ಇರಾನ್ ವಿರುದ್ಧ ಅಮೆರಿಕ ಸೇನೆಯ ಅಂತಿಮ ಹಂತದ ಸಿದ್ಧತೆ, ಆತಂಕದ ವಾತಾವರಣ ನಿರ್ಮಾಣ | US Military
ಇರಾನ್ ಹೇಗಾದರೂ ಸರಿ ಅಮೆರಿಕ ಎದುರು ಮಂಡಿಯೂರಬೇಕು ಎಂಬುದು ಟ್ರಂಪ್ ಅವರ ನಿರ್ಧಾರ. ಹೀಗಾಗಿಯೇ ಡೊನಾಲ್ಡ್ ಟ್ರಂಪ್ ಅವರು ಎಲ್ಲಾ ರೀತಿಯ ಅಸ್ತ್ರ ಪ್ರಯೋಗ ಮಾಡುತ್ತಾ, ಎದುರಾಳಿ ಇರಾನ್ ಎದೆಯಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಸಂಧಾನ ಯಶಸ್ವಿಯಾದರೆ ಯುದ್ಧವನ್ನ ತಪ್ಪಿಸುವ ಸಾಧ್ಯತೆ ಇದ್ರೂ, ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ದೊಡ್ಡಣ್ಣ ಅಮೆರಿಕ ಸೇನೆ ಟ್ರಂಪ್ ಅವರ ಆದೇಶ ಹಿನ್ನೆಲೆ ಭಾರಿ ದೊಡ್ಡ ಪ್ರಮಾಣದಲ್ಲೇ ಸೇನೆ ನಿಯೋಜನೆ ಮಾಡುತ್ತಿದೆ. ಇದು ಆತಂಕ ಮತ್ತಷ್ಟು ಹೆಚ್ಚಾಗಿಸಿದ್ದು, ಯುದ್ಧ ಭೀತಿ ಜನರನ್ನು ನಡುಗಿಸುತ್ತಿದೆ.
ಇದೇ ಜನವರಿ ತಿಂಗಳಲ್ಲಿ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಎಚ್ಚರಿಕೆ ನೀಡಿ, ತಕ್ಷಣ ಪರಮಾಣು ಒಪ್ಪಂದಕ್ಕೆ ಇರಾನ್ ಒಪ್ಪದಿದ್ದರೆ 2025ರ ಜೂನ್ ದಾಳಿಗಿಂತ ಹೆಚ್ಚು ಕಠಿಣ ದಾಳಿ ಗ್ಯಾರಂಟಿ ಎಂದಿದ್ದರು. ಈ ಬೆಳವಣಿಗೆ ನಂತರ, ವೇಗ ಮತ್ತು ಬಲದಿಂದ ಕಾರ್ಯನಿರ್ವಹಿಸುವ ಭಾರಿ ನೌಕಾಪಡೆ ಇರಾನ್ ಕಡೆಗೆ ಸಾಗುತ್ತಿದೆ ಎಂದು ವಾರ್ನಿಂಗ್ ಕೊಟ್ಟಿದ್ದರು. ಆ ನಂತರ ಇನ್ನಷ್ಟು ಸೇನೆ ಇರಾನ್ ಬಳಿ ನಿಯೋಜನೆ ಆಗಿದ್ದು, ಯಾವುದೇ ಕ್ಷಣದಲ್ಲಿ ಎಡವಟ್ಟು ಎದುರಾಗುವ ಸಂಭವ ಕೂಡ ಹೆಚ್ಚಾಗಿದೆ. ಅದರಲ್ಲೂ ಈ ಭಾಗದಲ್ಲಿ ಅಮೆರಿಕ ಸೇನಾ ನೆಲೆಗಳು ದೊಡ್ಡ ಪ್ರಮಾಣದಲ್ಲಿ ಇರುವ ಕಾರಣಕ್ಕೆ, ಇರಾನ್ ಕೂಡ ಒಂದು ಹಂತದಲ್ಲಿ ಭಯಪಡುತ್ತಿದೆ.

