ಉಕ್ರೇನ್ ಸೇನೆಯ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಏಕೆ?
ವಾಷಿಂಗ್ಟನ್: ಉಕ್ರೇನ್‌ಗೆ ನೇರವಾಗಿ ಸಹಾಯ ಮಾಡುತ್ತಿದೆ ಅಮೆರಿಕ. ತನ್ನಲ್ಲಿರುವ ಶಕ್ತಿಶಾಲಿ ಅಸ್ತ್ರಗಳನ್ನು ಉಕ್ರೇನ್‌ಗೆ ಗಿಫ್ಟ್ ಆಗಿ ಕೊಡುತ್ತಿದೆ. ಈಗ ಅಮೆರಿಕದ F16 ಯುದ್ಧ ವಿಮಾನಗಳನ್ನ ಉಕ್ರೇನ್‌ಗೆ ನೀಡಲು ನಿರ್ಧರಿಸಲಾಗಿದೆ. ಆದರೂ F16 ಯುದ್ಧ ವಿಮಾನಗಳ ಹಸ್ತಾಂತರ ಪ್ರಕ್ರಿಯೆ ತಡವಾಗುತ್ತಿದ್ದು, ಉಕ್ರೇನ್ ಸೇನೆ ಕೈಗೆ ಬಂದ ತುತ್ತು ಇದೀಗ ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ.
F16 ಯುದ್ಧ ವಿಮಾನಗಳ ಇತಿಹಾಸ ಬಹುದೊಡ್ಡದು. 1978ರ ಆಗಸ್ಟ್ 17ರಂದು F16 ಯುದ್ಧ ವಿಮಾನಗಳನ್ನ ಅಮೆರಿಕ ಈ ಜಗತ್ತಿಗೆ ಪರಿಚಯಿಸಿತು. ಅಲ್ಲಿಂದ ಸುಮಾರು 45 ವರ್ಷಗಳಿಂದ ಯುದ್ಧ ಭೂಮಿಯಲ್ಲಿ ಆಕಾಶವನ್ನೇ ಆಳುತ್ತಿವೆ F16 ಯುದ್ಧ ವಿಮಾನಗಳು. ಹೀಗಾಗಿ ತನ್ನ ಶತ್ರು ರಷ್ಯಾ ವಿರುದ್ಧ ಪರೋಕ್ಷವಾಗಿ ಇವುಗಳನ್ನ ಬಳಸಲು ಅಮೆರಿಕ ಇದೀಗ ಉಕ್ರೇನ್‌ಗೆ F16 ಯುದ್ಧ ವಿಮಾನಗಳನ್ನ ನೀಡುತ್ತಿದೆ ಎಂಬ ಆರೋಪವಿದೆ. ಅಲ್ಲದೆ ಅಮೆರಿಕದ ಈ ಗಿಫ್ಟ್ ರಷ್ಯಾ & ಉಕ್ರೇನ್ ಯುದ್ಧದಲ್ಲಿ ದೊಡ್ಡ ಸಂಚಲನ ಸೃಷ್ಟಿಸುತ್ತಿದೆ (Russia Ukraine War).

ರಷ್ಯಾ ವಿರುದ್ಧ ಅಮೆರಿಕ ಪರೋಕ್ಷ ಯುದ್ಧ!
ಹೌದು, ಈಗಿನ ಪರಿಸ್ಥಿತಿ ನೋಡಿದರೆ ಇಂತಹ ಒಂದು ಆರೋಪ ನಿಜ ಎನ್ನಬಹುದು. ನೇರವಾಗಿ ರಷ್ಯಾ ವಿರುದ್ಧ ಯುದ್ಧ ಸಾರದೇ ಇದ್ದರೂ ಉಕ್ರೇನ್ ಮೂಲಕ ಅಮೆರಿಕ ತನ್ನ ಸೇಡು ತೀರಿಸಿಕೊಳ್ಳುತ್ತಿದೆ ಎಂಬ ಆರೋಪವಿದೆ. ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಅಮೆರಿಕ ತನ್ನಲ್ಲಿರುವ ಶಕ್ತಿಶಾಲಿ ಅಸ್ತ್ರಗಳನ್ನು ಉಕ್ರೇನ್‌ಗೆ ಗಿಫ್ಟ್ ಆಗಿ ಕೊಡುತ್ತಿದೆ. ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಆರಂಭವಾದ ನಂತರ, ಈವರೆಗೂ ಸುಮಾರು 3 ಲಕ್ಷ ಕೋಟಿ ರೂಪಾಯಿ ಮೊತ್ತದ ಶಸ್ತ್ರಾಸ್ತ್ರ ನೆರವು ನೀಡಿದೆಯಂತೆ ಅಮೆರಿಕ..!
