.
ಆದರೆ, ಪ್ರತಿಯೊಂದು ಪಕ್ಷದ ಆದ್ಯತೆಗಳೂ ಈ ಅನುದಾನದ ವಿನಿಯೋಗ ಹೇಗೆ ನಡೆಯುತ್ತದೆ ಎನ್ನುವುದರಲ್ಲಿ ಭಾರೀ ಬದಲಾವಣೆಗಳನ್ನು ತರಬಲ್ಲವು. ಡೆಮಾಕ್ರಟಿಕ್ ಪಕ್ಷ ಸಾಮಾನ್ಯವಾಗಿ ಹವಾಮಾನ ವಿಜ್ಞಾನ, ಹಸಿರು ತಂತ್ರಜ್ಞಾನ, ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿನ ಸಂಶೋಧನೆಗೆ ಅನುದಾನ ನೀಡುವುದನ್ನು ಬೆಂಬಲಿಸುತ್ತವೆ.
ಆದರೆ ಇನ್ನೊಂದೆಡೆ, ರಿಪಬ್ಲಿಕನ್ ಪಕ್ಷ ರಾಷ್ಟ್ರೀಯ ಭದ್ರತೆ, ರಕ್ಷಣಾ ತಂತ್ರಜ್ಞಾನ, ಹಾಗೂ ಉದ್ಯೋಗ ಸೃಷ್ಟಿ ಮತ್ತು ತಂತ್ರಜ್ಞಾನ ಉದ್ಯಮಗಳ ಮೇಲೆ ಗಮನ ಹರಿಸುತ್ತವೆ.
2024ರ ಚುನಾವಣಾ ಫಲಿತಾಂಶದ ಆಧಾರದ ಮೇಲೆ, ಶೈಕ್ಷಣಿಕ ಅನುದಾನದ ಮೇಲೆ ಬದಲಾವಣೆ ತರಲಿದ್ದು, ಎಸ್‌ಟಿಇಎಂ ಕ್ಷೇತ್ರದೊಳಗೆ ಯಾವುದಕ್ಕೆ ಹೆಚ್ಚಿನ ಗಮನ ಮತ್ತು ಬೆಂಬಲ ಸಿಗಲಿದೆ ಎನ್ನುವುದು ತಿಳಿಯಲಿದೆ.
ಎಸ್‌ಟಿಇಎಂ (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಮತ್ತು ಗಣಿತ ಶಾಸ್ತ್ರ) ಕ್ಷೇತ್ರದಲ್ಲಿ ಉನ್ನತ ಪದವಿ ಹೊಂದಲು ಬಯಸುವ ವಿದ್ಯಾರ್ಥಿಗಳಿಗೆ ಇಂದಿಗೂ ಅಮೆರಿಕಾ ಅತ್ಯಂತ ಆದ್ಯತೆಯ ತಾಣವಾಗಿದೆ. ಅಮೆರಿಕಾದ ಉನ್ನತ ವಿಶ್ವವಿದ್ಯಾಲಯಗಳು ಅತ್ಯುತ್ತಮ ಸಂಶೋಧನಾ ಅವಕಾಶಗಳನ್ನು ಒದಗಿಸುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಆದರೆ, ವಿದ್ಯಾರ್ಥಿಗಳ ವೀಸಾದ ಸುತ್ತಲಿನ ನಿಯಮಗಳು, ಆರ್ಥಿಕ ಬೆಂಬಲ ಹಾಗೂ ಅಮೆರಿಕಾದಲ್ಲಿ ಕೆಲಸ ಮಾಡಲು ಅನುಮತಿಯಂತಹ ವಿಚಾರಗಳನ್ನು ಅಧಿಕಾರದಲ್ಲಿರುವ ಸರ್ಕಾರವೇ ರೂಪಿಸುತ್ತದೆ. ರಾಜಕೀಯ ವಾತಾವರಣದ ಆಧಾರದಲ್ಲಿ, ಇಂತಹ ನಿಯಮಗಳು ಬದಲಾವಣೆ ಹೊಂದಬಲ್ಲವು.
ವಿದೇಶಿಗರ ವಲಸೆಯ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತಹ ಸರ್ಕಾರ ಬಂದರೆ, ಅದು ಕಟ್ಟುನಿಟ್ಟಿನ ವೀಸಾ ನಿಯಮಗಳನ್ನು ಜಾರಿಗೆ ತರಬಹುದು. ಇದು ಅಮೆರಿಕಾದಲ್ಲಿ ಶಿಕ್ಷಣ ಮತ್ತು ಉದ್ಯೋಗ ನಡೆಸುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿಮೆಗೊಳಿಸಬಲ್ಲದು. ಆಪ್ಷನಲ್ ಪ್ರ್ಯಾಕ್ಟಿಕಲ್ ಟ್ರೈನಿಂಗ್ (ಒಪಿಟಿ) ಎಂಬ ಯೋಜನೆ, ಪದವಿ ಪಡೆದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅವರ ಕ್ಷೇತ್ರದಲ್ಲಿ ಮೂರು ವರ್ಷಗಳ ತನಕ ಉದ್ಯೋಗ ನಡೆಸುವ ಅವಕಾಶ ಕಲ್ಪಿಸುತ್ತದೆ. ಆದರೆ, ರಾಜಕೀಯ ಬದಲಾವಣೆಗಳು ಈ ಯೋಜನೆಯ ಮೇಲೂ ಪರಿಣಾಮ ಬೀರಬಹುದು. ಹೊಸ ಕಾನೂನುಗಳು ಈ ಯೋಜನೆಯ ಮೇಲೆ ಮಿತಿ ಹೇರಿದರೆ, ಆಗ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು, ಅದರಲ್ಲೂ ಆರಂಭಿಕ ಔದ್ಯೋಗಿಕ ಅನುಭವಕ್ಕಾಗಿ ಒಪಿಟಿ ಮೇಲೆ ಅವಲಂಬಿತರಾಗಿರುವ ಎಸ್‌ಟಿಇಎಂ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಪಡೆಯುವುದು ಕಷ್ಟಕರವಾಗಲಿದೆ












Click it and Unblock the Notifications