World War: ರಷ್ಯಾ, ಚೀನಾ, ಇರಾನ್‌ಗೆ ‘ದೆವ್ವ’ದ ಪಟ್ಟ ಕೊಟ್ಟ ಅಮೆರಿಕ!
ಅಮೆರಿಕ ಎಂಬ ದೇಶವೇ ಹೀಗೆ ಅವರ ವಿರುದ್ಧವಾಗಿ ಯಾವುದೇ ದೇಶ ಉಸಿರು ಎತ್ತಿದರೂ ಅವರಿಗೆ ಭಯೋತ್ಪಾದಕರ ಪಟ್ಟ ಕಟ್ಟುತ್ತಾರೆ, ಇದು ಅಮೆರಿಕದ ಕುತಂತ್ರದ ಒಂದು ಭಾಗ ಎಂಬ ಆರೋಪ ಇದೆ. ಅದ್ರಲ್ಲೂ ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಅಮೆರಿಕ ಇದೀಗ ಮಾಡುತ್ತಿರುವ ಕೆಲಸ ರಷ್ಯಾ ಅಧ್ಯಕ್ಷರನ್ನ ರೊಚ್ಚಿಗೆಬ್ಬಿಸಿದೆ. ಈ ಹೊತ್ತಲ್ಲೇ ಅಮೆರಿಕ ಈಗ ತನ್ನ ಶತ್ರುಗಳಿಗೆ 'ದೆವ್ವ'ದ ಪಟ್ಟ ಕಟ್ಟಿದೆ!
ಹೌದು, ಉಕ್ರೇನ್ ಯುದ್ಧದಲ್ಲಿ ರಷ್ಯಾ ವಿರುದ್ಧ ಅಮೆರಿಕ ಎಂಟ್ರಿಯಾಗಿದೆ. ಈ ಕಾರಣಕ್ಕೇ ಯುದ್ಧ ಕೂಡ ಭೀಕರವಾಗಿದೆ. ಅದರಲ್ಲೂ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಸೇನೆ ಮತ್ತು ಸರ್ಕಾರಕ್ಕೆ ಅಮೆರಿಕ ವಿನಾಶಕಾರಿ ಅಸ್ತ್ರಗಳನ್ನು ನೀಡಿರುವ ಆರೋಪ ಕೂಡ ಇದೆ. ಇದು ಸಾಲದು ಎಂಬಂತೆ ಇದೀಗ ಇನ್ನೂ ಒಂದು ಗಂಭೀರ ಆರೋಪ ಮಾಡಿದೆ ಅಮೆರಿಕ. ಈ ಮೂಲಕ ಮೊದಲೇ ಧಗಧಗಿಸುತ್ತಿದ್ದ ಜ್ವಾಲೆಗೆ ಪೆಟ್ರೋಲ್ ಸುರಿದಿದೆ ದೊಡ್ಡಣ್ಣ. ಹೀಗೆ ದಿಢೀರ್ ಮತ್ತೆ ಬೆಂಕಿ ಹೊತ್ತಿಕೊಳ್ಳಲು ಕಾರಣಕರ್ತರು ಯಾರು ಗೊತ್ತಾ?