ಮಧ್ಯಪ್ರಾಚ್ಯದಲ್ಲಿ 40,000 ಅಮೆರಿಕ ಸೈನಿಕರು
ಒಂದು ಅಂದಾಜಿನ ಪ್ರಕಾರ ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ ಸೇನೆಯ ಸುಮಾರು 40,000 ಸೈನಿಕರು ನೆಲೆಸಿದ್ದಾರೆ. ಗಲ್ಫ್ ಪ್ರದೇಶವು ಅಮೆರಿಕ ಸೆಂಟ್ರಲ್ ಕಮಾಂಡ್ ವ್ಯಾಪ್ತಿಗೆ ಬರುತ್ತದೆ. ಸೌದಿ ಅರೇಬಿಯಾ, ಯುಎಇ, ಬಹ್ರೇನ್, ಕುವೈತ್, ಓಮನ್ & ಖತಾರ್ ಸೇರಿ ಹಲವು ದೇಶಗಳಲ್ಲಿ ಅಮೆರಿಕ ತನ್ನ ಸೇನಾ ನೆಲೆ ಹೊಂದಿದ್ದು, ಇಲ್ಲಿ ಎಲ್ಲಾ ಲೆಕ್ಕ ಹಾಕಿದರೆ ಸುಮಾರು 40,000 ಅಮೆರಿಕ ಸೈನಿಕರು ಇದ್ದಾರೆ. ಹೀಗಾಗಿ ಇರಾನ್ ವಿರುದ್ಧ ಯುದ್ಧ ಆರಂಭವಾದರೆ ತಕ್ಷಣ ಅವರನ್ನೆಲ್ಲಾ ಯುದ್ಧಕ್ಕೆ ಬಳಸಿಕೊಳ್ಳಲು ಕೂಡ ಅಮೆರಿಕ ಪ್ಲಾನ್ ಮಾಡಿದೆ ಎನ್ನಲಾಗಿದೆ.
800 ಯುದ್ಧ ವಿಮಾನಗಳ ಶಕ್ತಿ
ಮತ್ತೊಂದು ಕಡೆ ಇದೀಗ ಇರಾನ್ ಸಮೀಪಕ್ಕೆ ಅಮೆರಿಕ ಸೇನೆಯ ಬೃಹತ್ ಯುದ್ಧ ನೌಕೆ ಆಗಿರುವ ಯುಎಸ್‌ಎಸ್ ಅಬ್ರಹಾಂ ಲಿಂಕನ್ ತೆರಳಿದ್ದು, ಇದರ ಜೊತೆಗೆ ಫೋರ್ಡ್ ಎಂಬ ಮತ್ತೊಂದು ನೌಕೆ ಕೂಡ ಸಮೀಪಕ್ಕೆ ಸಾಗುತ್ತಿದೆ. ಈ ಮೂಲಕ ಪ್ರಸ್ತುತ ವಾತಾವರಣ ಹಾಗೇ ಈ ಪ್ರದೇಶದಲ್ಲಿ ಇರುವ ಒಟ್ಟು 8 ವಾಯುನೆಲೆಗಳ ಬೆಂಬಲ ಮೂಲಕ ಅಮೆರಿಕ ಸೇನೆ ಪ್ರತಿ ದಿನಕ್ಕೆ ಸುಮಾರು 800 ಯುದ್ಧ ವಿಮಾನಗಳ ಹಾರಾಟ ನಡೆಸುವ ಶಕ್ತಿ ಪಡೆದಿದೆ ಎಂಬುದು ತಜ್ಞರ ಮಾಹಿತಿ. ಇಷ್ಟೂ ಶಕ್ತಿ ಸೇರಿದರೆ, ಒಂದು ಇರಾನ್ ಎದುರಿಸುವುದು ಯಾವ ಲೆಕ್ಕ? ಎಂಬ ಚರ್ಚೆ ಶುರುವಾಗಿದೆ ಈಗ. ಅಲ್ಲದೆ ಇರಾನ್ ಕೂಡ ಈ ಹಂತದಲ್ಲಿ ಅಮೆರಿಕ ಸೇನಾ ದಾಳಿ ಎದುರಿಸಲು ಸಜ್ಜಾಗಿದ್ದು, ಇಬ್ಬರ ಮಧ್ಯೆ ಪರಮಾಣು ಯುದ್ಧ ಭೀತಿ ಆವರಿಸಿದೆ.












Click it and Unblock the Notifications