F16 ಯುದ್ಧ ವಿಮಾನಗಳ ಇನ್ನೂ ಲೇಟ್!
ಅಂದಹಾಗೆ ಇದೀಗ ಅಮೆರಿಕ ತನ್ನ F16 ಯುದ್ಧ ವಿಮಾನಗಳನ್ನ ಉಕ್ರೇನ್‌ಗೆ ನೀಡಲು ಒಪ್ಪಿದ್ದರೂ ಅವುಗಳನ್ನು ತಲುಪಿಸಲು ಆಗುತ್ತಿಲ್ಲ. ಏಕೆಂದರೆ F16 ಯುದ್ಧ ವಿಮಾನಗಳನ್ನ ನೀಡಲು ನ್ಯಾಟೋದ ಯಾವುದೇ ರಾಷ್ಟ್ರವು ಕೂಡ ಮುಂದೆ ಬರುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ರಷ್ಯಾ ಹಾಗೂ ಪುಟಿನ್ ಮೇಲೆ ಇರುವ ಭಯ. ಹೀಗಾಗಿ ಅಮೆರಿಕ ಇದರ ಮುಂದಾಳತ್ವ ವಹಿಸಿಕೊಂಡು ಉಕ್ರೇನ್‌ಗೆ ಬೇಕಾದ ಶಸ್ತ್ರಾಸ್ತ್ರ ಕೊಡಲಿ ಎಂಬುದೇ ಯುರೋಪ್‌ನ ಹಾಗೂ ನ್ಯಾಟೋ ಒಕ್ಕೂಟದ ಪ್ರತಿಯೊಂದು ರಾಷ್ಟ್ರದ ಒತ್ತಾಯ. ಹೀಗಾಗಿ ಒಪ್ಪಿಗೆ ಸಿಕ್ಕರೂ ಉಕ್ರೇನ್ ಕೈಗೆ F16 ಯುದ್ಧ ವಿಮಾನಗಳು ಇನ್ನೂ ತಲುಪಿಲ್ಲ.
ಶಕ್ತಿಶಾಲಿ ಮಿಸೈಲ್ ನಾಶಕ ಗಿಫ್ಟ್!
ಅಮೆರಿಕ ಶತ್ರು ರಷ್ಯಾ ಬಗ್ಗುಬಡಿಯಲು ಎಲ್ಲ ಅಸ್ತ್ರ ಪ್ರಯೋಗಿಸುತ್ತಾ ಬಂದಿದೆ. ಅದ್ರಲ್ಲಿ ಪರೋಕ್ಷವಾಗಿ ಉಕ್ರೇನ್‌ಗೆ ಸಹಾಯ ಮಾಡುವ ವಿಧಾನವೂ ಒಂದು. ಹೀಗೆ ಉಕ್ರೇನ್‌ಗೆ ಅಮೆರಿಕ ದಾನ ನೀಡಿದ ಗಿಫ್ಟ್ ಪೈಕಿ 'ಯುಎಸ್-ಮೇಡ್ ಪೇಟ್ರಿಯಾಟ್ ಮಿಸೈಲ್ ಡಿಫೆನ್ಸ್' (US-made Patriot missile defense) ಕೂಡ ಇದೆ. ಅಸ್ತ್ರದ ಮೂಲಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಹೊಂದಬಹುದು & ಶತ್ರುಗಳ ಕ್ಷಿಪಣಿ ಹೊಡೆದು ಹಾಕುವುದು ಕೂಡ ಸುಲಭ. ಇದರ ಸಾಮರ್ಥ್ಯ ಇಡೀ ಜಗತ್ತಿಗೇ ಗೊತ್ತು, ಹೀಗಾಗಿ ಅಮೆರಿಕದ ಅಸ್ತ್ರ ಬಳಸಿ ರಷ್ಯಾಗೆ ಶಾಕ್ ಕೊಡ್ತಿದೆ ಉಕ್ರೇನ್.