ಅಂದಹಾಗೆ ಅಮೆರಿಕದ ಎದುರಾಳಿಗಳು ಮತ್ತು ಶತ್ರು ದೇಶಗಳನ್ನ ಗುರುತಿಸಲು ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಅವರು 2002ರಲ್ಲಿ ಒಂದು ಪದ ಪ್ರಯೋಗವನ್ನು ಮಾಡಿದ್ದರು. ಅಮೆರಿಕ ಶತ್ರು ದೇಶಗಳನ್ನ 'ಆಕ್ಸಿಸ್ ಆಫ್ ಈವಿಲ್' ('Axis Of Evil') ಎಂದು ಕರೆದಿದ್ದರು. ಜಾರ್ಜ್ ಬುಷ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಂದ್ರೆ, 2002ರ ವೇಳೆ 9/11 ದಾಳಿ ನಡೆದಿತ್ತು. ಈ ಭೀಕರ ದಾಳಿಯ ನಂತರ ಇರಾನ್, ಇರಾಕ್ ಹಾಗೂ ಉತ್ತರ ಕೊರಿಯಾಗೆ 'ಆಕ್ಸಿಸ್ ಆಫ್ ಈವಿಲ್' ಎಂದು ಕರೆಯುವ ಮೂಲಕ ಭಯೋತ್ಪಾದಕ ದೇಶ ಎಂದಿದ್ದರು ಬುಷ್. ಆದರೆ ಈಗ ಬೇರೆ ದೇಶಗಳಿಗೆ ಆ ಹೆಸರನ್ನು ಕೊಟ್ಟಿದ್ದಾರೆ ಅಮೆರಿಕದ ಸಂಸದ!
ಪುಟಿನ್ ಪಿತ್ತ ನೆತ್ತಿಗೇರಿಸಿದ ಮಿಚ್!
ಅಷ್ಟಕ್ಕೂ ಅಮೆರಿಕದ ಅತ್ಯಂತ ಜನಪ್ರಿಯ ನ್ಯೂಸ್ ಚಾನೆಲ್ ಆಗಿರುವ 'ಫಾಕ್ಸ್ ನ್ಯೂಸ್'ಗೆ ನೀಡಿದ ಸಂದರ್ಶನದಲ್ಲಿ ಅಮೆರಿಕ ಸಂಸದ ಮಿಚ್ ಮೆಕ್‌ಕಾನ್ನೆಲ್ ಈ ರೀತಿ ಹೇಳಿಕೆಯನ್ನು ನೀಡಿದ್ದಾರೆ. ಅಮೆರಿಕದ ವಿರುದ್ಧ ಹೊಸ ದುಷ್ಟ ಶಕ್ತಿಗಳ ಕೂಟ ಹುಟ್ಟಿಕೊಂಡಿದ್ದು, ಅವು ರಷ್ಯಾ, ಚೀನಾ ಹಾಗೂ ಇರಾನ್ ಆಗಿವೆ ಎಂದಿದ್ದಾರೆ ಮಿಚ್ ಮೆಕ್‌ಕಾನ್ನೆಲ್. ಅಲ್ಲದೆ ತನ್ನ ದೇಶ ಉಕ್ರೇನ್ ಪರ ನಿಂತಿರುವ ಕಾರಣ ಏನು? ಅಮೆರಿಕ ಯಾಕೆ ಉಕ್ರೇನ್ ಪರ ನಿಲ್ಲಬೇಕು ಎಂಬುದನ್ನ ಹೇಳಿದ್ದಾರೆ. ಹೀಗೆ, ಅಮೆರಿಕ ಸೆನೆಟ್ ನಾಯಕನ ಈ ಹೇಳಿಕೆ ರಷ್ಯಾ ಅಧ್ಯಕ್ಷ ಪುಟಿನ್ ಪಿತ್ತ ನೆತ್ತಿಗೇರಿಸಿದೆ.
4 ಲಕ್ಷ ಕೋಟಿ ರೂಪಾಯಿ ನೆರವು!
ಉಕ್ರೇನ್‌ಗೆ ಒಂದೇ ವರ್ಷದಲ್ಲಿ ಅಮೆರಿಕ ಸರ್ಕಾರ 4 ಲಕ್ಷ ಕೋಟಿ ನೆರವು ನೀಡಿದೆ. ಕೆಲ ತಿಂಗಳ ಹಿಂದೆ ಸಾವಿರಾರು ಕೋಟಿ ಪ್ಯಾಕೇಜ್ ನೀಡಿದ್ದ ಅಮೆರಿಕ, ಈಗ ಹೊಸ ಪ್ಯಾಕೇಜ್ ಘೋಷಿಸಲು ಸಿದ್ಧವಾಗಿದೆ. ಈ ಪ್ಯಾಕೇಜ್‌ನಲ್ಲಿ ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್ ಸೇನೆಗೆ ಅತ್ಯಾಧುನಿಕ ಹತ್ಯಾರ ಸಿಗುವ ನಿರೀಕ್ಷೆ ಇತ್ತು. ಆದರೆ ಅಮೆರಿಕ ಒಳಗಡೆಯೇ ಈ ಬಗ್ಗೆ ಕಿತ್ತಾಟ ಶುರುವಾಗಿದೆ. ಅಲ್ಲದೆ ಉಕ್ರೇನ್‌ಗೆ ನೆರವು ನಿಲ್ಲುವ ಭೀತಿ ಆವರಿಸಿದೆ. ಇದೇ ಸಮಯದಲ್ಲಿ ಅಮೆರಿಕದ ಸನೆಟ್ ಸದಸ್ಯ ಮಿಚ್ ಮೆಕ್‌ಕಾನ್ನೆಲ್, ಹೊಸ ಬಾಂಬ್ ಸಿಡಿಸಿದ್ದಾರೆ.

ಒಟ್ನಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧ ಸದ್ಯಕ್ಕೆ ನಿಲ್ಲುವ ಸಾಧ್ಯತೆ ಕಾಣ್ತಿಲ್ಲ. ಅದ್ರಲ್ಲೂ, ಈ ಯುದ್ಧಕ್ಕೆ ಅಮೆರಿಕ ಮಾಡುತ್ತಿರುವ ಸಹಾಯ ನೋಡಿದರೆ ಇನ್ನೇನು 2ನೇ ವರ್ಷವನ್ನು ಉಕ್ರೇನ್ & ರಷ್ಯಾ ಯುದ್ಧ ಯಶಸ್ವಿಯಾಗಿ ಪೂರೈಸಲಿದೆ. ಹೀಗಾಗಿ ಜಾಗತಿಕ ಸಮುದಾಯ ಈ ವಿಚಾರದಲ್ಲಿ ಒಗ್ಗಟ್ಟಿನಿಂದ ಯುದ್ಧ ನಿಲ್ಲಿಸಲು ಮುಂದಾಗಬೇಕಿದೆ. ಇಲ್ಲವಾದರೆ ಇದೇ ಯುದ್ಧ ಮುಂದೆ 3ನೇ ಮಹಾಯುದ್ಧಕ್ಕೂ ನಾಂದಿ ಹಾಡಿದರೂ ಅಚ್ಚರಿ ಇಲ್ಲ.












Click it and Unblock the Notifications