ಯುದ್ಧದಿಂದ ಅಮೆರಿಕಗೆ ಲಾಭ ಏನು?
ಅಮೆರಿಕ ಲಾಭ ಇಲ್ಲದೆ ಯಾವುದೇ ಕೆಲಸ ಮಾಡಲ್ಲ ಎನ್ನುವ ಮಾತಿದೆ. ಮಾತಿಗೆ ತಕ್ಕಂತೆ ಇದೀಗ ಉಕ್ರೇನ್‌ನ ಪರವಾಗಿ ನಿಂತಿದೆ ಅಮೆರಿಕ. ಉಕ್ರೇನ್ ಪರ ನಿಂತಿರುವ ಅಮೆರಿಕಗೆ ಇದರಿಂದ ಏನು ಲಾಭ ಎಂದರೆ, ರಷ್ಯಾ ವಿರುದ್ಧ ಪರೋಕ್ಷವಾಗಿ ಸೇಡು ತೀರಿಸಿಕೊಂಡು, ಯುರೋಪ್ ಮೇಲೆ ತಾನು ಹೊಂದಿರುವ ಹಿಡಿತವನ್ನ ಇಡೀ ಜಗತ್ತಿಗೆ ತೋರಿಸುವ ಪ್ರಯತ್ನ ಸಾಗಿದೆ ಎಂಬ ಆರೋಪವಿದೆ. ಆದರೆ ರಷ್ಯಾ ಅಷ್ಟು ಸುಲಭಕ್ಕೆ ತನ್ನ ಸೋಲು ಒಪ್ಪಿಕೊಳ್ಳದೆ ಹೋರಾಡುತ್ತಿರುವುದು ಅಮೆರಿಕದ ನಿದ್ದೆ ಕೆಡಿಸಿದೆ.
ರಷ್ಯಾ ಸೋಲಿಸಲು ಅಮೆರಿಕದ ಕುತಂತ್ರ?
ಉಕ್ರೇನ್‌ಗೆ ಈಗ ಅಮೆರಿಕ ಮಾತ್ರವಲ್ಲ ನ್ಯಾಟೋ ಅಂದ್ರೆ ಯುರೋಪ್‌ನ ಬಹುತೇಕ ರಾಷ್ಟ್ರಗಳು ನೆರವು ನೀಡುತ್ತಿವೆ. ಉಕ್ರೇನ್ ಯುದ್ಧದಲ್ಲಿ ಗೆದ್ರೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಗೆಲುವು ಸಿಗುತ್ತೆ. ಪ್ರಮುಖವಾಗಿ ಯುರೋಪ್‌ನಲ್ಲಿ ಹೊಸ ಯುಗ ಸೃಷ್ಟಿಸಿ ಅಮೆರಿಕದ ಹಿಡಿತ ಬಿಗಿ ಮಾಡುವ ಸಂಭವ ಹೆಚ್ಚಾಗಿರುವ ಕಾರಣ ಉಕ್ರೇನ್ ಗೆಲುವಿಗೆ ಅಮೆರಿಕದ ಜೊತೆ ಬ್ರಿಟನ್ ಹಾಗೂ ಯುರೋಪ್ ಒಕ್ಕೂಟ ಕೂಡ ಬಲವಾಗಿ ನಿಂತಿದೆ. ಅದರಲ್ಲೂ ನ್ಯಾಟೋ ಪಡೆ ಉಕ್ರೇನ್ ಗಡಿಯಲ್ಲಿ ರಹಸ್ಯವಾಗಿ ವಿನಾಶಕಾರಿ ಅಸ್ತ್ರಗಳನ್ನ ನೀಡಿ ಹೋಗುತ್ತಿರುವ ಆರೋಪ ಕೂಡ ಇದೆ.












Click it and Unblock the Notifications